Asianet Suvarna News Asianet Suvarna News

ಮೀಟರ್‌ ಬಡ್ಡಿ ಮಾಫಿಯಾಗೆ ಖಾಕಿ ಬಿಸಿ!

ಕಾಮಾಕ್ಷಿಪಾಳ್ಯ, ಮೈಕೋ ಲೇಔಟ್‌, ಜಯನಗರ, ಸಿಟಿ ಮಾರ್ಕೆಟ್‌, ಹನುಮಂತನಗರ, ಬ್ಯಾಟರಾಯನಪುರ ಹಾಗೂ ಚಂದ್ರಾ ಲೇಔಟ್‌ ಠಾಣಾ ವ್ಯಾಪ್ತಿಯಲ್ಲಿ ಬಡ್ಡಿ ದಂಧೆಕೋರರ ಮನೆಗಳ ಮೇಲೆ ಕಾರ್ಯಾಚರಣೆ ನಡೆಸಿದ ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ ಅಲೋಕ್‌ ಕುಮಾರ್‌ ಮಾರ್ಗದರ್ಶನದಲ್ಲಿ ಡಿಸಿಪಿ ಎಸ್‌.ಗಿರೀಶ್‌, ಜಿನೇಂದ್ರ ಖಣಗಾವಿ ನೇತೃತ್ವದ 11 ವಿಶೇಷ ತಂಡಗಳು, ಬೆಳಗ್ಗೆ 5.30ರಿಂದ 8.30ವರೆಗೆ ಮನೆಗಳನ್ನು ಜಾಲಾಡಿ ಅವರಿಂದ 69.16 ಲಕ್ಷ ರು, 258 ಚೆಕ್‌ ಸೇರಿ ಇನ್ನಿತರೆ ದಾಖಲೆಗಳನ್ನು ಜಪ್ತಿ ಮಾಡಿವೆ.

Police Raids On Meter Baddi Business
Author
Bengaluru, First Published Oct 11, 2018, 9:44 AM IST
  • Facebook
  • Twitter
  • Whatsapp

ಬೆಂಗಳೂರು(ಅ.11): ಇತ್ತೀಚಿಗೆ ಬಡ್ಡಿ ಮಾಫಿಯಾಕ್ಕೆ ಕಡಿವಾಣ ಹಾಕುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಖಡಕ್‌ ಸೂಚನೆ ನೀಡಿದ ಬೆನ್ನಲ್ಲೇ ಬಡ್ಡಿ ದಂಧೆಯಲ್ಲಿ ತೊಡಗಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಒಂಭತ್ತು ಮಂದಿಯನ್ನು ಬುಧವಾರ ಬೆಳ್ಳಂಬೆಳಗ್ಗೆ ಬಂಧಿಸಿದ ಸಿಸಿಬಿ ಪೊಲೀಸರು, ಅಕ್ರಮ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾಮಾಕ್ಷಿಪಾಳ್ಯ, ಮೈಕೋ ಲೇಔಟ್‌, ಜಯನಗರ, ಸಿಟಿ ಮಾರ್ಕೆಟ್‌, ಹನುಮಂತನಗರ, ಬ್ಯಾಟರಾಯನಪುರ ಹಾಗೂ ಚಂದ್ರಾ ಲೇಔಟ್‌ ಠಾಣಾ ವ್ಯಾಪ್ತಿಯಲ್ಲಿ ಬಡ್ಡಿ ದಂಧೆಕೋರರ ಮನೆಗಳ ಮೇಲೆ ಕಾರ್ಯಾಚರಣೆ ನಡೆಸಿದ ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ ಅಲೋಕ್‌ ಕುಮಾರ್‌ ಮಾರ್ಗದರ್ಶನದಲ್ಲಿ ಡಿಸಿಪಿ ಎಸ್‌.ಗಿರೀಶ್‌, ಜಿನೇಂದ್ರ ಖಣಗಾವಿ ನೇತೃತ್ವದ 11 ವಿಶೇಷ ತಂಡಗಳು, ಬೆಳಗ್ಗೆ 5.30ರಿಂದ 8.30ವರೆಗೆ ಮನೆಗಳನ್ನು ಜಾಲಾಡಿ ಅವರಿಂದ 69.16 ಲಕ್ಷ ರು, 258 ಚೆಕ್‌ ಸೇರಿ ಇನ್ನಿತರೆ ದಾಖಲೆಗಳನ್ನು ಜಪ್ತಿ ಮಾಡಿವೆ.

ಕೆಲ ದಿನಗಳ ಹಿಂದೆ ಕೆ.ಆರ್‌.ಮಾರ್ಕೆಟ್‌ನಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಪರಿವೀಕ್ಷಣೆ ನಡೆಸಿದಾಗ ಕೆಲವು ವ್ಯಾಪಾರಿಗಳು, ತಮಗೆ ಬಡ್ಡಿ ವ್ಯವಹಾರಸ್ಥರು ನೀಡುತ್ತಿರುವ ತೊಂದರೆಗಳ ಕುರಿತು ಅಲವತ್ತು ಕೊಂಡಿದ್ದರು. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಉಪಮುಖ್ಯಮಂತ್ರಿಗಳ ನೀಡಿದ ಸೂಚನೆ ಹಿನ್ನೆಲೆಯಲ್ಲಿ ಬಡ್ಡಿ ವ್ಯವಹಾರದಲ್ಲಿ ತೊಡಗಿದ್ದವರ ವಿರುದ್ಧ ಕ್ರಮ ಜರುಗಿಸಿದ್ದೇವೆ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೊದಲ ಹಂತದಲ್ಲಿ ಒಂಭತ್ತು ಮಂದಿ ಮನೆಗಳ ಮೇಲೆ ಮಾತ್ರ ದಾಳಿ ನಡೆದಿದ್ದು, ನಮ್ಮ ರಾಡಾರ್‌ನಲ್ಲಿ ಬಹಳಷ್ಟು ಮಂದಿ ಇದ್ದಾರೆ. ಸಣ್ಣಪುಟ್ಟವ್ಯಾಪಾರಿಗಳು ಸೇರಿದಂತೆ ಸಾರ್ವಜನಿಕರಿಗೆ ಶೇ.10ರಿಂದ 30ರಷ್ಟುದರದಲ್ಲಿ ಬಡ್ಡಿಗೆ ಸಾಲ ನೀಡಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಆಯುಕ್ತರು ಹೇಳಿದರು.

ಕಾಮಾಕ್ಷಿಪಾಳ್ಯ- ಮಿರಾಕಲ್‌ ಮಂಜುನಾಥ್‌:

ಕಾಮಾಕ್ಷಿಪಾಳ್ಯ ಸಮೀಪದ ವೃಷಾಭವತಿ ನಗರದ 3ನೇ ಮುಖ್ಯರಸ್ತೆಯ ಮಂಜುನಾಥ ಅಲಿಯಾಸ್‌ ಮಿರಾಕಲ್‌ ಮಂಜುನಾಥ್‌ ಮನೆ ಮೇಲೆ ಇನ್ಸ್‌ಪೆಕ್ಟರ್‌ಗಳಾದ ಮಲ್ಲಿಕಾರ್ಜುನ್‌ ಹಾಗೂ ಕೆ.ಪ್ರಕಾಶ್‌ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಆತನನ್ನು ಬಂಧಿಸಿದ ಪೊಲೀಸರು, ಅಲ್ಲಿ 28 ಚೆಕ್‌ಗಳು, ಭೂ ದಾಖಲೆಗಳು ಜಪ್ತಿ ಮಾಡಿದ್ದಾರೆ.

ಬಿಟಿಎಂ ಲೇಔಟ್‌- ತಂದೆ ಮಗ ಅರೆಸ್ಟ್‌:

ಬಡ್ಡಿ ದಂಧೆಯಲ್ಲಿ ತೊಡಗಿದ್ದ ಬಿಎಟಿಎಂ ಲೇಔಟ್‌ 12ನೇ ಕ್ರಾಸ್‌ ನಿವಾಸಿಗಳಾದ ಭಾಸ್ಕರ್‌ ಹಾಗೂ ಆತನ ಪುತ್ರ ದಿಲೀಪ್‌ನನ್ನು ಎಸಿಪಿ ಬಿ.ಎಸ್‌.ಮೋಹನ್‌ ಕುಮಾರ್‌ ನೇತೃತ್ವದ ತಂಡ ಬಂಧಿಸಿದೆ. ಈ ವೇಳೆ ತಂದೆ-ಮಗನಿಂದ 33.50 ಲಕ್ಷ ರು ನಗದು ಜಪ್ತಿಯಾಗಿದೆ.

ಜಯನಗರದಲ್ಲಿ ಭೂ ದಾಖಲೆಗಳು ಜಪ್ತಿ:

ಜಯನಗರದ 4ನೇ ಹಂತದ ಚೇತನ್‌ ಎಂಬಾತ ಸಿಸಿಬಿ ಬಲೆಗೆ ಬಿದ್ದಿದ್ದು, ಆತನಿಂದ ಬಡ್ಡಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ 12 ಚೆಕ್‌ಗಳು, ಮೂರು ವಾಹನದ ಕೀಗಳು, ಓಮ್ನಿ ಕಾರು ಸೇರಿದಂತೆ ಇತರೆ ವಸ್ತು ಜಪ್ತಿಯಾಗಿದೆ.

ನಿರ್ಮಾಪಕ, ರೌಡಿಶೀಟರ್‌ ವೇಲು ಸೆರೆ:

ಸಿ.ಟಿ.ಮಾರ್ಕೆಟ್‌ನ ಸಣ್ಣ ಮಟ್ಟದ ವ್ಯಾಪಾರಿಗಳಿಗೆ ದುಬಾರಿ ಬಡ್ಡಿಗೆ ಸಾಲ ನೀಡಿ ಅವರನ್ನು ಸುಲಿಯುತ್ತಿದ್ದ ರೌಡಿ ಕಮ್‌ ಚಲನಚಿತ್ರ ನಿರ್ಮಾಪಕ ವೇಲು ಸಿಸಿಬಿಗೆ ಸೆರೆಯಾಗಿದ್ದಾನೆ. ಆತನ ಮನೆಯಲ್ಲಿ 6 ಚೆಕ್‌ಗಳು, 5 ಕರಾರು ಪತ್ರಗಳು ಹಾಗೂ 5 ನಿವೇಶನಗಳಿಗೆ ಸಂಬಂಧಪಟ್ಟದಾಖಲಾತಿಗಳು ಜಪ್ತಿಯಾಗಿವೆ.

ಹನುಮಂತನಗರದಲ್ಲಿ 33 ಲಕ್ಷ ಜಪ್ತಿ:

ಹನುಮಂತನಗರ ವ್ಯಾಪ್ತಿಯ ಬಡ್ಡಿ ದಂಧೆಕೋರ ಸುಬ್ರಹ್ಮಣಿಯನ್ನು ಬಂಧಿಸಿದ ಸಿಸಿಬಿ, ಆತನಿಂದ 98 ಚೆಕ್‌ಗಳು ಹಾಗೂ 33 ಲಕ್ಷ ರು ನಗದು ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬ್ಯಾಟರಾಯನಪುರದ ಮಾರುತಿನಗರದ ಬಡ್ಡಿ ದಂಧೆಕೋರ ಸತೀಶ್‌ನನ್ನು ಬಂಧನವಾಗಿದ್ದು, ಆತನಿಂದ 3 ಚೆಕ್‌ಗಳು, 3 ಸ್ಪಾಂಪ್‌ ಪೇಪರ್‌ಗಳು, 1 ಫಾರಂ ನಂ.29-30ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚಂದ್ರಾ ಲೇಔಟ್‌ನಲ್ಲಿ ಮಹಿಳಾ ಬಡ್ಡಿ ಸಾಮ್ರಾಜ್ಯ:

ಚಂದ್ರಾಲೇಔಟ್‌ ವ್ಯಾಪ್ತಿಯಲ್ಲಿ ಬಡ್ಡಿ ಸಾಮ್ರಾಜ್ಯದ ಕೋಟೆಗೆ ಲಗ್ಗೆ ಹಾಕಿದ ಸಿಸಿಬಿ, ಮೂಡಲಪಾಳ್ಯದ ಜಯಮ್ಮ, ಕೃಷ್ಣಮ್ಮ, ಪಂಚಶೀಲ ನಗರದ ವೆಂಕಟೇಶ್‌, ಲಿಂಗರಾಜುನನ್ನು ಬಂಧಿಸಿದ್ದಾರೆ. ಈ ಆರೋಪಿಗಳಿಂದ 2.66 ಲಕ್ಷ ರು ನಗದು, 4 ಕಾರು, ಬೈಕ್‌ ಹಾಗೂ 91 ಚೆಕ್‌ಗಳು ಸೇರಿದಂತೆ ಇತರೆ ದಾಖಲೆಗಳು ಜಪ್ತಿಯಾಗಿವೆ.

Follow Us:
Download App:
  • android
  • ios