ಉಡುಪಿ ಕ್ಷೇತ್ರದ ಮಾಜಿ ಸಂಸದ ದಿ. ಐ.ಎಂ.ಜಯರಾಮ ಶೆಟ್ಟಿ ಅವರ ಪುತ್ರನ ರತನ್ ಶೆಟ್ಟಿ ಹಾಗೂ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ರಸ್ತೆ ಬದಿ ಮೂತ್ರ ವಿಸರ್ಜನೆಗೆ ಮಾಜಿ ಸಂಸದರ ಪುತ್ರ ಕಾರು ನಿಲ್ಲಿಸಿದ್ದು ಈ ನಾಟಕೀಯ ಘಟನೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಬೆಂಗಳೂರು(ಡಿ.21): ತಪ್ಪು ಗ್ರಹಿಕೆಯಿಂದ ಸಂಚಾರ ನಿಯಮ ಉಲ್ಲಂಘನೆ ವಿಚಾರಕ್ಕೆ ರಾಜಕಾರಣಿಯೊಬ್ಬರ ಪುತ್ರ ಮತ್ತು ಪೊಲೀಸರ ಮಧ್ಯೆ ಜಗಳವಾಗಿದ್ದು, ಕೊನೆಗೆ ಪರಸ್ಪರ ಕ್ಷಮೆಯಾಚನೆ ಮೂಲಕ ವಿವಾದ ಇತ್ಯರ್ಥವಾಗಿರುವ ಕುತೂಹಲಕಾರಿ ಘಟನೆ ತಡರಾತ್ರಿ ಎಂ.ಜಿ.ರಸ್ತೆಯಲ್ಲಿ ನಡೆದಿದೆ.

ಉಡುಪಿ ಕ್ಷೇತ್ರದ ಮಾಜಿ ಸಂಸದ ದಿ. ಐ.ಎಂ.ಜಯರಾಮ ಶೆಟ್ಟಿ ಅವರ ಪುತ್ರನ ರತನ್ ಶೆಟ್ಟಿ ಹಾಗೂ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ರಸ್ತೆ ಬದಿ ಮೂತ್ರ ವಿಸರ್ಜನೆಗೆ ಮಾಜಿ ಸಂಸದರ ಪುತ್ರ ಕಾರು ನಿಲ್ಲಿಸಿದ್ದು ಈ ನಾಟಕೀಯ ಘಟನೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಏನಿದು ಘಟನೆ? ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಕಬ್ಬನ್ ಪಾರ್ಕ್ ಸಂಚಾರ ಠಾಣೆ ಪೊಲೀಸರು, ರಾತ್ರಿ 11ರ ಸುಮಾರಿಗೆ ಪಾನಮತ್ತ ಚಾಲಕರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದರು. ಅದೇ ವೇಳೆ ಎಂ.ಜಿ. ರಸ್ತೆ ಕಡೆಯಿಂದ ರತನ್ ಹಾಗೂ ಅವರ ಚಾಲಕ ಹರೀಶ್ ಬಂದಿದ್ದಾರೆ. ಸಿಗ್ನಲ್ ದಾಟಿದ ಬಳಿಕ ರತನ್ ಸೂಚನೆಯಂತೆ ಚಾಲಕ ರಸ್ತೆ ಬದಿ ಕಾರು ನಿಲ್ಲಿಸಿದ್ದಾರೆ. ಇದನ್ನು ಗಮನಿಸಿದ ಕೂಡಲೇ ಕಾನ್‌'ಸ್ಟೇಬಲ್, ಕಾರಿನ ಬಳಿಗೆ ಬೈಕ್‌'ನಲ್ಲಿ ಬಂದಿದ್ದಾರೆ. ಬಳಿಕ ‘ಪ್ರಕರಣ ದಾಖಲಿಸುತ್ತೇವೆ ಎಂಬ ಭಯಕ್ಕೆ ಇಲ್ಲೇ ವಾಹನ ನಿಲ್ಲಿಸಿದ್ದೀಯಾ. ಮೊದಲು ಕಾರಿನಿಂದ ಕೆಳಗಿಳಿ’ ಎಂದು ಚಾಲಕನಿಗೆ ಕಾನ್'ಸ್ಟೇಬಲ್ ಸೂಚಿಸಿದ್ದಾರೆ. ಅದೇ ಸಮಯಕ್ಕೆ ಮೂತ್ರ ವಿಸರ್ಜನೆ ಮುಗಿಸಿ ಬಂದ ರತನ್, ‘ಮೂತ್ರಕ್ಕೆ ಹೋಗಲು ವಾಹನ ನಿಲ್ಲಿಸಿದ್ದು, ಯಾರ ಮೇಲಿನ ಭಯದಿಂದಲೋ ಹಾಗೆ ಮಾಡಲಿಲ್ಲ’ ಎಂದು ವಾದಿಸಿದ್ದಾರೆ. ಈ ಮಾತಿಗೆ ಕೋಪಗೊಂಡ ಕಾನ್'ಸ್ಟೇಬಲ್, ‘ಇದೆಲ್ಲ ನಾಟಕ ಬೇಡ. ನಡೀರಿ ಸಾಹೇಬ್ರು ಹತ್ರ’ ಎಂದಿದ್ದಾರೆ. ಅದಕ್ಕೊಪ್ಪದ ರತನ್, ನಾನೇಕೆ ಅವರ ಬಳಿ ಬರಬೇಕು? ನಾನು ಪಾನಮತ್ತತನಾಗಿದ್ದೇನೆ ನಿಜ. ಆದರೆ ಕಾರು ಓಡಿಸುತ್ತಿದ್ದುದು ನನ್ನ ಚಾಲಕ. ಹೀಗಾಗಿ ನಮ್ಮಿಂದ ಯಾವುದೇ ತಪ್ಪಾಗಿಲ್ಲ. ನೀವೇ ಒನ್-ವೇನಲ್ಲಿ ಬೈಕ್ ಓಡಿಸಿಕೊಂಡು ಬಂದು ನಿಯಮ ಉಲ್ಲಂಘಿಸಿದ್ದೀರಿ ಎಂದು ಸಮರ್ಥಸಿಕೊಂಡಿದ್ದಾರೆ. ಈ ಹಂತದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಪೊಲೀಸರ ವರ್ತನೆಗೆ ತಾಳ್ಮೆ ಕಳೆದುಕೊಂಡ ರತನ್, ‘ನಾನು ಮುಂದೆ ಶಾಸಕನಾಗುವನು. ಈ ವಿಷಯವನ್ನು ಇಷ್ಟಕ್ಕೇ ಸುಮ್ಮನೆ ಬಿಡುವುದಿಲ್ಲ. ಕಮಿಷನರ್ ಗಮನಕ್ಕೂ ತರುತ್ತೇನೆ’ ಏರಿದ ದನಿಯಲ್ಲಿ ಎಚ್ಚರಿಸಿದ್ದಾರೆ. ಅಷ್ಟರಲ್ಲಿ ಸ್ಥಳಕ್ಕಾಗಮಿಸಿದ ಹೆಚ್ಚಿನ ಪೊಲೀಸರು, ‘ಎಲ್ಲರೂ ಹೀಗೆಯೇ ಹೇಳೋದು. ಮೊದಲು ಠಾಣೆಗೆ ನಡಿ’ ಎಂದು ಏಕ ವಚನದಲ್ಲೇ ಮಾತನಾಡಿಸಿದ್ದಾರೆ. ಬಳಿಕ ರತನ್ ಅವರನ್ನು ಕಬ್ಬನ್ ಪಾರ್ಕ್ ಠಾಣೆಗೆ ಕರೆದೊಯ್ದಿದ್ದಾರೆ.

ಸಾರಿ ಎಂದ ರತನ್: ಅಲ್ಲಿ ಪೂರ್ವಾಪರ ವಿಚಾರಿಸಿದಾಗ ರತನ್, ದಿ.ಮಾಜಿ ಸಂಸದ ಜಯರಾಮಶೆಟ್ಟಿ ಅವರ ಪುತ್ರ ಎಂಬುದು ತಿಳಿದು ಪೊಲೀಸರು ಪೆಚ್ಚು ಮೊರೆ ಹಾಕಿದ್ದಾರೆ. ಕೊನೆಗೆ ಸಾಮಾನ್ಯ ಪ್ರಕರಣ ಎಂದು ಪರಿಗಣಿಸಿದ ಪೊಲೀಸರು, ರತನ್ ಅವರಿಗೆ ನಡೆದ ಘಟನೆಗೆ ಕ್ಷಮೆ ಕೋರಿದ್ದಾರೆ. ಆನಂತರ ರತನ್ ಸಹ, ಜೋರು ಮಾತನಾಡಿದಕ್ಕೆ ‘ಸಾರಿ’ ಎಂದು ಹೊರಟು ಬಂದಿದ್ದಾರೆ ಎನ್ನಲಾಗಿದೆ