Asianet Suvarna News Asianet Suvarna News

ಬೆಂಗಳೂರು ಪೊಲೀಸರಿಗೆ ಸುಪ್ರೀಂನಲ್ಲಿ ಗೆಲುವು; ಲೈವ್'ಬ್ಯಾಂಡ್'ಗೆ ಬೇಕು ಪೊಲೀಸ್ ಅನುಮತಿ

ಹೋಟೆಲ್, ರೆಸ್ಟೋರೆಂಟ್‌ಗಳು ಲೈವ್‌ಬ್ಯಾಂಡ್, ಡಿಸ್ಕೋ ಮತ್ತು ಕ್ಯಾಬರೆ ಪ್ರದರ್ಶನ ಆಯೋಜಿಸಬೇಕಾದರೆ ಪೊಲೀಸರ ಅನುಮತಿಯನ್ನು ಪಡೆದುಕೊಂಡಿರಬೇಕು ಎಂದು ಬೆಂಗಳೂರು ಪೊಲೀಸರು ಹೊರಡಿಸಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಕೂಡ ಎತ್ತಿ ಹಿಡಿದಿದೆ.

Police Consent Must and Shoul to Live band

ನವದೆಹಲಿ (ಜ.27): ಹೋಟೆಲ್, ರೆಸ್ಟೋರೆಂಟ್‌ಗಳು ಲೈವ್‌ಬ್ಯಾಂಡ್, ಡಿಸ್ಕೋ ಮತ್ತು ಕ್ಯಾಬರೆ ಪ್ರದರ್ಶನ ಆಯೋಜಿಸಬೇಕಾದರೆ ಪೊಲೀಸರ ಅನುಮತಿಯನ್ನು ಪಡೆದುಕೊಂಡಿರಬೇಕು ಎಂದು ಬೆಂಗಳೂರು ಪೊಲೀಸರು ಹೊರಡಿಸಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಕೂಡ ಎತ್ತಿ ಹಿಡಿದಿದೆ.

‘ಕರ್ನಾಟಕ ಪೊಲೀಸ್ ಕಾಯ್ದೆ -1963 ’ರ ಅಡಿಯಲ್ಲಿ ಬೆಂಗಳೂರು ಪೊಲೀಸರು 2005 ರಲ್ಲಿ ಸಾರ್ವಜನಿಕ ರಂಜನೆಯ ಸ್ಥಳಗಳ ಅನುಮತಿ ಮತ್ತು ನಿಯಂತ್ರಣ ಆದೇಶವನ್ನು ಹೊರಡಿಸಿದ್ದರು. ಈ ಆದೇಶವನ್ನು ರಾಜ್ಯ ಹೈಕೋರ್ಟ್ ಮಾನ್ಯ ಮಾಡಿ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಲೈವ್‌'ಬ್ಯಾಂಡ್ ಅಸೋಸಿಯೇಷನ್ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕರಿಸಿರುವ ಸುಪ್ರೀಂಕೋರ್ಟ್, ಜನರ ನೈತಿಕತೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸಲು ಈ ಆದೇಶ ಸಮಂಜಸವಾಗಿದೆ ಎಂದು ತನ್ನ 53 ಪುಟಗಳ ತೀರ್ಪಿನಲ್ಲಿ ಹೇಳಿದೆ.

ಹೈಕೋರ್ಟ್ ತೀರ್ಪಿಗೆ ಮನ್ನಣೆ:

2007 ರ ಏಪ್ರಿಲ್'ನಲ್ಲಿ ರಾಜ್ಯ ಹೈಕೋರ್ಟ್‌ನ ದ್ವಿಸದಸ್ಯ ಪೀಠ, ರೆಸ್ಟೋರೆಂಟ್‌ಗಳು, ಲೈವ್‌ಬ್ಯಾಂಡ್ ನಡೆಸಲು ಪೊಲೀಸರಿಂದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಆರ್.ಕೆ.ಅಗರ್ವಾಲ್ ಮತ್ತು ನ್ಯಾ. ಅಭಯ್ ಮನೋಹರ್ ಸಪ್ರೆ ಮತ್ತು ಅವರನ್ನು ಒಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ. ನ್ಯಾಯಪೀಠದ ಪರವಾಗಿ ನ್ಯಾ.ಸಪ್ರೆ  ವಿವರವಾದ ತೀರ್ಪು ಬರೆದಿದ್ದಾರೆ. ಅಗ್ನಿ ಅವಘಡಗಳು ಘಟಿಸದಂತೆ ಕ್ರಮ ಕೈಗೊಳ್ಳುವಂತೆಯೂ ತಮ್ಮ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ಬೆಂಗಳೂರಿನ ಕಮೀಷನರ್ 2005 ರ ಆದೇಶದ ಅಡಿಯಲ್ಲಿ ಲೈವ್‌ಬ್ಯಾಂಡ್ ಪ್ರದರ್ಶನಕ್ಕೆ ಅನುಮತಿ  ಪಡೆದುಕೊಳ್ಳಬೇಕು ಎಂದು ಲೈವ್‌ಬ್ಯಾಂಡ್ ಪ್ರದರ್ಶನದ ಬೋರ್ಡ್ ಹಾಕಿಕೊಂಡಿದ್ದ ರೆಸ್ಟೋರೆಂಟ್‌ಗಳ ಮಾಲೀಕರನ್ನು ಕರೆದು ಪೊಲೀಸ್ ಕಮೀಷನರ್ ಸೂಚನೆ ನೀಡಿದ್ದರು. ಆದರೆ ಈ ಕ್ರಮವನ್ನು ಲೈವ್‌ಬ್ಯಾಂಡ್ ನಡೆಸುತ್ತಿದ್ದ ರೆಸ್ಟೋರೆಂಟ್ ಮಾಲೀಕರು ವಿರೋಧಿಸಿದ್ದರು.

ನಿಯಂತ್ರಣ ತಪ್ಪಲ್ಲ: ಪ್ರತಿ ರಾಜ್ಯದ ಪೊಲೀಸರು ಮತ್ತು ಆಡಳಿತದ ಪ್ರಮುಖ ಕರ್ತವ್ಯ ಎಂದರೆ  ಸುರಕ್ಷತೆ ಮತ್ತು ನೈತಿಕತೆಯನ್ನು ರಾಜ್ಯದಲ್ಲಿ  ಕಾಪಾಡುವುದು. ಇವೆರಡು ವ್ಯಕ್ತಿಯ ಕಲ್ಯಾಣದ ಹೃದಯವಾಗಿದೆ. 2005  ರ ಆದೇಶ ಮತ್ತು ಕಾಯ್ದೆ ಜನರ ಸುರಕ್ಷತೆ ಮತ್ತು ನೈತಿಕತೆಯನ್ನು ಗಮನದಲ್ಲಿರಿಸಿಕೊಂಡಿದೆ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಜನಸಾಮಾನ್ಯರ ಹಿತದ ದೃಷ್ಟಿಯಿಂದ ಯಾವುದೇ ವ್ಯವಹಾರ, ವ್ಯಾಪಾರಕ್ಕೆ ಸೂಕ್ತ ನಿಯಂತ್ರಣ ಕ್ರಮಗಳನ್ನು ವಿಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಈ ಆದೇಶ ಮೂಲಭೂತ ಹಕ್ಕಿಗೆ ಧಕ್ಕೆ ತರುವುದಿಲ್ಲ. ಈ ಕಾನೂನು ಮತ್ತು ನಿಯಮಗಳು ಕಾನೂನಾತ್ಮಕವಾಗಿ ಮತ್ತು ಸಂವಿಧಾನ ಬದ್ಧವಾಗಿದೆ. ೨೦೦೫ರ ಪೊಲೀಸ್ ಕಮಿಷನರ್ ಆದೇಶವೂ ಅವರ ಶಾಸನಾತ್ಮಕ ಅಧಿಕಾರದ ಚಾಲನೆಯಾಗಿದೆ. ಅನುಮತಿ ಪಡೆದು ವ್ಯವಹಾರ ನಡೆಸುವಂತೆ ನಿಯಂತ್ರಣ ಹೇರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕಿಗಿಂತ ಸಾರ್ವಜನಿಕ ಹಿತ, ಕಲ್ಯಾಣ ಮತ್ತು ಜನ ಸಾಮಾನ್ಯರ ಸುರಕ್ಷತೆಗೆ ಹೆಚ್ಚು ಒತ್ತು ಯಾವಾಗಲೂ ಇರುತ್ತದೆ. ಇಂತಹ ವ್ಯವಹಾರಗಳನ್ನು ಮಾಡಲು ಯಾವುದೇ  ವ್ಯಕ್ತಿಗೆ ಯಾವುದೇ ನಿರ್ಬಂಧಗಳಿಲ್ಲ. ಅದಾಗ್ಯೂ ಒಂದು ವೇಳೆ ಇಂತಹ ವ್ಯವಹಾರ ಮಾಡಲು ಮುಂದಾದರೆ ಆ ಸಂದರ್ಭದಲ್ಲಿ ಆ ವ್ಯವಹಾರಕ್ಕೆ ಸಂಬಂಧಿಸಿದಂತೆ ಇರುವ ನಿಯಮಗಳು ಮತ್ತು  ಶಾಸನಬದ್ಧ ನಿಯಂತ್ರಣ ಕ್ರಮಗಳನ್ನು ಪಾಲಿಸಬೇಕು. ನಾನು ನಿಯಮಗಳನ್ನು, ನಿಯಂತ್ರಣ ಕ್ರಮಗಳನ್ನು ಪಾಲಿಸದೇ ವ್ಯವಹಾರ ನಡೆಸುತ್ತೇನೆ ಎಂದು ಯಾರು ಹೇಳುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.

ಆದೇಶ ಪಾಲಿಸದಿದ್ದರೆ ರೆಸ್ಟೋರೆಂಟ್ ಮುಚ್ಚಿ

ಈವರೆಗೆ ಅನುಮತಿ ನೀಡಲಾಗಿರುವ ರೆಸ್ಟೋರೆಂಟ್‌ಗಳು ಕೂಡ 2005 ರ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿವೆಯೇ?, ಇಲ್ಲವೇ ಎಂಬುದನ್ನು ಬೆಂಗಳೂರಿನ ಪೊಲೀಸ್ ಕಮೀಷನರ್ ಪರಿಶೀಲನೆ ನಡೆಸಬೇಕು. ಒಂದು ವೇಳೆ ಅನುಮತಿ ಪಡೆಯದೇ ರೆಸ್ಟೋರೆಂಟ್ ನಡೆಸುತ್ತಿರುವವರಿಗೆ 2005  ರ ಆದೇಶದ ಪಾಲನೆ ನಡೆಸಿ ಅನುಮತಿ ಪಡೆಯಲು ಒಂದಿಷ್ಟು ಕಾಲವಕಾಶವನ್ನು ನೀಡಬೇಕು. ಒಂದು ವೇಳೆ ಕಾಲವಕಾಶವನ್ನು ನೀಡಿಯೂ ಆದೇಶದ ಪಾಲನೆ ಮಾಡದ ರೆಸ್ಟೊರೆಂಟ್‌ಗಳನ್ನು ಮುಚ್ಚಬೇಕು. ಶಬ್ದ ಮಾಲಿನ್ಯದಿಂದ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಗ್ನಿ ಅವಘಡದಂತಹ ಅನಾಹುತ ನಡೆಯದಂತೆ ಸೂಕ್ತ ಸುರಕ್ಷಿತ ಕ್ರಮವನ್ನು ತಜ್ಞರ ತಂಡದ ಸಲಹೆಯ ಮೇರೆಗೆ ಕೈಗೊಳ್ಳಬೇಕು. ಈ ಎಲ್ಲಾ ಅಂಶಗಳನ್ನು ಲೈಸೆನ್ಸ್ ನೀಡುವ ಸಂದರ್ಭದಲ್ಲಿ ಪೊಲೀಸ್ ಕಮೀಷನರ್ ಖಾತ್ರಿ ಮಾಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

 -ವರದಿ: ರಾಕೇಶ್ ಎನ್ ಎಸ್

Follow Us:
Download App:
  • android
  • ios