ಬೆಂಗಳೂರು: ಕಾವೇರಿ ಹೋರಾಟದ ವೇಳೆ ಉಂಟಾಗಿದ್ದ ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಬಂಧನ ಪ್ರಕ್ರಿಯೆ ಮತ್ತಷ್ಟು ಹೆಚ್ಚಾಗುತ್ತಲೇ ಇದೆ.
ಕಾವೇರಿ ತೀರ್ಪು ವಿರುದ್ಧ ಮತ್ತು ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆದ ಹಲ್ಲೆಯ ಹಿನ್ನಲೆಯಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿ ಮತ್ತಷ್ಟು ಮಂದಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಈಗಾಗಲೇ ಬೆಂಗಳೂರಿನಾದ್ಯಂತ 335ಕ್ಕೂ ಹೆಚ್ಚು ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ವಿಭಾಗದಲ್ಲಿ 99 ಪ್ರಕರಣಗಳು ದಾಖಲಾಗಿದ್ದು, ಒಟ್ಟು 120 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯನಗರ ಮತ್ತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಜನರು ಬಂಧಿತರಾಗಿದ್ದಾರೆ.
ಉತ್ತರ ವಿಭಾಗದಲ್ಲೂ ಕೂಡ ಗಲಭೆ ನಡೆಸಿದವರ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು ರಾಜಗೋಪಾಲ್ನಗರ, ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್ ಸೇರಿದಂತೆ ಇನ್ನುಳಿದ ಠಾಣೆಗಳಿಂದ ಒಟ್ಟು ಮೂವತ್ತೆರಡು ಪ್ರಕರಣಗಳು ದಾಖಲಾಗಿದೆ. ಒಟ್ಟು 270 ಮಂದಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
20ನೇ ತಾರೀಖು ತೀರ್ಪಿನ ಹಿನ್ನಲೆಯಲ್ಲಿ ಈಗಾಗಲೇ ಪೂರ್ವಭಾವಿಯಾಗಿ ಭದ್ರತೆಯ ಸಿದ್ಧತೆ ಮಾಡಿಕೊಂಡಿದ್ದಾರೆ ಪೊಲೀಸರು. ಇದೇ ವೇಳೆ, ತೀರ್ಪಿನ ದಿನ ನಂತರ ಯಾರೂ ಕೂಡ ಅನಗತ್ಯ ವಿಷಯಕ್ಕೆ ಕಿವಿಗೊಡಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಗಲಭೆ ನಡೆಸಿದ ವ್ಯಕ್ತಿಗಳನ್ನು ಸಿಸಿಟಿವಿ ಮತ್ತು ಮೊಬೈಲ್ ಕರೆಗಳ ಮುಖಾಂತರ ಮಾಹಿತಿ ಕಲೆ ಹಾಕಿ ಬಂಧಿಸುವ ಕಾರ್ಯ ಮುಂದುವರೆದಿದ್ದು ಬಂಧಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ವರದಿ: ಅಭಿಷೇಕ್ ಜೈಶಂಕರ್, ಕ್ರೈಂ ಬ್ಯೂರೋ, ಸುವರ್ಣ ನ್ಯೂಸ್.
