ಟ್ರಾಫಿಕ್‌ ನಿಯಮಗಳ ಕಟ್ಟುನಿಟ್ಟಿನ ಜಾರಿ | ದಂಡ ಪ್ರಯೋಗ ಕಡ್ಡಾಯವಾಗಿಸಲು ಪೊಲೀಸರ ನಿರ್ಧಾರ
ಬೆಂಗಳೂರು (ಫೆ.06): ರಾಜಧಾನಿ ನಾಗರಿಕರೇ ಎಚ್ಚರ. ಸಿಗ್ನಲ್ ಜಂಪ್ ಮಾಡಿದರೆ ಮಾತ್ರವಲ್ಲ ಜಂಕ್ಷನ್ನಲ್ಲಿ ನಿಲ್ಲುವಾಗ ಸಹ ಶಿಸ್ತಿನ ಗೆರೆ ದಾಟಿದರೆ ಬೀಳಲಿದೆ ‘ದಂಡ'!
ವಾಹನಗಳಿಗೆ ಶಿಸ್ತು ಜಾರಿಗೊಳಿಸಲು ಮುಂದಾಗಿರುವ ಸಂಚಾರ ವಿಭಾಗದ ಪೊಲೀಸರು, ನೋ ಪಾರ್ಕಿಂಗ್ ಬಳಿಕ ಈಗ ಜಂಕ್ಷನ್ಗಳಲ್ಲಿ ‘ನಿಲುಗಡೆ ಗೆರೆ' ದಾಟುವವರ ಮೇಲೂ ದಂಡ ಪ್ರಯೋಗಕ್ಕಿಳಿದಿದ್ದಾರೆ.
ನಗರದ ಟ್ರಾಫಿಕ್ ಸಿಗ್ನಲ್ಗಳಲ್ಲಿ ಸ್ಟಾಪ್ ಲೈನ್ (ಬಿಳಿ ಮತ್ತು ಕಪ್ಪು ಬಣ್ಣದ ಪಟ್ಟಿ) ಹೊರಗೆ ಬೇಕಾಬಿಟ್ಟಿವಾಹನ ನಿಲುಗಡೆ ಮಾಡುವವರ ವಿರುದ್ಧ ನಗರದ ಸಂಚಾರ ಪೊಲೀಸರು ದಂಡ ವಿಧಿಸಿ ಪ್ರಕರಣ ದಾಖಲಿಸುತ್ತಿದ್ದಾರೆ. ಈಗಾಗಲೇ ವಿಶೇಷ ಕಾರಾರಯಚರಣೆಗಿಳಿದಿ ರುವ ಪಶ್ಚಿಮ ವಿಭಾಗದ (ಸಂಚಾರ) ಪೊಲೀಸರು ವಾರದಲ್ಲಿ 1,450 ಪ್ರಕರಣಗಳನ್ನು ದಾಖಲಿಸಿ ಜನರಿಗೆ ಬಿಸಿ ಮುಟ್ಟಿಸಿದ್ದಾರೆ.
ಪಥ ಶಿಸ್ತು, ಸ್ಟಾಪ್ ಲೈನ್ ನಿಯಮ ಉಲ್ಲಂಘಿಸುವ ಸವಾರರ ವಿರುದ್ಧ ನಗರದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದು, ಪ್ರಕರಣ ದಾಖಲಿಸಲಾಗುತ್ತಿದೆ. ನಿತ್ಯ 700-800 ಪ್ರಕರಣ ದಾಖಲಾಗುತ್ತಿವೆ. ಸವಾರರಲ್ಲಿ ಶಿಸ್ತು ಬರುವವರೆಗೂ ಈ ವಿಶೇಷ ಕಾರ್ಯಾಚರಣೆ ಮುಂದುವರಿಯಲಿದೆ.
ಆರ್ ಹಿತೇಂದ್ರ ಹೆಚ್ಚುವರಿ ಪೊಲೀಸ್ ಆಯುಕ್ತ, ನಗರ ಸಂಚಾರ ವಿಭಾಗ
ಸ್ಟಾಪ್ ಲೈನ್ ಉಲ್ಲಂಘನೆ: ಟ್ರಾಫಿಕ್ ಸಿಗ್ನಲ್ಗಳಲ್ಲಿ ಪಾದಚಾರಿಗಳಿಗಾಗಿ ಜೀಬ್ರಾ ಕ್ರಾಸಿಂಗ್ ಲೈನ್ ಹಾಕಲಾ ಗಿದೆ. ಇದರ ಹಿಂದೆ ಸ್ಟಾಪ್ ಲೈನ್ ಗೆರೆ ಎಳೆಯಲಾಗಿದೆ. ಸಿಗ್ನಲ್ ಬಿದ್ದಾಗ ವಾಹನ ಸವಾರರು ಈ ಲೈನ್ನಿಂದ ಹೊರಗೆ ವಾಹನಗಳನ್ನು ನಿಲುಗಡೆ ಮಾಡಬೇಕು. ಆದರೆ, ಈ ಲೈನ್ ಕ್ರಾಸ್ ಮಾಡಿ, ಜೀಬ್ರಾ ಕ್ರಾಸಿಂಗ್ ಲೈನ್ ದಾಟಿ ಮುಂದೆ ಬರುತ್ತಾರೆ. ಇದರಿಂದ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆ ಆಗುತ್ತಿದೆ. ಹೀಗಾಗಿ ನಿಯಮ ಉಲ್ಲಂಘಿಸುವ ಸವಾರರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.
ಅಂತೆಯೆ, ಸಾರ್ವಜನಿಕ ಸ್ಥಳಗಳು, ಮಾಲ್ಗಳು, ಕಟ್ಟಡ, ಅಂಗಡಿ-ಮುಂಗಟ್ಟುಗಳ ಬಳಿ ವಾಹನ ನಿಲುಗಡೆಗೆ ಸ್ಥಳ ನಿಗದಿ ಮಾಡಿ, ಲೈನ್ ಕೂಡ ಹಾಕಲಾಗಿದೆ. ಅದರೆ, ಕೆಲವರು ಈ ಲೈನ್ನಿಂದ ಹೊರಗೆ ಬಂದು ರಸ್ತೆಗೆ ಚಾಚಿಕೊಂ ಡಂತೆ ವಾಹನಗಳನ್ನು ನಿಲುಗಡೆ ಮಾಡುತ್ತಾರೆ. ಇನ್ನೂ ಕೆಲವರು ಅಡ್ಡಾದಿಡ್ಡಿ ನಿಲ್ಲಿಸುತ್ತಿರುವುದು ಕಿರಿಕಿರಿಗೆ ಕಾರಣ ವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ (ಸಂಚಾರ) ಡಿಸಿಪಿ ಶೋಭಾರಾಣಿ ‘ಕನ್ನಡಪ್ರಭ'ಕ್ಕೆ ತಿಳಿಸಿದರು.
ವಾಹನ ಸವಾರರು ಮನೆ, ಕಚೇರಿ, ಕೆಲಸ ಮೊದಲಾದ ಕಡೆಗೆ ಹೋಗುವ ಧಾವಂತದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಸಾಮಾನ್ಯವಾಗಿದೆ. ಸದಾ ವಾಹನ ದಟ್ಟಣೆಯಿಂದ ಗಿಜಗುಡುವ ನಗರದ ರಸ್ತೆಗಳಲ್ಲಿ ನಿತ್ಯ ಸಂಚಾರ ನಿಯಮ ಉಲ್ಲಂಘಿಸುವ ಸವಾರರಿಗೆ ಭರವಿಲ್ಲ. ಸಾರ್ವಜನಿಕ ಸ್ಥಳಗಳು, ಟ್ರಾಫಿಕ್ ಸಿಗ್ನಲ್ಗಳು, ವಾಣಿಜ್ಯ ಕಟ್ಟಡಗಳ ಎದುರು, ಅಂಗಡಿ-ಮುಂಗಟ್ಟುಗಳ ಬಳಿ ವಾಹನಗಳನ್ನು ಅಡ್ಡಾದಿಟ್ಟಿನಿಲ್ಲಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಇದರಿಂದ ಪಾದಚಾರಿಗಳು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.
ಈ ನಡುವೆ ಸಂಚಾರ ಪೊಲೀಸರು ಹೆಲ್ಮೆಟ್, ವೇಗದ ಚಾಲನೆ, ನಿರ್ಲಕ್ಷ್ಯದ ಚಾಲನೆ, ಪಥ ಶಿಸ್ತು ಮೊದಲಾದ ಸಂಚಾರ ನಿಯಮಗಳ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸುವ ಕಾರ್ಯ ಮುಂದುವರಿಸಿದ್ದಾರೆ. ಈ ಮಧ್ಯೆ ಪಥ ಶಿಸ್ತು, ಸ್ಟಾಪ್ ಲೈನ್ ನಿಯಮ ಉಲ್ಲಂಘನೆ ಹೆಚ್ಚಾದ ಹಿನ್ನೆಲೆಯಲ್ಲಿ ನಗರದ ಎಲ್ಲಾ ಸಂಚಾರ ವಿಭಾಗಗಳಲ್ಲಿ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸ್ಥಳದಲ್ಲೇ ದಂಡ: ಈ ಹಿಂದೆಯೂ ಪಥ ಶಿಸ್ತು, ಸ್ಟಾಪ್ ಲೈನ್ ನಿಯಮಗಳ ಉಲ್ಲಂಘನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸುವ ಕಾರ್ಯ ನಡೆಯುತ್ತಿದೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಅಧರಿಸಿ ನಿಯಮ ಉಲ್ಲಂಘಿಸಿದ ವಾಹನಗಳ ಮಾಲೀಕರಿಗೆ ದಂಡದ ನೋಟಿಸ್ ಕಳುಹಿಸಲಾಗುತಿತ್ತು. ಇದೀಗ ವಿಶೇಷ ಕಾರ್ಯಾಚರಣೆ ವೇಳೆ ಸ್ಥಳದಲ್ಲೇ ದಂಡ ವಸೂಲಿ ಮಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
