ಬೆಂಗಳೂರು [ಜು.16] :  ರಾಜೀನಾಮೆ ನೀಡಿರುವ ಆಡಳಿತಾರೂಢ ಪಕ್ಷಗಳ ಶಾಸಕರು ತಮ್ಮ ನಿಲುವಿಗೆ ಅಂಟಿಕೊಂಡಿರುವುದು ಮನವರಿಕೆಯಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಳ್ಳುವುದು ನಿಶ್ಚಿತ ಎಂಬ ನಿರೀಕ್ಷೆಯಲ್ಲಿರುವ ಪ್ರತಿಪಕ್ಷ ಬಿಜೆಪಿ, ಪರ್ಯಾಯ ಸರ್ಕಾರ ರಚನೆ ಸಿದ್ಧತೆಯಲ್ಲಿ ತೊಡಗಿದೆ.

ಗುರುವಾರ ವಿಶ್ವಾಸಮತ ಯಾಚನೆ ನಿರ್ಣಯದಲ್ಲಿ ಸರ್ಕಾರಕ್ಕೆ ಸೋಲುಂಟಾಗಲಿದೆ ಎಂಬುದರ ಬಗ್ಗೆ ಅಪಾರ ವಿಶ್ವಾಸ ಹೊಂದಿರುವ ಬಿಜೆಪಿ ನಾಯಕರು ಹೊಸ ಸರ್ಕಾರ ರಚನೆಯ ಸಂಭ್ರಮದಲ್ಲಿದ್ದಾರೆ. ನೂತನ ಮುಖ್ಯಮಂತ್ರಿಯಾಗಿ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ಯಾವಾಗ ಪ್ರಮಾಣ ಸ್ವೀಕರಿಸಬೇಕು ಎಂಬುದರ ಬಗ್ಗೆ ಅವರ ಬೆಂಬಲಿಗರು ತೆರೆಮರೆಯ ಸಿದ್ಧತೆಗಳನ್ನು ಮಾಡತೊಡಗಿದ್ದಾರೆ ಎಂದು ತಿಳಿದು ಬಂದಿದೆ.

ವಿಶ್ವಾಸಮತ ಯಾಚನೆಯ ಬೆಳವಣಿಗೆ ಮುಗಿಯುತ್ತಿದ್ದಂತೆಯೇ ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಿ ಮುಂದಿನ ಪ್ರಕ್ರಿಯೆಗಳ ರೂಪರೇಷೆ ಸಿದ್ಧಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅತೃಪ್ತ ಶಾಸಕರ ಪೈಕಿ ಕೆಲವರು ಹಿಂದೆ ಸರಿಯುವ ಬಗ್ಗೆ ಭಾನುವಾರದವರೆಗೆ ಬಿಜೆಪಿ ಪಾಳೆಯದಲ್ಲಿ ಸಣ್ಣ ಅನುಮಾನ ಇತ್ತು. ಸಚಿವ ಎಂ.ಟಿ.ಬಿ.ನಾಗರಾಜ್‌ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರಿಂದ ಇತರ ಶಾಸಕರೂ ವಾಪಸ್‌ ಬಂದು ಸರ್ಕಾರ ಪತನಗೊಳ್ಳುವ ನಿರೀಕ್ಷೆ ಹುಸಿಯಾಗಬಹುದು ಎಂಬ ಅಭಿಪ್ರಾಯ ಕಂಡುಬಂದಿತ್ತು. ಆದರೆ, ಭಾನುವಾರ ಮಧ್ಯಾಹ್ನ ಎಂ.ಟಿ.ಬಿ.ನಾಗರಾಜ್‌ ಅವರು ಮುಂಬೈಗೆ ಸೇರಿದ್ದರಿಂದ ಮತ್ತು ಸಂಜೆ ಅಲ್ಲಿರುವ ಇತರ ಅತೃಪ್ತ ಶಾಸಕರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ನಿಲುವು ಅಚಲ ಎಂದು ಪ್ರಕಟಿಸುತ್ತಿದ್ದಂತೆಯೇ ಬಿಜೆಪಿ ಪಾಳೆಯದಲ್ಲಿ ಗೆಲುವಿನ ಸಂಭ್ರಮ ಕಂಡುಬಂದಿತು.

ಇದರ ನಡುವೆಯೂ ಗುರುವಾರ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಯುವವರೆಗೆ ತೀರಾ ಸಂಭ್ರಮಾಚರಣೆಯ ವಾತಾವರಣ ಕಾಣುವುದು ಬೇಡ. ಕೊನೆಯ ಕ್ಷಣದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಉಂಟಾದಲ್ಲಿ ಪಕ್ಷಕ್ಕೆ ಭಾರಿ ಮುಜುಗರ ಮತ್ತು ಮುಖಭಂಗ ಉಂಟಾಗಬಹುದು. ವಿಶ್ವಾಸಮತ ಯಾಚನೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸೋಲುಂಟಾದ ನಂತರವೇ ಸಂಭ್ರಮವನ್ನು ಬಹಿರಂಗವಾಗಿ ಪ್ರದರ್ಶಿಸಬೇಕು. ಅಲ್ಲಿವರೆಗೆ ತಾಳ್ಮೆ ಕಾದುಕೊಳ್ಳಬೇಕು ಎಂಬ ಕಿವಿಮಾತನ್ನು ಪಕ್ಷದ ಹಿರಿಯ ನಾಯಕರು ಶಾಸಕರಿಗೆ ನೀಡಿದ್ದಾರೆ ಎನ್ನಲಾಗಿದೆ.

ಸೋಮವಾರವೇ ಅವಿಶ್ವಾಸ ಗೊತ್ತುವಳಿಯನ್ನು ವಿಧಾನಸಭೆ ಕಾರ‍್ಯದರ್ಶಿಗೆ ನೀಡಿ ಇಂದೇ ಚರ್ಚೆಗೆ ಕೋರಿದೆವು. ಆದರೆ, ಸ್ಪೀಕರ್‌ ನೇತೃತ್ವದ ಸದನ ಸಲಹಾ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿಗಳು ಗುರುವಾರ ವಿಶ್ವಾಸಮತ ಯಾಚನೆಗೆ ಕೋರಿದರು. ಸ್ಪೀಕರ್‌ ಕೂಡ ಅಂದಿಗೇ ಸಮಯ ನಿಗದಿಪಡಿಸಿದ್ದು, ನಾವೂ ಅದನ್ನು ಒಪ್ಪಿದ್ದೇವೆ.

- ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ