‘ಮುತ್ಯಾಲನಗರದಲ್ಲಿ ವಿಮಲಾ ಎಂಬ ವೃದ್ಧೆಯಿದ್ದು, ಅವರ ಪುತ್ರಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ಮಕ್ಕಳು ಒಳ್ಳೆಯ ಕೆಲಸದಲ್ಲಿದ್ದು, ಕೋಟ್ಯಂತರ ರುಪಾಯಿ ಸಂಪಾದನೆ ಮಾಡುತ್ತಾರೆ. ಇವರನ್ನು ಅಪಹರಿಸಿದರೆ ಕೋಟಿಗಟ್ಟಲೇ ಸಂಪಾದನೆ ಮಾಡಬಹುದು. ಅವರ ಮನೆಯ ಎಲ್ಲಾ ಸದಸ್ಯರ ಮಾಹಿತಿಯಿದೆ ಎಂದು ಕೃಷ್ಣ ತನ್ನ ಇಬ್ಬರು ಸಹಚರರಿಗೆ ತಿಳಿಸಿ, ವಿಮಲಾ ಅವರನ್ನು ಅಪಹರಿಸಿದ್ದಾನೆ.
ಬೆಂಗಳೂರು(ಜ.26): ಪೊಲೀಸರ ಸೋಗಿನಲ್ಲಿ ಬಂದು ವೃದ್ಧೆಯನ್ನು ಅಪಹರಿಸಿದ್ದ ಮೂವರು ಆರೋಪಿಗಳನ್ನು ಯಶವಂತಪುರ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಾದ 12 ಗಂಟೆಯೊಳಗೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಪಹರಣಕ್ಕೊಳಗಾಗಿದ್ದ ವೃದ್ಧೆ ವಿಮಲಾ (71) ಅವರನ್ನು ರಕ್ಷಿಸಿದ್ದಾರೆ.
‘ಮುತ್ಯಾಲನಗರದಲ್ಲಿ ವಿಮಲಾ ಎಂಬ ವೃದ್ಧೆಯಿದ್ದು, ಅವರ ಪುತ್ರಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ಮಕ್ಕಳು ಒಳ್ಳೆಯ ಕೆಲಸದಲ್ಲಿದ್ದು, ಕೋಟ್ಯಂತರ ರುಪಾಯಿ ಸಂಪಾದನೆ ಮಾಡುತ್ತಾರೆ. ಇವರನ್ನು ಅಪಹರಿಸಿದರೆ ಕೋಟಿಗಟ್ಟಲೇ ಸಂಪಾದನೆ ಮಾಡಬಹುದು. ಅವರ ಮನೆಯ ಎಲ್ಲಾ ಸದಸ್ಯರ ಮಾಹಿತಿಯಿದೆ ಎಂದು ಕೃಷ್ಣ ತನ್ನ ಇಬ್ಬರು ಸಹಚರರಿಗೆ ತಿಳಿಸಿ, ವಿಮಲಾ ಅವರನ್ನು ಅಪಹರಿಸಿದ್ದಾನೆ.
ವಿಮಲಾ ಅವರ ಹಿರಿಯ ಮಗ ಶಿವಕುಮಾರ್ ಕೆಲ ದಿನಗಳ ಹಿಂದೆ ಬುಲೆಟ್ ಖರೀದಿಸಿದ್ದು, ಈ ವಿಚಾರ ತಿಳಿದಿದ್ದ ಕೃಷ್ಣ ಶಿವಕುಮಾರ್‌ಗೆ ಕರೆ ಮಾಡಿ, ಬುಲೆಟ್ ಖರೀದಿ ಮಾಡಿದಕ್ಕೆ ಬಹುಮಾನ ಬಂದಿದೆ. ಯಶವಂತಪುರ ಬಳಿಯ ಬ್ಲೂಡಾರ್ಟ್ ಕೊರಿಯರ್ ಬಳಿ ಬರುವಂತೆ ಹೇಳಿದ್ದಾರೆ. ಇದನ್ನು ನಂಬಿದ ಶಿವಕುಮಾರ್ ಕೊರಿಯರ್ ಕಚೇರಿಗೆ ಹೋಗಿ ವಿಚಾರಿಸಿದಾಗ ಸತ್ಯಾಂಶ ತಿಳಿದಿದೆ. ಬಳಿಕ ವಾಪಸ್ ಬಂದಾಗ ಮನೆಗೆ ಬೀಗ ಹಾಕಿದ್ದು, ತಾಯಿ ವಿಮಲಾ ಆಸ್ಪತ್ರೆಗೆ ಹೋಗಿರಬಹುದು ಎಂದು ಶಿವಕುಮಾರ್ ಭಾವಿಸಿದ್ದಾರೆ. ಈ ನಡುವೆ ಮನೆಗೆ ಬಂದಿದ್ದ ಆರೋಪಿಗಳು ನಾವು ಕ್ರೈಂ ಪೊಲೀಸರು, ನಿಮ್ಮ ಸೊಸೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾಗಾಗಿ ಶಿವಕುಮಾರ್‌ನನ್ನು ಬಂಧಿಸಿದ್ದೇವೆ. ಕೂಡಲೇ ಠಾಣೆಗೆ ಬರುವಂತೆ ಹೇಳಿದ್ದಾರೆ. ಆಗ ವೃದ್ಧೆ ‘ನೀವು ನಿಜವಾದ ಪೊಲೀಸರೇ, ಸಮವಸ್ತ್ರವಿಲ್ಲ' ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಆರೋಪಿಗಳು ಪೊಲೀಸ್ ಗುರುತಿನ ಚೀಟಿ ತಂದಿಲ್ಲ. ಚಾಲನಾ ಪರವಾನಿಗೆ ನೋಡಿ ಎಂದು ತೋರಿಸಿ, ಮನೆಯಿಂದ ಕರೆತಂದಿದ್ದಾರೆ.
ಈ ವೇಳೆ ಕಾರಿನಲ್ಲಿ ಕೊಲೆ ಆರೋಪಿಯನ್ನು ಕೂರಿಸಿದ್ದೇವೆ. ಏನು ಮಾತನಾಡದೇ ಕುಳಿತುಕೊಳ್ಳಿ ಎಂದು ಬೆದರಿಕೆಯೊಡ್ಡಿ, ಕೆಲ ದೂರು ಹೋಗುತ್ತಿದ್ದಂತೆ ಕಣ್ಣಿಗೆ ಬಟ್ಟೆಕಟ್ಟಿ, ವಿಜಯಕುಮಾರ್ ವಾಸಿಸುತ್ತಿರುವ ಹೆಬ್ಬಾಳದ ಮನೆಗೆ ಕರೆದೊಯ್ದಿದ್ದಾರೆ. ಬಳಿಕ ಅವರ ಬಳಿಯಿದ್ದ ಸರ ಹಾಗೂ ಇತರೆ ಚಿನ್ನಾಭರಣಗಳನ್ನು ಕಸಿದುಕೊಂಡಿದ್ದಾರೆ. ಕೆಲ ಸಮಯದ ಬಳಿಕ ಶಿವಕುಮಾರ್‌ಗೆ ಫೋನ್ ಮಾಡಿದ ಆರೋಪಿಗಳು ‘ನಿಮ್ಮ ತಾಯಿ ಸುರಕ್ಷಿತವಾಗಿದ್ದಾರೆ. ಪೊಲೀಸ್ ಬಳಿ ಹೋಗಬೇಡ. ನಿನ್ನ ಸಹೋದರನ ನಂಬರ್ ಕೊಡು' ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದ ಗಾಬರಿಗೊಂಡ ಶಿವಕುಮಾರ್, ನಂಬರ್ ನೀಡಿದ್ದಾರೆ. ಬಳಿಕ ಶಿವಕುಮಾರ್ ಸಹೋದರ ಸುಂದರ್‌ಗೆ ಕರೆ ಮಾಡಿದ ಆರೋಪಿಗಳು. 1.5 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಸಹೋದರರು ಯಶವಂತಪುರ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಾಗುತ್ತಿದ್ದಂತೆ ಕಾರ‍್ಯಪ್ರವೃತ್ತ ರಾದ ಪೊಲೀಸರು ಮೂರು ವಿಶೇಷ ತಂಡ ರಚಿಸಿ, ಕಾರ್ಯಾಚರಣೆಗಿಳಿಸಿದ್ದಾರೆ. ಅಪಹರಣಕಾರರು ಮಾಡಿದ್ದ ಕರೆ ಆಧಾರದ ಮೇಲೆ ಹೊಸಕೋಟೆ, ವೈಟ್ಫೀಲ್ಡ್ ಹಾಗೂ ಹೆಬ್ಬಾಳದಲ್ಲಿ ಮೂರು ತಂಡಗಳು ಹುಡುಕಾಟ ನಡೆಸಿವೆ. ಯಶವಂತಪುರ ಇನ್ಸ್ಟೆಕ್ಟರ್ ಮುದ್ದರಾಜು ಅವರ ತಂಡ ಹೆಬ್ಬಾಳದಲ್ಲಿ ಹುಡುಕಾಟ ನಡೆಸಿದಾಗ ಆರೋಪಿ ಕೃಷ್ಣ, ಹೆಬ್ಬಾಳದಿಂದ ನಾಗೇನಹಳ್ಳಿಗೆ ಆಟೋದಲ್ಲಿ ಬಂದು ಮನೆಗೆ ಹೋಗುತ್ತಿದ್ದಾಗ ಪೊಲೀಸರ ಕಂಡು ಓಡಲು ಯತ್ನಿಸಿದ್ದಾನೆ. ಕಾಲಿಗೆ ಗಾಯಮಾಡಿಕೊಂಡಿದ್ದ ಈತ ಕುಂಟುತ್ತಿದ್ದರಿಂದ ವೇಗವಾಗಿ ಓಡಲು ಸಾಧ್ಯವಾಗಿಲ್ಲ. ಕೂಡಲೇ ಪೊಲೀಸರು ಹಿಂಬಾಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಇತರೆ ಆರೋಪಿಗಳನ್ನು ಬಂಧಿಸಿ, ವೃದ್ಧೆಯನ್ನು ರಕ್ಷಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾಸ್ವಿಫ್ಟ್ ಕಾರು, ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ತಿಳಿಸಿದರು.
