ಸುಕ್ಮಾ[ಆ.14]: ಸಹೋದರಿಯೂ ಸೇರಿರುವ ನಕ್ಸಲ್‌ ಗುಂಪಿನೆದುರು ಎನ್‌ಕೌಂಟರ್‌ಗೆಂದು ಸಹೋದರ ಗನ್‌ ಹಿಡಿದು ಹೋರಾಡುವ ಸನ್ನಿವೇಶ ಹೇಗಿರಬಹುದು ಎನ್ನುವುದನ್ನೊಮ್ಮೆ ಊಹಿಸಿಕೊಳ್ಳಿ!

ಇದು ಸಿನಿಮಾ ಕತೆಯಲ್ಲ. ಛತ್ತೀಸ್‌ಗಢದ ಸುಕ್ಮಾದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಮೊದಲು ಸಕ್ಸಲ್‌ ಗುಂಪಿನಲ್ಲೇ ಗುರುತಿಸಿಕೊಂಡು, ಮನಪರಿವರ್ತನೆಯಿಂದ ಪೊಲೀಸ್‌ ವೃತ್ತಿಗೆ ಬಂದ ವೆಟ್ಟಿರಾಮಾ ಎನ್ನುವವರ ನೈಜ ಕತೆ. ತನ್ನಂತೆ ನಕ್ಸಲ್‌ ಗುಂಪಿನಲ್ಲಿ ಗುರುತಿಸಿಕೊಂಡ ತನ್ನ ಸಹೋದರಿ ವೆಟ್ಟಿಕನ್ನಿ ವಿರುದ್ಧ ಗನ್‌ ಝಳಪಿಸಿದ ಮನಕಲಕುವ ಘಟನೆಯ ಬಗ್ಗೆ ಸುಕ್ಮಾದ ಎಸ್ಪಿ ಶಲಬ್‌ ಸಿನ್ಹಾ ಇದೀಗ ಬಹಿರಂಗ ಪಡಿಸಿದ್ದಾರೆ.

2018ರಲ್ಲಿ ಪೊಲೀಸ್‌ ಸೇವೆಗೆ ಸೇರಿದ ವೆಟ್ಟಿರಾಮಾ ಜುಲೈ 29ರಂದು ನಕ್ಸಲ್‌ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಸಹೋದರಿಯ ವಿರುದ್ಧ ಮುಖಾಮುಖಿಯಾಗಿ ನಿಂತು ರಕ್ತ ಸಂಬಂಧಿ ಎಂಬುದನ್ನೂ ಲೆಕ್ಕಿಸದೇ ಗುಂಡಿನ ಚಕಮಕಿ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಇಬ್ಬರು ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಅದೃಷ್ಟವಶಾತ್‌ ಅಂದು ವೆಟ್ಟಿಕನ್ನಿ ಕೂದಲೆಳೆಯ ಅಂತರದಲ್ಲಿ ಗುಂಡೇಟಿನಿಂದ ಪಾರಾಗಿದ್ದಾಳೆ ಎಂದಿದ್ದಾರೆ.

ಈ ಬಗ್ಗೆ ಸ್ವತಃ ವೆಟ್ಟಿರಾಮಾ ಪ್ರತಿಕ್ರಿಯಿಸಿದ್ದು, ಸಹೋದರಿಗೆ ಅನೇಕ ಬಾರಿ ಪತ್ರ ಮುಖೇನ ನಕ್ಸಲ್‌ ಸಹವಾಸ ಬಿಟ್ಟು ಪೊಲೀಸ್‌ ಸೇವೆಗೆ ಬರುವಂತೆ ಕರೆದಿದ್ದೇನೆ. ಮನಸ್ಸಿದ್ದಲಿ ಮಾರ್ಗ ಎನ್ನುವುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಸಮಾಜದ್ರೋಹಿ ಕೆಲಸ ಬಿಟ್ಟು ಸಮಾಜಸೇವಾ ಕಾರ್ಯಕ್ಕೆ ಕೂಜೋಡಿಸುವುದಾಗಿ ಮನವಿ ಮಾಡಿದ್ದೇನೆ. ಈಗ ರಕ್ಷಾಬಂಧನದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಆಕೆಗೆ ಮನವಿ ಮಾಡಿದ್ದೇನೆ. ನನ್ನ ಮಾತು ಮೀರಲಾರಳು. ನನ್ನಂತೆ ಪೊಲೀಸ್‌ ಫೋಸ್‌ ಸೇರಿಕೊಳ್ಳುತ್ತಾಳೆನ್ನುವ ನಂಬಿಕೆ ಇದೆ ಎನ್ನುತ್ತಾರೆ.