ಗುವಾಹಟಿ(ಡಿ.04): ಆದಾಯ ತೆರಿಗೆ ಘೋಷಣೆ ಯೋಜನೆಯಡಿ 13,680 ಕೋಟಿ ಆದಾಯ ಘೋಷಿಸಿದ್ದ ಗುಜರಾತ್‌ನ ಮಹೇಶ್ ಶಾ, ಆ ಹಣ ತನ್ನದಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿ 24 ಗಂಟೆಯೊಳಗೆ ಅಸ್ಸಾಂನಲ್ಲಿ ಇಂಥದ್ದೇ ಮತ್ತೊಂದು ಘಟನೆ ನಡೆದಿದೆ.

ಇಲ್ಲಿನ ಮಧುಪುರ ಗ್ರಾಮದ ಬೋರಾ ಎಂಬ ರೈತನ ಮನೆ ಮೇಲೆ ಪೊಲೀಸರು ಇಂದು ದಾಳಿ ನಡೆಸಿದ್ದಾರೆ. ಈ ವೇಳೆ ಅಂಚೆ ಕಚೇರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌'ಗಳ 37 ಖಾತೆ ಪುಸ್ತಕಗಳು, 44 ಎಟಿಎಂ ಕಾರ್ಡ್‌ಗಳು, 34 ಚೆಕ್ ಪುಸ್ತಕ ಮತ್ತು 200ಕ್ಕೂ ಹೆಚ್ಚು ಖಾಲಿ ಚೆಕ್‌ಗಳು, ರೂ. 22,380 ನಗದು, ಲ್ಯಾಪ್‌'ಟಾಪ್ ಮತ್ತು ಬ್ಯಾಂಕ್ ಸ್ಟ್ಯಾಂಪ್ ಪೇಪರ್‌ಗಳು ಪತ್ತೆಯಾಗಿವೆ. ಇವುಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ಇವೆಲ್ಲವನ್ನೂ ರೈತನಿಗೆ ಯಾರು ನೀಡಿದರು ಎಂಬುದರ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಮಜುಲಿ ಜಿಲ್ಲಾ ಎಸ್ಪಿ ತಿಳಿಸಿದ್ದಾರೆ.

ಸಾಲಗಾರರಿಂದ ಶ್ಯೂರಿಟಿಯಾಗಿ ಇವುಗಳನ್ನು ಇಟ್ಟುಕೊಂಡಿದ್ದೆ ಎಂದು ರೈತ ಬೋರಾ ಹೇಳಿದ್ದಾರೆ. ಆದರೆ, ಯಾರೋ ತಮ್ಮ ಕಪ್ಪುಹಣ ಇಡಲು ರೈತನನ್ನು ಬಳಸಿಕೊಂಡಿದ್ದಾರಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.