ಇಂಧನ ಸಚಿವ ಡಿ.ಕೆ ಶಿವಕುಮಾರ್ ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಇದ್ಕೆ ಕಾರಣ ಡಿ.ಕೆ  ಶಿವಕುಮಾರ್ ಮನೆಗಳ ನಡೆಸಿದ ಐಟಿ ರೇಡ್.  ಹೌದು  ಗುಜರಾತ್ ಕಾಂಗ್ರೆಸ್ ಶಾಸಕರಿಗೆ ರೆಸಾರ್ಟ್‌ನಲ್ಲಿ ನೀಡುತ್ತಿರುವ ಆತಿಥ್ಯ. ಜೊತೆಗೆ ರಾಜ್ಯದ ಪ್ರಭಾವಿ ಸಚಿವರೂ ಕೂಡ ಹೌದು.

ಬೆಂಗಳೂರು(ಅ. 03): ಇಂಧನ ಸಚಿವ ಡಿ.ಕೆ ಶಿವಕುಮಾರ್ ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಇದ್ಕೆ ಕಾರಣ ಡಿ.ಕೆ ಶಿವಕುಮಾರ್ ಮನೆಗಳ ನಡೆಸಿದ ಐಟಿ ರೇಡ್. ಹೌದು ಗುಜರಾತ್ ಕಾಂಗ್ರೆಸ್ ಶಾಸಕರಿಗೆ ರೆಸಾರ್ಟ್‌ನಲ್ಲಿ ನೀಡುತ್ತಿರುವ ಆತಿಥ್ಯ. ಜೊತೆಗೆ ರಾಜ್ಯದ ಪ್ರಭಾವಿ ಸಚಿವರೂ ಕೂಡ ಹೌದು.

ಡಿಕೆ ಶಿವಕುಮಾರ್ ಹಿನ್ನೆಲೆ

ಡಿಕೆಶಿ ಪೂರ್ಣ ಹೆಸರು ದೊಡ್ಡ ಆಲದಹಳ್ಳಿ ಕೆಂಪೇಗೌಡ ಶಿವಕುಮಾರ್. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲದಹಳ್ಳಿ ಜಮೀನ್ದಾರರ ಕುಟುಂಬದಲ್ಲಿ ಜನಿಸಿದರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಶಿವಕುಮಾರ್ ಮುಂದಿನ‌ ವಿದ್ಯಾಭ್ಯಾಸಕ್ಕೆ ಬೆಂಗಳೂರು ಸೇರಿದವರು.

ಡಿಕೆಶಿ ರಾಜಕೀಯ ಪ್ರವೇಶ

ಚಿಕ್ಕ ವಯಸ್ಸಿನಲ್ಲೇ ನಾಯಕತ್ವದ ಗುಣ ಹೊಂದಿದ್ದ ಡಿ.ಕೆ. ಶಿವಕುಮಾರ್ ರಾಜಕೀಯ ಪ್ರವೇಶಿಸಿದ್ದು ಎನ್ ಎಸ್ ಯುಐ ಮೂಲಕ. ಬೆಂಗಳೂರಿನ ಆರ್. ಸಿ. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಟನೆಯ ಮೂಲಕ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು. ಬಳಿಕ 1983 ರಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಡಿಕೆಶಿ, ಬೆಂಗಳೂರು ಜಿಲ್ಲಾ ಪರಿಷತ್ ಕಾರ್ಯ ನಿರ್ವಹಿಸಿದ್ದರು.

ತಮ್ಮ ಮೊದಲ ಚುನಾವಣೆ ಎದುರಿಸುವ ಸಮಯದಲ್ಲಿ ಡಿ.ಕೆ. ಶಿವಕುಮಾರ್ ವಯಸ್ಸು 25. ಸಾತನೂರಿನಿಂದ ಮೊದಲ ಬಾರಿ ಚುನಾವಣೆಯಲ್ಲಿ ಸ್ಫರ್ಧೆಗಿಳಿದಾಗ ಎದುರಾಳಿಯಾಗಿದ್ದವರು ಭಾರತದ ಮಾಜಿ ಪ್ರಧಾನಮಂತ್ರಿ ಹೆಚ್. ಡಿ. ದೇವೇಗೌಡ. ಅಂದು‌ ಮೊದಲ ಸೋತರೂ ಮುಂದೆ ರಾಜಕೀಯದಲ್ಲಿ ಬೆಳೆದು ನಿಲ್ಲುವ ಭರವಸೆ ಆಗಲೇ ಮೂಡಿತ್ತು.

ಸಾತನೂರಿನಿಂದ ರಾಜಕೀಯ ಜೀವನ

ತಮ್ಮ 30ವಯಸ್ಸಿನಲ್ಲಿ ಅಂದ್ರೆ 1989ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾತನೂರಿನಿಂದ ಕಣಕ್ಕಿಳಿದ ಶಿವಕುಮಾರ್ ಒಂದೇ ವರ್ಷದಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಸಚಿವ ಸಂಪುಟದಲ್ಲಿ ಬಂಧೀಖಾನೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಸಾತನೂರು ಕ್ಷೇತ್ರ ಮರೆಯಾದಾಗ ಕನಕಪುರ ಕ್ಷೇತ್ರದಿಂದ ಶಾಸಕರಾಗಿ ಸತತವಾಗಿ ವಿಧಾನಸಭೆ ಪ್ರವೇಶಿಸುತ್ತಲೆ ಬಂದಿದ್ದಾರೆ. 1999ರಲ್ಲಿ ಎಸ್. ಎಂ. ಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೇರಿದಾಗ ಸಹಕಾರ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಶ್ಯಾಡೋ ಸಿಎಂ ಎಂದೇ ಪ್ರಚಲಿತವಿತ್ತು.

2004ರಲ್ಲಿ ರಾಜ್ಯದಲ್ಲಿ ಧರ್ಮಸಿಂಗ್ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗ ಡಿ.ಕೆ. ಶಿವಕುಮಾರ್ ಸೇರ್ಪಡೆಗೆ ದೇವೇಗೌಡರಿಂದ ಪ್ರಬಲ ವಿರೋಧ ವ್ಯಕ್ತವಾಯಿತು. ಹಾಗಾಗಿ ಸಚಿವ ಸ್ಥಾನ ತಪ್ಪಿಸಿಕೊಂಡ ಡಿಕೆಶಿ ಸುಮಾರು 10 ವರ್ಷಗಳ ಕಾಲ ಅಧಿಕಾರದಿಂದ ದೂರವೇ ಉಳಿಯಬೇಕಾಯ್ತು. ಆರ್.ವಿ. ದೇಶಪಾಂಡೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಾರ್ಯಾಧ್ಯಕ್ಷರಾಗಿದ್ದ ಡಿಕೆಶಿ, ಈವೆರೆಗೂ ಕೆಪಿಸಿಸಿ‌ ಅಧ್ಯಕ್ಷ ಸ್ಥಾನಕ್ಕೆ ಸತತ ಪ್ರಯತ್ನ ನಡೆಸಿದರೂ ಸಫಲವಾಗಿಲ್ಲ.

ಇನ್ನು 2013ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಾಗ ಕೂಡಾ ಆರಂಭದಲ್ಲಿ ಸಂಪುಟ ಸೇರ್ಪಡೆಗೆ ಅವಕಾಶವಾಗಲೇ ಇಲ್ಲ. ಆರು ತಿಂಗಳ ಬಳಿಕ ಹೈಕಮಾಂಡ್ ಆದೇಶದ ಮೇಲೆ ಸಚಿವರಾದ ಶಿವಕುಮಾರ್, ಅತ್ತ ತಮ್ಮ ತಂದೆಯ ಶವ ಸಂಸ್ಕಾರ ನೆರವೇರಿಸಿ ರಾಜಭವನಕ್ಕೆ ಬಂದು ಪ್ರಮಾಣ ವಚನ ಸ್ವೀಕರಿಸಿದ್ದರು.

ಇಂದು ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಆತಿಥ್ಯ ವಹಿಸಿರುವ ಕಾರಣಕ್ಕೆ ಐಟಿ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಆದರೆ ಈ ಹಿಂದೆ ರಾಜ್ಯದಲ್ಲಿ ಎಸ್. ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ಮಹಾರಾಷ್ಟ್ರದಲ್ಲಿ ದಿ. ವಿಲಾಸ್ ರಾವ್ ದೇಶಮುಖ್ ಸರ್ಕಾರವಿತ್ತು. ಆ ವೇಳೆ ಬಹುಮತ ಸಾಬೀತು ಪಡಿಸುವ ವೇಳೆ ಶಾಸಕರನ್ನು ಉಳಿಸಿಕೊಳ್ಳಲು ದೇಶಮುಖ್ ಕೃಷ್ಣ ಸಹಾಯ ಕೋರಿದ್ದಾಗ ಕೃಷ್ಣ ಸಂಪುಟ ಸದಸ್ಯರಾಗಿದ್ದ ಶಿವಕುಮಾರ್ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕರೆತಂದು ರೆಸಾರ್ಟ್ ನಲ್ಲಿ ಉಳಿಸಿಕೊಂಡು‌ ವಾಪಸ್ ಕಳುಹಿಸಿದ್ದರು. ಅಂದು ವಿಲಾಸರಾವ್ ದೇಶಮುಖ್ ಸರ್ಕಾರ ವಿಶ್ವಾಸಮತವನ್ನು ಗೆದ್ದಿತ್ತು ಕೂಡಾ.

ಒಟ್ಟಾರೆ, ಐಟಿ ದಾಳಿ ನಡೆದ ಸಮಯ , ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಆತಿಥ್ಯ, ರಾಜ್ಯಸಭಾ ಚುನಾವಣೆ ಎಲ್ಲವೂ ಏಕಕಾಲದಲ್ಲೇ ನಡೆದಿರುವುದರಿಂದ ಡಿ.ಕೆ. ಶಿವಕುಮಾರ್ ವರ್ಚಸ್ಸಿನಲ್ಲಿ ಕೊಂಚ ಬದಲಾವಣೆಯಾದಂತಾಗಿದ್ದು ಹೈಕಮಾಂಡ್ ಗೆ ತೋರಿದ ನಿಷ್ಠತನ ಎಐಸಿಸಿಗೆ ಇನ್ನಷ್ಟು ಹತ್ತಿರವಾಗಿಸಿದೆ. ಎಸ್. ಎಂ. ಕೃಷ್ಣ ನಂತರದ ಕಾಂಗ್ರೆಸ್ ನಲ್ಲಿನ ಒಕ್ಕಲಿಗ ನಾಯಕನಾಗಿರುವ ಡಿ.ಕೆ. ಶಿವಕುಮಾರ್ ಗೆ ಐಟಿ‌ ದಾಳಿ ಲಾಭ ಮತ್ತು ನಷ್ಟ ಎರಡನ್ನೂ ತಂದುಕೊಟ್ಟಿದೆ.

ವರದಿ: ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್.