ಬೆಂಗಳೂರು :  ಸ್ಯಾಂಡ​ಲ್‌​ವು​ಡ್‌​ನ​ಲ್ಲಿ ಬಿರು​ಗಾಳಿ ಎಬ್ಬಿ​ಸಿ​ರುವ ಬಹುಭಾಷಾ ನಟ ಅರ್ಜುನ್‌ ಸರ್ಜಾ ಮತ್ತು ನಟಿ ಶ್ರುತಿ ಹರಿ​ಹ​ರನ್‌ ನಡು​ವಿನ ‘ಮೀ ಟೂ’ ವಿವಾದ ಮಹ​ತ್ವದ ತಿರು​ವು ಪಡೆದುಕೊಂಡಿದೆ. ಅರ್ಜುನ್‌ ಸರ್ಜಾ ಅವ​ರಿಂದ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆ​ದಿದೆ ಎಂದು ಶ್ರುತಿ ಪೊಲೀ​ಸ​ರಿಗೆ ಅಧಿಕೃತವಾಗಿ ದೂರು ಸಲ್ಲಿ​ಸಿದ್ದು, ಸರ್ಜಾಗೆ ಬಂಧನ ಭೀತಿ ಆರಂಭ​ವಾ​ಗಿ​ದೆ.

ಶನಿ​ವಾರ ಬೆಳಗ್ಗೆ 11 ಗಂಟೆಗೆ ತಮ್ಮ ವಕೀ​ಲ​ರೊಂದಿಗೆ ಕಸ್ತೂರ್‌ಬಾ ರಸ್ತೆಯ ಕಬ್ಬನ್‌ಪಾರ್ಕ್ ಠಾಣೆಗೆ ಆಗಮಿಸಿದ ಶ್ರುತಿ ಹರಿಹರನ್‌, 2016ರಲ್ಲಿ ತೆರೆ ಕಂಡ ‘ವಿಸ್ಮಯ’ ಚಲನಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ತಮಗೆ ಆ ಚಿತ್ರದ ನಾಯಕ ಅರ್ಜುನ್‌ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಐದು ಪುಟಗಳ ದೂರು ಸಲ್ಲಿಸಿದರು. ತನ್ಮೂ​ಲಕ ಇದು​ವ​ರೆಗೂ ಸಾಮಾ​ಜಿಕ ಜಾಲ​ತಾಣ ಹಾಗೂ ಮಾಧ್ಯ​ಮ​ಗಳ ಮುಂದೆ ಆರೋ​ಪ-ಪ್ರತ್ಯಾರೋಪದ ರೂಪ​ದ​ಲ್ಲಿದ್ದ ಈ ಪ್ರಕ​ರಣಕ್ಕೆ ಅಧಿ​ಕೃ​ತತೆ ದೊರ​ಕಿತು.

ಶ್ರುತಿ ಸಲ್ಲಿ​ಸಿದ ದೂರಿನನ್ವಯ ಅರ್ಜುನ್‌ ಸರ್ಜಾ ವಿರುದ್ಧ ಎಫ್‌ಐಆರ್‌ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿ ಬಹುಭಾಷಾ ನಟನಿಗೆ ಬಂಧನ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸೋಮವಾರ ನ್ಯಾಯಾಲಯಕ್ಕೆ ಅವರು ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.

ಹಲವು ಬಾರಿ ಲೈಂಗಿಕ ಕಿರುಕುಳ:

ಪೊಲೀಸರಿಗೆ ಸಲ್ಲಿ​ಸಿ​ರುವ ದೂರಿ​ನಲ್ಲಿ ಶ್ರುತಿ ಅವರು, ‘ಅರ್ಜುನ್‌ ಸರ್ಜಾ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಹಲವು ಬಾರಿ ಯತ್ನಿಸಿದ್ದರು. ಇದಕ್ಕೆ ಆಕ್ಷೇಪಿಸಿದ ಕಾರಣಕ್ಕೆ ನನಗೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಅಂದು ಆ ಸಿನಿಮಾದ ಸಹ ನಿರ್ದೇಶಕರು ಸೇರಿದಂತೆ ಕೆಲವರ ಬಳಿ ನೋವು ತೋಡಿಕೊಂಡಿದ್ದೆ. ನಾನು ಆಗಷ್ಟೇ ಚಲನಚಿತ್ರ ರಂಗಕ್ಕೆ ಬಂದಿದ್ದೆ. ಹೀಗಾಗಿ ಹಿರಿಯ ನಟನನ್ನು ಎದುರು ಹಾಕಿಕೊಳ್ಳದಂತೆ ಹಿತೈಷಿಗಳು ನೀಡಿದ ಸಲಹೆಯನ್ನು ಒಪ್ಪಿ ಸುಮ್ಮನಾದೆ. ಈಗ ಮಹಿಳೆಯರಿಗೆ ತಾವು ಎದುರಿಸಿದ ದೌರ್ಜನ್ಯದ ಕುರಿತು ಮಾತನಾಡಲು ದೇಶದಲ್ಲೆಡೆ ‘ಮೀ ಟೂ’ ಅಭಿಯಾನವು ವೇದಿಕೆ ಕಲ್ಪಿಸಿದೆ. ಈ ಚಳವಳಿಯಿಂದ ಧೈರ್ಯಗೊಂಡ ನಾನು ಮೂರು ವರ್ಷಗಳ ಬಳಿಕ ಅರ್ಜುನ್‌ ಸರ್ಜಾ ನೀಡಿದ ಕಿರುಕುಳದ ವಿರುದ್ಧ ಹೋರಾಟಕ್ಕೆ ನಿರ್ಧರಿಸಿದೆ’ ಎಂದು ಉಲ್ಲೇಖಿಸಿದ್ದಾರೆ.

ಶ್ರುತಿ ಹರಿಹರನ್‌ ನೀಡಿರುವ ದೂರನ್ನು ಸ್ವೀಕರಿಸಿದ ಪೊಲೀಸರು, 354 (ಮಹಿಳೆ ಗೌರವಕ್ಕೆ ಧಕ್ಕೆ ) 354ಎ (ಲೈಂಗಿಕ ಕಿರುಕುಳ), 506 (ಜೀವ ಬೆದರಿಕೆ), 509 (ಸನ್ನೆ ಮೂಲಕ ಲೈಂಗಿಕ ಕಿರುಕುಳ) ಪರಿಚ್ಛೇದಗಳಡಿ ಸರ್ಜಾ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಬಳಿಕ ದೂರಿನಲ್ಲಿ ಉಲ್ಲೇಖಿತ ಘಟನಾ ಸ್ಥಳಗಳಿಗೆ ಶ್ರುತಿ ಅವರನ್ನು ಕರೆದೊಯ್ದು ಮಹಜರ್‌ ನಡೆಸಿದ್ದಾರೆ.

ಸಂಬರಗಿ ವಿರುದ್ಧ ದೂರು ನೀಡಿದ್ದ ಶ್ರುತಿ:

ಹಿಂದಿ ಚಿತ್ರರಂಗದಲ್ಲಿ ‘ಮೀ ಟೂ’ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲೇ ನಟಿ ಶ್ರುತಿ ಹರಿಹರನ್‌ ನನಗೂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಪರಿಸ್ಥಿತಿ ಎದುರಾಗಿತ್ತು. ವಿಸ್ಮಯ ಸಿನಿಮಾದಲ್ಲಿ ಅಭಿನಯಿಸುವ ವೇಳೆ ನಟ ಅರ್ಜುನ್‌ ಸರ್ಜಾ ಎಲ್ಲೆ ಮೀರಿದ ವರ್ತನೆ ತೋರಿದ್ದರು ಎಂದು ಕನ್ನಡದ ನಿಯತಕಾಲಿಕಕ್ಕೆ ಬರೆದ ಲೇಖನದಲ್ಲಿ ಉಲ್ಲೇಖಿಸಿದ್ದರು. ಈ ಸ್ಫೋಟಕ ಹೇಳಿಕೆಯು ಕನ್ನಡ ಚಿತ್ರರಂಗದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿತು. ಕೊನೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಿತ್ರರಂಗದ ಹಿರಿಯರ ಮಧ್ಯಸ್ಥಿಕೆಯಲ್ಲಿ ಅವರಿಬ್ಬರ ನಡುವೆ ರಾಜಿ ಸಂಧಾನವೂ ನಡೆದು ವಿಫಲವಾಯಿತು. ಬಳಿಕ ಶ್ರುತಿ ವಿರುದ್ಧ ಅರ್ಜುನ್‌ ಸರ್ಜಾ ನ್ಯಾಯಾಲಯದಲ್ಲಿ ಮಾನನಷ್ಟಮೊಕದ್ದ​ಮೆ ದಾಖಲಿಸಿದ್ದಲ್ಲದೆ, ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ಸಹ ಕೊಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಸರ್ಜಾ ಆಪ್ತ ಪ್ರಶಾಂತ್‌ ಸಂಬರಗಿ ವಿರುದ್ಧ ಜೀವ ಬೆದರಿಕೆ ಆರೋಪದಡಿ ಹೈಗ್ರೌಂಡ್ಸ್‌ ಠಾಣೆಯಲ್ಲಿ ದೂರು ನೀಡಿದ ಶ್ರುತಿ, ಅಂತಿಮವಾಗಿ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ದೂರು ದಾಖಲಿಸಿದ್ದಾರೆ.

ಲೈಂಗಿಕ ಕಿರುಕುಳ ಕೇಸು ದಾಖಲಿಸಿದ ನಟಿ ಶ್ರುತಿ ಹರಿಹರನ್‌

1. 2015ರ ನವೆಂಬರಲ್ಲಿ ಹೆಬ್ಬಾಳ ಕಾಲೇಜಲ್ಲಿ ಶೂಟಿಂಗ್‌ ವೇಳೆ ಅಪ್ಪಿ, ಸವರಿ ಕಿರುಕುಳ

2. 2015ರ ಡಿಸೆಂಬರಲ್ಲಿ ಶೂಟಿಂಗ್‌ ಮಧ್ಯೆ ದೇವನಹಳ್ಳಿಯಲ್ಲಿ ರೂಮಿಗೆ ಬಾ ಅಂದ್ರು

3. ಶೂಟಿಂಗ್‌ ಮುಗಿಸಿ ತೆರಳುವಾಗ ದೇವನಹಳ್ಳಿ ಸಿಗ್ನಲ್‌ನಲ್ಲಿ ರೆಸಾರ್ಟ್‌ಗೆ ಬಾ ಅಂದ್ರು

4. 2016 ಜೂನ್‌ನಲ್ಲಿ ಯುಬಿ ಸಿಟಿಯಲ್ಲಿ ಹಿಂದಿನಿಂದ ಬಂದು ತಬ್ಬಿ ರೂಮಿ ಕರೆದರು


ಯಾವ ಸೆಕ್ಷನ್‌? ಏನು ಶಿಕ್ಷೆ?

ಐಪಿಸಿ 354 (ಮಹಿಳೆ ಗೌರವಕ್ಕೆ ಧಕ್ಕೆ)- ಮೂರು ವರ್ಷಗಳ ಕಠಿಣ ಸಜೆ ಹಾಗೂ ದಂಡ ಎರಡನ್ನೂ ವಿಧಿಸಬಹುದು

ಐಪಿಸಿ 354ಎ (ಲೈಂಗಿಕ ಕಿರುಕುಳ)- ಒಂದು ವರ್ಷ ಜೈಲು ಶಿಕ್ಷೆ

ಐಪಿಸಿ 506 (ಜೀವ ಬೆದರಿಕೆ)- ಎರಡು ವರ್ಷ ಜೈಲು ಶಿಕ್ಷೆ ಹಾಗೂ ದಂಡ ಅಥವಾ ಎರಡನ್ನೂ ವಿಧಿಸಬಹುದು

ಐಪಿಸಿ 509 (ಸನ್ನೆ ಮೂಲಕ ಲೈಂಗಿಕ ಕಿರುಕುಳ)- ದಂಡ ಮತ್ತು ಶಿಕ್ಷೆ ಪ್ರ​ಮಾಣ ನ್ಯಾಯಾ​ಲ​ಯದ ವಿವೇ​ಚ​ನೆಗೆ ಬಿಟ್ಟಿದ್ದು


ಸಾಕ್ಷಿಗಳು ಯಾರು?

ನಟ ಅರ್ಜುನ್‌ ಸರ್ಜಾ ತಮಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಐವರು ಸಾಕ್ಷಿದಾರರು ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್‌ ಜಾರಿಗೊಳಿಸಿದ್ದಾರೆ. ಈ ಎಲ್ಲರ ಬಳಿಯೂ ‘ವಿಸ್ಮಯ’ ಚಿತ್ರೀಕರಣ ವೇಳೆ ಅರ್ಜುನ್‌ ಸರ್ಜಾ ನಡವಳಿಕೆ ಕುರಿತು ನಾನು ಹೇಳಿಕೊಂಡಿದ್ದೆ ಎಂದು ಶ್ರುತಿ ತಿಳಿಸಿದ್ದಾರೆ. ಆದರೆ, ಈ ಸಾಕ್ಷಿಗಳ ಪೈಕಿ ಭರತ್‌ ನೀಲಕಂಠ ಅವರು ನನಗೆ ಘಟನೆ ಕುರಿತು ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ ಎನ್ನಲಾಗಿದೆ.

1. ಬೋರೇಗೌಡ - ಆಪ್ತ ಸಹಾಯಕ

2. ಕಿರಣ್‌ - ಆಪ್ತ ಸಹಾಯಕ

3. ಯಶಸ್ವಿನಿ - ಸ್ನೇಹಿತೆ

4. ಭರತ್‌ ನೀಲಕಂಠ - ‘ವಿಸ್ಮಯ’ ಸಿನಿಮಾ ಸಹ ನಿರ್ದೇಶಕ

5. ಮೋನಿಕಾ - ‘ವಿಸ್ಮಯ’ ಸಿನಿಮಾ ಸಹ ನಿರ್ದೇಶಕಿ