ಉದ್ಯಮಿ ಗಂಗಾಧರ್‌ ನೋಟು ಬದಲಾಯಿಸಲು ನಿರ್ಧರಿಸಿದ್ದರು. ಇದಕ್ಕಾಗಿ ಅಡ್ಡ ಮಾರ್ಗ ಹುಡುಕುತ್ತಿದ್ದರು. ಕಲಾಸಿಪಾಳ್ಯ ಪೊಲೀಸರಿಗೆ ಮಾಹಿತಿ ದಾರರಾಗಿದ್ದ ಜಾಫರ್‌ ಮತ್ತು ಭಾಸ್ಕರ್‌'ಗೆ ಈ ವಿಚಾರ ತಿಳಿದು ಗಂಗಾಧರ್‌'ರನ್ನು ಸಂಪರ್ಕಿಸಿದ್ದರು. ಕಮಿಷನ್‌ ನೀಡಿದರೆ ಹೊಸ ನೋಟು ಕೊಡಲು ನಮ್ಮ ಬಳಿ ಜನರಿದ್ದಾರೆ ಎಂದಿದ್ದರು.
ಕನ್ನಡಪ್ರಭ ವಾರ್ತೆ, ಬೆಂಗಳೂರು: ಅಮಾನ್ಯಗೊಂಡ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸುವ ಸೋಗಿನಲ್ಲಿ ಇಬ್ಬರು ಮಾಹಿತಿದಾರರು ಹಾಗೂ ಐವರು ಪೊಲೀಸರು ಸೇರಿ 7 ಮಂದಿಯ ತಂಡ ಉದ್ಯಮಿ ಮನೆಯಲ್ಲಿ 35 ಲಕ್ಷ ರೂ. ದರೋಡೆ ಮಾಡಿರುವ ಘಟನೆ ಜರುಗಿದೆ.
ಪೀಣ್ಯದ ನೆಲಗೆದರನಹಳ್ಳಿ ನಿವಾಸಿ ಉದ್ಯಮಿ ಗಂಗಾಧರ್ ಎಂಬುವರ ಮನೆಯಲ್ಲಿ ನ.22ರಂದು ಹಣ ದರೋಡೆ ಮಾಡಲಾಗಿದೆ. ಇವರು ನೀಡಿದ ದೂರಿನ ಮೇರೆಗೆ ಕಲಾಸಿಪಾಳ್ಯ ಠಾಣೆಯ ಸಬ್ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್, ಕಾನ್ಸ್ಟೆಬಲ್ಗಳಾದ ಗಿರೀಶ್, ಮಂಜುನಾಥ್, ಚಂದ್ರಶೇಖರ್, ಅನಂತರಾಜು ಹಾಗೂ ಪೊಲೀಸ್ ಮಾಹಿತಿದಾರರಾದ ಜಾಫರ್ ಮತ್ತು ಭಾಸ್ಕರ್ ಎಂಬುವರನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 16 ಲಕ್ಷ ರೂ. ಜಪ್ತಿ ಮಾಡಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಲಾಬೂರಾಮ್ ತಿಳಿಸಿದ್ದಾರೆ.
ಮಂಗಳವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಪಿಎಸ್ಐ ಹಾಗೂ ನಾಲ್ವರು ಕಾನ್ಸ್ಟೆಬಲ್ಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಾಹಿತಿದಾರರಾದ ಭಾಸ್ಕರ್ ಮತ್ತು ಜಾಫರ್ ಎಂಬುವರನ್ನು ವಶಕ್ಕೆ ಪಡೆದಿರುವ ಪೊಲೀಸರು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಘಟನೆ ವಿವರ: 500, 1000 ರೂ. ಮುಖಬೆಲೆಯ ನೋಟು ಅಮಾನ್ಯ ಆದೇಶ ಹೊರಬಿದ್ದ ಹಿನ್ನೆಲೆಯಲ್ಲಿ ಗಂಗಾಧರ್ ತಮ್ಮಲ್ಲಿದ್ದ ಹಣವನ್ನು ಹೊಸ ನೋಟುಗಳಿಗೆ ಬದಲಾಯಿಸಲು ನಿರ್ಧರಿಸಿದ್ದರು. ಇದಕ್ಕಾಗಿ ಅಡ್ಡ ಮಾರ್ಗ ಹುಡುಕುತ್ತಿದ್ದರು. ಕಲಾಸಿಪಾಳ್ಯ ಪೊಲೀಸರಿಗೆ ಮಾಹಿತಿದಾರರಾಗಿದ್ದ ಜಾಫರ್ ಮತ್ತು ಭಾಸ್ಕರ್ಗೆ ಈ ವಿಚಾರ ತಿಳಿದು ಗಂಗಾಧರ್'ರನ್ನು ಸಂಪರ್ಕಿಸಿದ್ದರು. ಕಮಿಷನ್ ನೀಡುವುದಾದರೆ ಹೊಸ ನೋಟು ಕೊಡಲು ನಮ್ಮ ಬಳಿ ಜನರಿದ್ದಾರೆ ಎಂದಿದ್ದರು. ಇದಕ್ಕೆ ಗಂಗಾಧರ್ ಕೂಡ ಒಪ್ಪಿಗೆ ಸೂಚಿಸಿದ್ದರು.
ಅದರಂತೆ ಜಾಫರ್ ಮತ್ತು ಭಾಸ್ಕರ್ ನ.22ರಂದು ಮಫ್ತಿಯಲ್ಲಿದ್ದ ಪಿಎಸ್ಐ ಮಲ್ಲಿಕಾರ್ಜುನ್ರನ್ನು ಗಂಗಾಧರ್ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮಲ್ಲಿಕಾರ್ಜುನ್ ಇಲಾಖೆಯ ಗುರುತಿನ ಚೀಟಿ, ಸರ್ವಿಸ್ ರಿವಾಲ್ವರ್ ಹಾಗೂ ಕೈಕೋಳ ತೋರಿಸಿ ಹೆದರಿಸಿದ್ದಾರೆ. ಜತೆಗೆ ಕಪ್ಪು ಹಣ ಸಂಗ್ರಹಿಸಿದ್ದೀರಿ ಎಂದು ಬೆದರಿಸಿದ್ದಾರೆ. ಅಷ್ಟರಲ್ಲಿ ನಾಲ್ವರು ಕಾನ್ಸ್ಟೇಬಲ್ ಮನೆಯೊಳಗೆ ಪ್ರವೇಶಿಸಿ .43.50 ಲಕ್ಷ ಪೈಕಿ .35 ಲಕ್ಷವನ್ನು ಬ್ಯಾಗಿಗೆ ತುಂಬಿಕೊಂಡು ಪರಾರಿಯಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ದೂರು ನೀಡಲು ಹಿಂದೇಟು: ಗಂಗಾಧರ್ ಹಣ ಕಳೆದುಕೊಂಡ ಮೇಲೆ ಪೊಲೀಸರ ವಿರುದ್ಧ ದೂರು ನೀಡಲು ಆರಂಭದಲ್ಲಿ ಹೆದರಿದ್ದರು. ಈ ನಡುವೆ ನಗರದಲ್ಲಿ ನಡೆದ ಇದೇ ಮಾದರಿ ಪ್ರಕರಣಗಳಲ್ಲಿ ಪೊಲೀಸರ ವಿರುದ್ಧ ದೂರು ದಾಖಲಾದ ಬಗ್ಗೆ ಮಾಹಿತಿ ಪಡೆದು ಸ್ನೇಹಿತರ ಸಲಹೆಯಂತೆ ಡಿ.4ರಂದು ಘಟನೆ ಸಂಬಂಧ ದೂರು ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಜಾಫರ್ ಬಾಯ್ಬಿಟ್ಟ ಸತ್ಯ: ದೂರುದಾರ ಗಂಗಾಧರ್ ನೀಡಿದ ಮಾಹಿತಿ ಆಧರಿಸಿ ಮೊದಲಿಗೆ ಜಾಫರ್ ಮತ್ತು ಭಾಸ್ಕರ್ನನ್ನು ಬಂಧಿಸಲಾಯಿತು. ಬಳಿಕ ಈ ಇಬ್ಬರು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಮಲ್ಲಿಕಾರ್ಜುನ್ ಹಾಗೂ ನಾಲ್ವರು ಕಾನ್ಸ್'ಟೆಬಲ್'ಗಳನ್ನು ಬಂಧಿಸಿ 16 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಸದ್ಯ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಾಫರ್ ಮತ್ತು ಭಾಸ್ಕರ್ನನ್ನು ಮೂರು ದಿನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಎಸ್'ಐ, ನಾಲ್ವರು ಕಾನ್ಸ್'ಟೆಬಲ್'ಗಳ ಬಂಧನದ ಬಳಿಕ ಸೇವೆಯಿಂದ ಅಮಾನತು ಮಾಡಲಾಗಿದೆ.
ಮಾಹಿತಿದಾರರಾಗಿದ್ದರು: ಜಾಫರ್ ಮತ್ತು ಭಾಸ್ಕರ್ ಕಲಾಸಿಪಾಳ್ಯ ಪೊಲೀಸರಿಗೆ ಮಾಹಿತಿದಾರರಾಗಿದ್ದರು. ಇದೀಗ ಗಂಗಾಧರ್ ಬಳಿ ಹಣ ಇರುವ ಮಾಹಿತಿ ಸಂಗ್ರಹಿಸಿ ಹೊಸ ನೋಟಿಗೆ ಬದಲಾಯಿಸುವ ಸಂಚು ರೂಪಿಸಿ ಪೊಲೀಸರ ಜೊತೆಗೆ ಸೇರಿ ದರೋಡೆ ಮಾಡಿದ್ದಾರೆ. ಈ ಇಬ್ಬರು ಪೊಲೀಸರ ಸೋಗಿನಲ್ಲಿ ನಾನಾ ಕೃತ್ಯ ಎಸಗಿರುವ ಸಂಭವವಿದೆ. ಹೀಗಾಗಿ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಹಾಗೂ ದರೋಡೆ ಹಣದ ಪೈಕಿ 19 ಲಕ್ಷ ರೂ. ಹಣವನ್ನು ಬೇರೆಡೆ ಇರಿಸಿರುವ ಶಂಕೆಯಿದೆ. ಹಾಗಾಗಿ ಇವೆಲ್ಲದರ ಬಗ್ಗೆ ಮಾಹಿತಿ ಸಂಗ್ರಹಿಸಲು ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪೊಲೀಸರೇ ಭಾಗಿ!: ನಿವೃತ್ತ ಡಿವೈಎಸ್ಪಿ ಬಾಬು ನರೋನಾ ನೇತೃತ್ವದ ತಂಡ ಸಿಸಿಬಿ ಪೊಲೀಸರ ಸೋಗಿನಲ್ಲಿ ನ.23ರಂದು ಜೆ.ಪಿ.ನಗರ ಉದ್ಯಮಿ ಸತೀಶ್ ಎಂಬುವರನ್ನು ಅಪಹರಿಸಿ 83 ರೂ. ಲಕ್ಷ ದರೋಡೆ ಮಾಡಿದ್ದರು. ಮಾಗಡಿ ರಸ್ತೆ ಠಾಣೆ ವ್ಯಾಪ್ತಿಯಲ್ಲಿ ಸಿಸಿಬಿ ಕಾನ್ಸ್ಟೆಬಲ್ ಸೇರಿ ಐವರ ತಂಡ ಎಲೆಕ್ಟ್ರಾನಿಕ್ಸ್ ಮಳಿಗೆ ಮಾಲೀಕನಿಂದ ನ.26ರಂದು 21.50 ಲಕ್ಷ ರೂ. ದೋಚಿದ್ದರು. ಡಿ.3ರಂದು ಗಿರಿನಗರ ಠಾಣೆಯ ಇಬ್ಬರು ಕಾನ್ಸ್ ಟೆಬಲ್ ನೇತೃತ್ವದ ತಂಡ ವಕೀಲರೊಬ್ಬರಿಂದ 8 ಲಕ್ಷ ರೂ. ದೋಚಿದ್ದ ಘಟನೆಯನ್ನು ಇಲ್ಲಿ ಸ್ಮರಿಸಬಹುದು.
ಮೇಲಧಿಕಾರಿ ಸೂಚನೆ?: ದರೋಡೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಪಿಎಸ್ಐ ಮಲ್ಲಿಕಾರ್ಜುನ್ಗೆ ಇಲಾಖೆಯಲ್ಲಿ ಉತ್ತಮ ಹೆಸರಿದೆ ಎನ್ನಲಾಗಿದೆ. ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣದ ಎಸ್ಐಟಿ ತನಿಖಾ ತಂಡದಲ್ಲೂ ಇದ್ದರು. ಮಾಹಿತಿದಾರರಾದ ಜಾಫರ್ ಮತ್ತು ಭಾಸ್ಕರ್ ಮೊದಲಿಗೆ ಮೇಲಧಿಕಾರಿಯೊಬ್ಬರಿಗೆ ಗಂಗಾಧರ್ ಬಳಿ ಹಣ ಇರುವ ಬಗ್ಗೆ ಮಾಹಿತಿ ನೀಡಿದ್ದರು. ಆ ಅಧಿಕಾರಿ ಒತ್ತಾಯ ಮಾಡಿದ್ದರಿಂದ ಮಲ್ಲಿಕಾರ್ಜುನ್, ಗಂಗಾಧರ್ ಮನೆಗೆ ಹೋಗಿದ್ದರು ಎನ್ನಲಾಗಿದೆ. ಪೀಣ್ಯ ಪೊಲೀಸರು ಮಲ್ಲಿಕಾರ್ಜುನ್'ರನ್ನು ಬಂಧಿಸಿದ ವೇಳೆ ಅವರು ಆ ಅಧಿಕಾರಿ ಹೆಸರನ್ನು ಹೇಳಿಕೊಂಡು ಜೋರಾಗಿ ಚೀರಾಡಿದರು ಎಂದು ಮೂಲಗಳು ತಿಳಿಸಿವೆ.
ಗಂಗಾಧರ್ ಮನೆಯಲ್ಲಿ ನಡೆದ ದರೋಡೆ ಪ್ರಕರಣ ಸಂಬಂಧ ಕಲಾಸಿಪಾಳ್ಯ ಠಾಣೆ ಪಿಎಸ್ಐ, ನಾಲ್ವರು ಕಾನ್ಸ್ಟೆಬಲ್ಗಳು ಸೇರಿ 7 ಮಂದಿಯನ್ನು ಬಂಧಿಸಲಾಗಿದೆ. ದರೋಡೆಯಾದ 35 ಲಕ್ಷ ರೂ. ಪೈಕಿ 16 ಲಕ್ಷ ರೂ. ಜಪ್ತಿ ಮಾಡಿದ್ದು, ತನಿಖೆ ಮುಂದುವರಿದಿದೆ.
- ಲಾಬೂರಾಮ್, ಡಿಸಿಪಿ, ಉತ್ತರ ವಿಭಾಗ
