ಪೊಲೀಸ್ ಠಾಣೆ ಆವರಣದಲ್ಲೇ, ಪೊಲೀಸ್ ಪೇದೆಯೊಬ್ಬ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ‌ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು(ಮಾ.24): ಪೊಲೀಸ್ ಠಾಣೆ ಆವರಣದಲ್ಲೇ, ಪೊಲೀಸ್ ಪೇದೆಯೊಬ್ಬ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
H.A.L ಪೊಲೀಸ್ ಠಾಣೆಯ ಸ್ಪೆಷಲ್ ಬ್ರಾಂಚ್ ಪೇದೆ ಮಂಜುನಾಥ್ ಎಸಿಬಿ ಬಲೆಗೆ ಬಿದ್ದಿರುವ ಪೇದೆಯಾಗಿದ್ದು, ಈತ ಮನೆ ಖಾಲಿ ಮಾಡಿಸಿ ಕೊಡಿಸುವ ವಿಚಾರವಾಗಿ 1 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಅಗ್ರಿಮೆಂಟ್ ಮುಗಿದಿದ್ದರೂ ಮನೆಯಲ್ಲೇ ಠಿಕಾಣಿ ಹೂಡಿರುವ ಬಾಡಿಗೆದಾರರನ್ನು ಖಾಲಿ ಮಾಡಿಸುವುದನ್ನು ಬಿಟ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದರಿಂದ ನೊಂದ ಮನೆ ಮಾಲೀಕ ರಾಮ್ ಮೋಹನ್ ಎಸಿಬಿಗೆ ದೂರು ನೀಡಿದ್ದರು. ಅದರಂತೆ ನಿನ್ನೆ ರಾತ್ರಿ 8.30ರ ಸುಮಾರಿಗೆ ಹೆಚ್ ಎ ಎಲ್ ಪೊಲೀಸ್ ಠಾಣೆ ಆವರಣದಲ್ಲೇ ಡಿಮ್ಯಾಂಡ್ ಮಾಡಿದ್ದ ಎರಡು ಲಕ್ಷದಲ್ಲಿ ಮುಂಗಡವಾಗಿ ಒಂದು ಲಕ್ಷ ಲಂಚದ ಹಣವನ್ನು ಮನೆ ಮಾಲೀಕ ರಾಮ ಮೋಹನ್ ರಿಂದ ಪೇದೆ ಮಂಜುನಾಥ್ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾತ್ರಿ ಸುಮಾರು 2 ಗಂಟೆಯವರೆಗೂ ಆರೋಪಿ ಪೇದೆ ಮಂಜುನಾಥ್ ರನ್ನು ಹೆಚ್ ಎ ಎಲ್ ಪೊಲೀಸ್ ಠಾಣೆಯಲ್ಲೇ ಎಸಿಬಿ ಅಧಿಕಾರಿಗಳು ತೀವ್ರ ವಿಚಾರಣೆ ನಡಸಿದರು.
