ಬೆಂಗಳೂರು :  ಇತ್ತೀಚಿಗೆ ಸಿವಿಲ್‌ ಕಾನ್‌ಸ್ಟೇಬಲ್‌ ಹುದ್ದೆ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದ 120 ಅಭ್ಯರ್ಥಿಗಳಿಗೆ ಶಾಶ್ವತವಾಗಿ ಪೊಲೀಸ್‌ ಇಲಾಖೆ ಪರೀಕ್ಷೆ ಬರೆಯದಂತೆ ನಿಷೇಧ ಹೇರಲಾಗಿದೆ.

ಈ ಸಂಬಂಧ ರಾಜ್ಯ ಪೊಲೀಸ್‌ ಇಲಾಖೆಯ ನೇಮಕಾತಿ ಮತ್ತು ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್‌ ನಿರ್ದೇಶಕ ರಾಘವೇಂದ್ರ ಎಚ್‌.ಔರಾದ್ಕರ್‌ ಆದೇಶ ಹೊರಡಿಸಿದ್ದಾರೆ. ನ.25ರಂದು ನಿಗದಿಯಾಗಿದ್ದ ಕಾನ್‌ಸ್ಟೇಬಲ್‌ ಹುದ್ದೆ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು. 

ಪ್ರಶ್ನೆ ಪತ್ರಿಕೆ ದಂಧೆಕೋರ ಶಿವಕುಮಾರಯ್ಯನಿಗೆ .8 ಲಕ್ಷ ಕೊಟ್ಟು ಪಡೆದು ಪರೀಕ್ಷೆಗೆ ಅಭ್ಯರ್ಥಿಗಳು ಸಿದ್ದತೆ ನಡೆಸಿದ್ದರು. ಈ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಸಿಸಿಬಿ ಪೊಲೀಸರು, ಪ್ರಶ್ನೆ ಪತ್ರಿಕೆ ಸಮೇತ ಕಿಂಗ್‌ಪಿನ್‌ ಹಾಗೂ ಅಭ್ಯರ್ಥಿಗಳನ್ನು ಬಂಧಿಸಿದ್ದರು.