ಆತ ಕಾನೂನು ಕಾಯಬೇಕಾದ ಪೊಲೀಸ್ ಪೇದೆ. ಆದರೆ ಆತನೇ ಕಾನೂನು ಮೀರಿ ಮನೆಗೊಬ್ಬಳು, ಹೊರಗೊಬ್ಬಳು ಅಂತ ಇಬ್ಬಿಬ್ಬರ ಜೊತೆ ಸಂಸಾರ ಹೂಡಿರುವ ಚಪಲ ಚನ್ನಿಗರಾಯ. ಇದೇ ಕಾರಣಕ್ಕೆ ಸಸ್ಪೆಂಡ್ ಆದ್ರೂ ಸಹ ಚಟ ಮಾತ್ರ ಬಿಡಲಿಲ್ಲ ಈ ಮಹಾರಾಯ. ಈ ಪೊಲೀಸಪ್ಪನ ಪ್ರೀತಿಗೆ ಬಿದ್ದು, ಹತ್ತು ವರ್ಷಗಳಿಂದ ಒದ್ದಾಡುತ್ತಿರುವ ಯುವತಿಯ ಕಣ್ಣೀರ ಕಥೆ ಇಲ್ಲಿದೆ ನೋಡಿ.

ಕಲಬುರ್ಗಿ(ಸೆ.27): ಪ್ರೀತಿ ಮಾಯಬಜಾರ್, ಪ್ರೀತಿಗೆ ಶರಣಾಗಿ ಈ ಯುವತಿ ಈಗ ತನ್ನ ಬದುಕಿಗಾಗಿ ಕಣ್ಣೀರು ಸುರಿಸುತ್ತಿದ್ದಾಳೆ.. ಅಷ್ಟಕ್ಕೂ ಇವಳ ದುರಂತ ಪ್ರೇಕಥೆಯ ನಾಯಕ ಇದೇ ಪೊಲೀಸ್ ಪೇದೆ. ಹೆಸರು ಆನಂದ್

ಕಲಬುರಗಿ ಜಿಲ್ಲೆ ನರೋಣಾ ಪೊಲೀಸ್ ಠಾಣೆಯ ಪೇದೆ ಆನಂದ್'​ಗೆ 10 ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ನರ್ಸಿಂಗ್ ಕೆಲಸ ಮಾಡುತ್ತಿದ್ದ ಈ ಯುವತಿಯ ಪರಿಚಯವಾಗಿದೆ. ಆಕಸ್ಮಿಕ ಪರಿಚಯ ಸ್ನೇಹವಾಗಿ, ಪ್ರೀತಿ, ಪ್ರೇಮ, ಮುಂದೆ ಕದ್ದು ಮುಚ್ಚಿ ದೇವಸ್ಥಾನದಲ್ಲಿ ಇವಳಿಗೆ ತಾಳಿ ಕಟ್ಟಿ ಸಂಸಾರವನ್ನೂ ಶುರು ಮಾಡಿದ ಪೊಲೀಸಪ್ಪ. ಆದರೆ 2015ರಲ್ಲಿ ಆನಂದ್ ಇನ್ನೊಂದು ಮದುವೆಯಾಗಿದ್ದಾನೆ.

ಇನ್ನೊಂದು ಮದುವೆಯಾಗಿದ್ದನ್ನ ವಿರೋಧಿಸಿ ಯುವತಿ ಠಾಣೆ ಮೆಟ್ಟಿಲೇರಿದಾಗ ಆನಂದ್ ಅಮಾನತಾಗಿದ್ದ. ಆದ್ರೆ ಇಲಾಖೆ ತನಿಖೆಗೂ ಮುನ್ನವೇ ಮತ್ತೆ ಕೆಲಸಕ್ಕೆ ಸೇರಿಕೊಂಡಿದ್ದ. ಇನ್ನೂ ಹೆಂಡತಿ ಹೆರಿಗೆಗೆಂದು ತವರಿಗೆ ಹೋದಾಗ ಮತ್ತೊಮ್ಮೆ ಆನಂದ್ ಈ ಯುವತಿಯನ್ನು ಮರಳು ಮಾಡಿದ್ದಾನೆ. ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾನಂತೆ. ಆದ್ರೆ, ನನಗೂ ಹೆಂಡತಿಯ ಸ್ಥಾನ ನೀಡು ಎಂದಾಗ ಆನಂದ್ ಹಾಗೂ ಆತನ ಹೆಂಡತಿ ಹಿಗ್ಗಾಮುಗ್ಗ ಥಳಿಸಿದ್ದಾರೆ.

ತೀವ್ರ ಏಟು ತಿಂದು ನರಳುತ್ತಿರುವ ಯುವತಿ ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪೊಲೀಸಪ್ಪನಿಂದ ನ್ಯಾಯ ಕೊಡಿಸಿ ಎಂದು ಅಂಗಲಾಚುತ್ತಿದ್ದಾಳೆ.