Asianet Suvarna News Asianet Suvarna News

ನಾಗನ ‘ನಾಟಕ'ಗಳಿಂದ ಪೊಲೀಸರಿಗೆ ತಲೆಬಿಸಿ

ತನ್ನ ಮನೆಯಲ್ಲಿ ಪತ್ತೆಯಾದ ರು.14 ಕೋಟಿ ಮೌಲ್ಯದ ಹಳೆ ನೋಟುಗಳ ಕುರಿತು ಕೆಲ ಉದ್ಯಮಿಗಳ ಹೆಸರನ್ನು ನಾಗರಾಜ್‌ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ. ಆದರೆ ಆತನ ನೀಡಿರುವ ಉದ್ಯಮಿಗಳಿಗೆ ಕರೆ ಮಾಡಿದರೆ, ತಮಗೆ ನಾಗರಾಜ್‌'ನ ಪರಿಚಯವೇ ಇಲ್ಲ ಎನ್ನುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

police perplexed with strange behaviour of rowdy naga at jail

ಬೆಂಗಳೂರು: ಬ್ಲ್ಯಾಕ್‌ ಆ್ಯಂಡ್‌ ವೈಟ್‌ ಪ್ರಕರಣದಲ್ಲಿ ಬಂಧಿತನಾಗಿರುವ ಮಾಜಿ ಬಿಬಿಎಂಪಿ ಸದಸ್ಯ ಹಾಗೂ ರೌಡಿಶೀಟರ್‌ ನಾಗರಾಜನ ವರ್ತನೆಗಳು ಪೊಲೀಸರಿಗೆ ತಲೆ ಬಿಸಿ ತಂದಿದೆ.  ನನ್ನನ್ನು ಪ್ರತ್ಯೇಕವಾಗಿ ವಿಶೇಷ ಸೆಲ್‌'ನಲ್ಲಿಡಿ. ನಾನು ಯಾರೊಂದಿಗೆ ಮಾತನಾಡುವುದಿಲ್ಲ ಎನ್ನುತ್ತಾ ಒಬ್ಬೊಬ್ಬನೇ ಮಾತನಾಡಿಕೊಳ್ಳುತ್ತಾನೆ. ವಿಚಾರಣೆ ನಡೆಸಲು ಮುಂದಾದರೆ, ನೀವೆಲ್ಲಾ ಯಾರು? ನಾನೆಲ್ಲಿದ್ದೇನೆ ಎಂದು ಪೇಚಾಡುತ್ತಾನೆ. ಆತ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 

ಮೊದಲು ತನ್ನೊಂದಿಗೆ ಬಂಧಿತರಾಗಿರುವ ಮಕ್ಕಳಾದ ಶಾಸ್ತ್ರೀ ಮತ್ತು ಗಾಂಧಿ ಜತೆ ಸೆಲ್‌'ನಲ್ಲಿಡುವಂತೆ ಮನವಿ ಮಾಡಿದ್ದ. ಆದರೆ ಈಗ ಪ್ರತ್ಯೇಕ ಕೊಠಡಿ ಕೇಳುತ್ತಿದ್ದಾನೆ. ನಮ್ಮ ತನಿಖೆ ದಿಕ್ಕು ತಪ್ಪಿಸುವ ದುರುದ್ದೇಶದಿಂದಲೇ ಆತನಲ್ಲಿ ನಾಟಕೀಯವಾಗಿ ನಡೆದುಕೊಳ್ಳುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ನಾಗ ಯಾರೆಂಬುದು ಗೊತ್ತಿಲ್ಲ: ಇನ್ನು ತನ್ನ ಮನೆಯಲ್ಲಿ ಪತ್ತೆಯಾದ ರು.14 ಕೋಟಿ ಮೌಲ್ಯದ ಹಳೆ ನೋಟುಗಳ ಕುರಿತು ಕೆಲ ಉದ್ಯಮಿಗಳ ಹೆಸರನ್ನು ನಾಗರಾಜ್‌ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ. ಆದರೆ ಆತನ ನೀಡಿರುವ ಉದ್ಯಮಿಗಳಿಗೆ ಕರೆ ಮಾಡಿದರೆ, ತಮಗೆ ನಾಗರಾಜ್‌'ನ ಪರಿಚಯವೇ ಇಲ್ಲ ಎನ್ನುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ನಾಗರಾಜ್‌ ಮನೆಯಲ್ಲಿ ಸಿಸಿಟೀವಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡಿದ್ದ. ಆದರೆ, ಹಣಕಾಸು ವ್ಯವಹಾರ ಮಾತುಕತೆ ಬಳಿ ಆತ ಸಿಸಿಟೀವಿ ದೃಶ್ಯಾವಳಿ ನಾಶ ಮಾಡುತ್ತಿದ್ದ. ಇದರಿಂದಾಗಿ ಆತನ ಮನೆಗೆ ಭೇಟಿ ನೀಡಿದವರ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. 

ನಾಗರಾಜನ ವಕೀಲರಿಗೆ ನಿರೀಕ್ಷಣಾ ಜಾಮೀನು:
ಬಾಣಸವಾಡಿ ಉಪವಿಭಾಗದ ಎಸಿಪಿ ರವಿಕುಮಾರ್‌ ಅವರ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಣಸವಾಡಿ ಪೊಲೀಸ್‌ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ದೂರಿಗೆ ಸಂಬಂಧಿಸಿದಂತೆ ನಾಗರಾಜನ ಪರ ವಕೀಲರಾಗಿದ್ದ ಶ್ರೀರಾಮರೆಡ್ಡಿ ಸೆಷನ್ಸ್‌ ನ್ಯಾಯಾಲಯದಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ತಮ್ಮ ವಿರುದ್ಧ ಬಾಣಸವಾಡಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ವಕೀಲ ಶ್ರೀರಾಮರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ 22ನೇ ನಗರ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ, ರು.1 ಲಕ್ಷ ಬಾಂಡ್‌ ಹಾಗೂ ಒಬ್ಬರ ಭದ್ರತಾ ಖಾತ್ರಿ ಒದಗಿಸುವಂತೆ ಸೂಚಿಸಿ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು. ಜತೆಗೆ ಅರ್ಜಿಯ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ವಕೀಲರಿಗೆ ತಿಳಿಸಿ ಶುಕ್ರವಾರಕ್ಕೆ ಮುಂದೂಡಿದೆ.

ಕನ್ನಡಪ್ರಭ ವಾರ್ತೆ
epaper.kannadaprabha.in

Follow Us:
Download App:
  • android
  • ios