ಸೋಮೇಶ್ವರದ ಸಮುದ್ರ ತೀರದಲ್ಲಿ ಶುಕ್ರವಾರ ವಿಹರಿಸುತ್ತಿದ್ದ ಮೂವರ ಬಗ್ಗೆ ಸಂಶಯಗೊಂಡ ಸ್ಥಳದಲ್ಲಿದ್ದ ಯುವಕರ ತಂಡವೊಂದು ಉಳ್ಳಾಲ ಪೊಲೀಸರಿಗೆ ನೀಡಿದ ಮಾಹಿತಿಯನ್ವಯ ಪೊಲೀಸರು ಅಣ್ಣ-ತಂಗಿಯನ್ನು ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆಗೊಳಿಸಿರುವ ಘಟನೆ ನಡೆದಿದೆ.

ಉಳ್ಳಾಲ: ಸೋಮೇಶ್ವರದ ಸಮುದ್ರ ತೀರದಲ್ಲಿ ಶುಕ್ರವಾರ ವಿಹರಿಸುತ್ತಿದ್ದ ಮೂವರ ಬಗ್ಗೆ ಸಂಶಯಗೊಂಡ ಸ್ಥಳದಲ್ಲಿದ್ದ ಯುವಕರ ತಂಡವೊಂದು ಉಳ್ಳಾಲ ಪೊಲೀಸರಿಗೆ ನೀಡಿದ ಮಾಹಿತಿಯನ್ವಯ ಪೊಲೀಸರು ಅಣ್ಣ-ತಂಗಿಯನ್ನು ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆಗೊಳಿಸಿರುವ ಘಟನೆ ನಡೆದಿದೆ.

ದೀಪಾವಳಿ ರಜೆಯ ಹಿನ್ನೆಲೆಯಲ್ಲಿ ಮಾಡೂರು ನಿವಾಸಿಗಳಾದ ಯುವಕ ಹಾಗೂ ಆತನ ದೊಡ್ಡಮ್ಮನ ಮಗಳು, ಯುವಕನ ಸ್ನೇಹಿತನೋರ್ವ ಸೋಮೇಶ್ವರ ಸಮುದ್ರದ ತೀರದಲ್ಲಿ ವಿಹರಿಸುತ್ತಿದ್ದರು. ಇದನ್ನೇ ಗಮನಿಸಿದ ಸ್ಥಳದಲ್ಲಿದ್ದ ಯುವಕರ ತಂಡವೊಂದು ಈ ಮೂವರ ಬಗ್ಗೆ ಶಂಕೆ ವ್ಯಕ್ತಪಡಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಮೂವರು ಜೊತೆಗಿರುವ ಚಿತ್ರ ಹಾಗೂ ವಿಡಿಯೋಗಳನ್ನು ಹರಿಯಬಿಟ್ಟಿದೆ. ಬಳಿಕ ಉಳ್ಳಾಲ ಪೊಲೀಸರು, ಪೊಲೀಸ್ ಕಂಟ್ರೋಲ್ ರೂಂಗೂ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಪೋಲಿಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡರು. ಇವರ ಜೊತೆಗಿದ್ದ ಇನ್ನೊಬ್ಬ ಯುವಕ ಪೊಲೀಸರನ್ನು ಕಂಡು ಹೆದರಿ ಪರಾರಿಯಾಗಿದ್ದಾನೆ.

ಉಳ್ಳಾಲ ಠಾಣೆಯಲ್ಲಿ ಈ ಕುರಿತು ವಿಚಾರಣೆ ನಡೆದು ಇಬ್ಬರೂ ಹತ್ತಿರದ ಸಂಬಂಧಿಕರಾಗಿರುವುದು ದೃಢಪಟ್ಟಿದೆ. ಯುವತಿ ಯುವಕನ ದೊಡ್ಡಮ್ಮನ ಮಗಳಾಗಿದ್ದಾಳೆಂದು ತಿಳಿದುಬಂದಿದೆ ಎಂದು ಉಳ್ಳಾಲ ಪೊಲೀಸ್ ಠಾಣಾಧಿಕಾರಿ ಗೋಪಿಕೃಷ್ಣ ಪತ್ರಿಕೆಗೆ ತಿಳಿಸಿದ್ದಾರೆ.

(ಸಾಂದರ್ಭಿಕ ಚಿತ್ರ)