ಮಾನ್‌ಸಿಂಗ್‌ ಮೃತದೇಹವನ್ನು ಸಂಬಂಧಿಕರು ಹಾಗೂ ಸ್ನೇಹಿತರು ಹೆಬ್ಬಾಳದ ಚಿತಾಗಾರಕ್ಕೆ ಅಂತ್ಯಕ್ರಿಯೆಗೆ ಎಂದು ಕೊಂಡೊಯ್ದಿದ್ದರು. ದಂಪತಿ ನಡುವೆ ಜಗಳವಾಗಿದ್ದನ್ನು ಕೇಳಿದ್ದ ಸ್ಥಳೀಯರೊಬ್ಬರು ಅನುಮಾನಗೊಂಡು ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಕೊಲೆಯಾದ ವ್ಯಕ್ತಿಯೊಬ್ಬನನ್ನು ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಶವದ ಜತೆ ಹತ್ಯೆಯ ರಹಸ್ಯವೂ ಸಮಾಧಿಯಾಗುತ್ತಿದ್ದುದನ್ನು ಸಿನಿಮೀಯ ರೀತಿಯಲ್ಲಿ ಭೇದಿಸಿರುವ ಜೆ.ಸಿ.ನಗರ ಪೊಲೀಸರು, ಪತ್ನಿ ತನ್ನ ಪ್ರಿಯಕರನ ಜತೆ ಸೇರಿ ಪತಿಯನ್ನೇ ಕೊಲೆಗೈದ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾರೆ. ಒಂದು ವೇಳೆ ಪೊಲೀಸರು ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವುದು ಅರ್ಧ ಗಂಟೆ ತಡವಾಗಿದ್ದರೆ, ಮೃತ ವ್ಯಕ್ತಿಯ ಶವವನ್ನು ದಹನ ಮಾಡಲು ಮೃತನ ಸಂಬಂಧಿಗಳೆಲ್ಲರೂ ಚಿತಾಗಾರದಲ್ಲಿ ಜಮಾಯಿಸಿದ್ದರು. ಕೊನೆ ಕ್ಷಣದಲ್ಲಿ ಮಾಹಿತಿ ಪಡೆದ ಪೊಲೀಸರು ಚಿತಾಗಾರಕ್ಕೆ ತೆರಳಿ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕೊಲೆ ರಹಸ್ಯ ಬಯಲಾಗಿದೆ. ಜೆ.ಸಿ.ನಗರ ನಿವಾಸಿ ಮಾನ್ಸಿಂಗ್ (55) ಕೊಲೆಯಾದ ವ್ಯಕ್ತಿ. ಪ್ರಕರಣ ಸಂಬಂಧ ಮೃತ ವ್ಯಕ್ತಿಯ ಪತ್ನಿ ಚಂದ್ರಾಬಾಯಿ (40) ಮತ್ತು ಈಕೆಯ ಪ್ರಿಯಕರ ಅಶೋಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಾನ್'ಸಿಂಗ್ ಮತ್ತು ಚಂದ್ರಾಬಾಯಿ ಮೂಲತಃ ರಾಜಸ್ತಾನದವರಾಗಿದ್ದು, ಹಲವು ವರ್ಷಗಳಿಂದ ನಗರದಲ್ಲೇ ನೆಲೆಸಿದ್ದರು. ದಂಪತಿಗೆ ಓರ್ವ ಮಗಳಿದ್ದು, ಮದುವೆ ಮಾಡಿ ಕಳುಹಿಸಿದ್ದರು. ಮಗಳ ವಿವಾಹವಾದ ಬಳಿಕ ದಂಪತಿ ಇಬ್ಬರೇ ಜೆ.ಸಿ. ನಗರದಲ್ಲಿ ನೆಲೆಸಿದ್ದರು. ಮಾನ್'ಸಿಂಗ್ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಪತ್ನಿ ಚಂದ್ರಾಬಾಯಿ ಪರಿಶಿಷ್ಟ ಜಾತಿ, ಪರಿಶಿಷ್ಟಪಂಗಡದ ಅಭಿವೃದ್ಧಿ ನಿಗಮದಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಇಲ್ಲಿಯೇ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಅಶೋಕ್ ಜತೆ ಚಂದ್ರಾಬಾಯಿ ಅನೈತಿಕ ಸಂಬಂಧ ಹೊಂದಿದ್ದಳು. ಚಂದ್ರಾಬಾಯಿ ಒಮ್ಮೆ ಪ್ರಿಯಕರನೊಂದಿಗೆ ಜತೆಗಿರುವಾಗ ಪತಿ ಮಾನ್'ಸಿಂಗ್ ಕೈಗೆ ಸಿಕ್ಕಿ ಬಿದ್ದಿದ್ದಳು. ಈ ವಿಚಾರವಾಗಿ ದಂಪತಿ ನಡುವೆ ಸಾಕಷ್ಟು ಜಗಳವಾಗಿತ್ತು. ಆದರೂ ಕಳೆದ ಒಂಬತ್ತು ತಿಂಗಳಿಂದ ಚಂದ್ರಾಬಾಯಿ ತನ್ನ ಅನೈತಿಕ ಮುಂದುವರಿಸಿದ್ದಳು. ತಮ್ಮ ಸಂಬಂಧಕ್ಕೆ ಪತಿ ಸಮಸ್ಯೆಯಾಗಿದ್ದಾರೆ ಎಂಬ ಕಾರಣಕ್ಕೆ ಚಂದ್ರಾಬಾಯಿ ಮತ್ತು ಅಶೋಕ್ ಅವರು ಸೇರಿ ಮಾನ್ಸಿಂಗ್ ಕೊಲೆಗೆ ನಿರ್ಧರಿಸಿದ್ದರು. ಮೇ 4ರಂದು ಮಾನ್ಸಿಂಗ್ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ರಾತ್ರಿ 8ಗಂಟೆ ಸುಮಾರಿಗೆ ಮಾನ್ಸಿಂಗ್ ಅವರ ಮನೆಗೆ ತನ್ನ ಇಬ್ಬರು ಸ್ನೇಹಿತರೊಂದಿಗೆ ತೆರಳಿದ್ದ ಆರೋಪಿ ಅಶೋಕ್ ದಿಂಬಿನಿಂದ ಉಸಿರುಗಟ್ಟಿಸಿ ಟವೆಲ್ನಿಂದ ಬಿಗಿದು ಸಿಂಗ್ ಅವರನ್ನು ಕೊಲೆಗೈದಿದ್ದರು.
ಹೃದಯಾಘಾತ ಕಥೆ ಕಟ್ಟಿದ್ರು: ಮರು ದಿನ ಚಂದ್ರಾಬಾಯಿ ಪತಿ ಎಂಟು ಗಂಟೆಯಾದರೂ ನಿದ್ರೆಯಿಂದ ಎದ್ದಿಲ್ಲ. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ನೆರೆಮನೆ ನಿವಾಸಿಗಳು ಮತ್ತು ಸಂಬಂಧಿಕರಿಗೆ ಹೇಳಿ ಎಲ್ಲರನ್ನೂ ನಂಬಿಸಿದ್ದಳು. ಇದನ್ನು ನಂಬಿದ ಸಂಬಂಧಿಕರು ಹಾಗೂ ಸ್ಥಳೀಯರು ಮಾನ್'ಸಿಂಗ್ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು. ಆಗ ಪೊಲೀಸರು ಬಂದು ಶವ ವಶಕ್ಕೆ ಪಡೆದು ಕೊಲೆ ಬಯಲು ಮಾಡಿದರು.
ಅರ್ಧ ತಾಸು ತಡವಾಗಿದ್ರೆ, ದೇಹ ಆಗ್ತಿತ್ತು ದಹನ!
ಮಾನ್ಸಿಂಗ್ ಮೃತದೇಹವನ್ನು ಸಂಬಂಧಿಕರು ಹಾಗೂ ಸ್ನೇಹಿತರು ಹೆಬ್ಬಾಳದ ಚಿತಾಗಾರಕ್ಕೆ ಅಂತ್ಯಕ್ರಿಯೆಗೆ ಎಂದು ಕೊಂಡೊಯ್ದಿದ್ದರು. ದಂಪತಿ ನಡುವೆ ಜಗಳವಾಗಿದ್ದನ್ನು ಕೇಳಿದ್ದ ಸ್ಥಳೀಯರೊಬ್ಬರು ಅನುಮಾನಗೊಂಡು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಕೊಲೆಯಾದ ವ್ಯಕ್ತಿಯೊಬ್ಬನನ್ನು ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿ ಸಿಬ್ಬಂದಿ ಜೆ.ಸಿ.ನಗರ ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ಪಡೆದು ಹೆಬ್ಬಾಳ ಚಿತಾಗಾರದ ಬಳಿ ಹೋದ ಜೆ.ಸಿ.ನಗರ ಪೊಲೀಸರು ಅಂತ್ಯಕ್ರಿಯೆ ನಿಲ್ಲಿಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಸಾಗಿಸಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಕೊಲೆಯಾಗಿರುವುದನ್ನು ದೃಢಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ನಿ ಚಂದ್ರಾಬಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಯಿತು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ
epaper.kannadaprabha.in
