ಇರಳು ಹೊತ್ತಿನಲ್ಲಿ ನೈಸ್‌ ರಸ್ತೆಯಲ್ಲಿ ಯುವತಿಯರನ್ನು ಬಳಸಿಕೊಂಡು ಸಾರ್ವಜನಿಕರ ಸುಲಿಗೆ ಮಾಡುತ್ತಿದ್ದ ದರೋಡೆಕೋರರ ತಂಡವು ಎಲೆಕ್ಟ್ರಾನಿಕ್‌ಸಿಟಿ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ.

ಬೆಂಗಳೂರು: ಇರಳು ಹೊತ್ತಿನಲ್ಲಿ ನೈಸ್‌ ರಸ್ತೆಯಲ್ಲಿ ಯುವತಿಯರನ್ನು ಬಳಸಿಕೊಂಡು ಸಾರ್ವಜನಿಕರ ಸುಲಿಗೆ ಮಾಡುತ್ತಿದ್ದ ದರೋಡೆಕೋರರ ತಂಡವು ಎಲೆಕ್ಟ್ರಾನಿಕ್‌ಸಿಟಿ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ.

ಬೇಗೂರು ನಿವಾಸಿ ಸಾವನ್‌ ಅಲಿಯಾಸ್‌ ಬಬ್ಲೂ, ಮೋನಿಶಾ, ಮುತ್ತು, ಪುನೀತ್‌ ಅಲಿಯಾಸ್‌ ಕಾಡಿ, ತುಳಸಿರಾಮ್‌, ಅರುಣ್‌ ಏಸುರಾಜ್‌, ಸ್ಟೀಫನ್‌ ರಾಜ್‌ ಅಲಿಯಾಸ್‌ ಮೂಕಡಿ, ವಿಘ್ನೇಶ್‌ ಅಲಿಯಾಸ್‌ ಡೀಲಾ, ದೊಡ್ಡಬಳ್ಳಾಪುರದ ಅಮರ್‌, ಬನ್ನೇರುಘಟ್ಟದ ಹುಲ್ಲವಹಳ್ಳಿ ಗ್ರಾಮದ ಶಾಂತಕುಮಾರ್‌, ಪೆದ್ದಬೆಳಗೊಂಡಪಲ್ಲಿ ಕೇಶವ ಮೂರ್ತಿ ಹಾಗೂ ಆರ್‌.ಟಿ.ನಗರದ ದೀಪಕ್‌ ಜಾಜ್‌ರ್‍ ಬಂಧಿತರು. ಆರೋಪಿಗಳಿಂದ ರೂ.15 ಲಕ್ಷ ಮೌಲ್ಯ‡ದ ಚಿನ್ನಾಭರಣ ಹಾಗೂ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚಿಗೆ ನೈಸ್‌ ರಸ್ತೆಯಲ್ಲಿ ಸುಲಿಗೆ ಕೃತ್ಯಗಳ ಬಗ್ಗೆ ವರದಿಯಾಗುತ್ತಿದ್ದವು. ಇದರಿಂದ ಎಚ್ಚೆತ್ತ ಪೊಲೀಸರು, ಅನುಮಾನಗೊಂಡು ಬೇಗೂರಿನ ಬಬ್ಲೂನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದರೋಡೆ ಕೃತ್ಯಗಳು ಬಯಲಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾತ್ರಿ ಕಾರ್ಯಾಚರಣೆ: ನೈಸ್‌ ರಸ್ತೆ ಬದಿಯಲ್ಲಿ ರಾತ್ರಿ ವೇಳೆ ಅಂದದ ಉಡುಪು ಧರಿಸಿ ಮೋನಿಶಾ ಆಕರ್ಷಕವಾಗಿ ನಿಲ್ಲುತ್ತಿದ್ದಳು. ಆಗ ಆಕೆಯ ಸಾಂಗತ್ಯಕ್ಕೆ ಮುಂದಾಗುತ್ತಿದ್ದ ಜನರೇ ಈ ಸುಲಿಗೆಕೋರರ ಬಲೆಗೆ ಬೀಳುತ್ತಿದ್ದರು. ರಸ್ತೆ ಬದಿ ನಿಲ್ಲುತ್ತಿದ್ದ ಮೋನಿಶಾಳ ಮೋಹಕ್ಕೊಳಗಾಗುತ್ತಿದ್ದ ಕೆಲವರು, ಆಕೆಯನ್ನು ಮಾತನಾಡಿಸಲು ವಾಹನ ನಿಲ್ಲಿಸುತ್ತಿದ್ದರು. ಆಗ ಪ್ರೀತಿಪೂರ್ವಕ ನುಡಿಗಳನ್ನಾಡುತ್ತ ತನ್ನಲ್ಲಿಗೆ ಬಂದವರನ್ನು ಅಲ್ಲಿನ ನಿರ್ಜನ ಪ್ರದರ್ಶನಕ್ಕೆ ಆಕೆ ಕರೆದೊಯ್ಯುತ್ತಿದ್ದಳು. ಅಲ್ಲಾಗಲೇ ಮಾರಕಾಸ್ತ್ರಗಳ ಜತೆ ದರೋಡೆ ಸಜ್ಜಾಗಿರುತ್ತಿದ್ದ ಬಬ್ಲೂ ಹಾಗೂ ಆತನ ಸಹಚರರು, ಮೋನಿಶಾ ಸಾಂಗತ್ಯ ಬಯಸಿದವರಿಗೆ ಜೀವ ಬೆದರಿಕೆ ಹಾಕಿ ಹಣ ಹಾಗೂ ಚಿನ್ನಾಭರಣ ಕಸಿದು ಪರಾರಿಯಾಗುತ್ತಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.

ನೈಸ್‌ ರಸ್ತೆಯಲ್ಲಿ ಸುಲಿಗೆ ಕೃತ್ಯ ಸಂಬಂಧ ವಾರದ ಅವಧಿಯೊಳಗೆ ಎಲೆಕ್ಟ್ರಾನಿಕ್‌ಸಿಟಿ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿದ್ದವು. ಅಲ್ಲದೆ ಈ ಪ್ರಕರಣಗಳ ದೂರುದಾರರು ಹೇಳಿಕೆಯಲ್ಲಿ ಸಾಮ್ಯತೆ ಕಂಡು ಬಂದಿತು. ಹಾಗಾಗಿ ಕೃತ್ಯದಲ್ಲಿ ಒಂದೇ ತಂಡ ಪಾಲ್ಗೊಂಡಿರುವ ಖಚಿತಪಡಿಸಿಕೊಂಡ ಅಧಿಕಾರಿಗಳು, ನೈಸ್‌ ರಸ್ತೆ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ನಿಗಾವಹಿಸಿತು. ಅಲ್ಲದೆ ಹೆದ್ದಾರಿಗಳಲ್ಲಿ ದರೋಡೆ ಕೃತ್ಯ ನಡೆಸುತ್ತಿದ್ದ ಸಾವನ್‌ ಮೇಲೆ ಅನುಮಾನಗೊಂಡ ಪೊಲೀಸರು, ಕೂಡಲೇ ಆತನನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ಪ್ರಕರಣಗಳು ಪತ್ತೆಯಾದವು ಎಂದು ಅಧಿಕಾರಿಗಳು ಹೇಳಿದ್ದಾರೆ.

ಯಾರಿದು ಬಬ್ಲೂ?: ಕಳೆದ ಐದಾರು ವರ್ಷಗಳಿಂದ ಕಾನೂನು ಬಾಹಿರ ಚಟುವಟಿಕೆಯಲ್ಲಿ ಬೇಗೂರಿನ ಸಾವನ್‌ ಅಲಿಯಾಸ್‌ ಬಬ್ಲೂ ತೊಡಗಿದ್ದು, ಆತನ ವಿರುದ್ಧ ದರೋಡೆ, ಕೊಲೆ, ಸುಲಿಗೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳು ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ದಾಖಲಾಗಿವೆ.

ಪಿಯುಸಿಯಲ್ಲಿ ಶೇ.86ರಷ್ಟುಅಂಕ ಪಡೆದಿದ್ದ ಪ್ರತಿಭಾವಂತ ವಿದ್ಯಾರ್ಥಿ ಈ ಬಬ್ಲೂ. ಆದರೆ, ಕಾಲೇಜು ದಿನಗಳಲ್ಲಿ ದುಶ್ಚಟಗಳಿಗೆ ದಾಸನಾದ ಅವನು, ಕೊನೆಗೆ ಸುಲಿಗೆಕೋರನಾಗಿ ಕುಖ್ಯಾತಿ ಗಳಿಸಿದ್ದ. ದ್ವಿತೀಯ ಪಿಯುಸಿ ಓದುವಾಗ ಅವನಿಗೆ ಕುಖ್ಯಾತ ರೌಡಿ ರಘು ಅಲಿಯಾಸ್‌ ಚಪ್ಪರ್‌ ಸ್ನೇಹವಾಗಿತ್ತು. ಈ ಗೆಳೆತದ ಪರಿಣಾಮ 2011ರಲ್ಲಿ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಹಾಕಿದ ಅವನು, ನಂತರ ಕುಖ್ಯಾತ ದರೋಡೆಕೋರರಾದ ಸಂತೋಷ್‌ ಅಲಿಯಾಸ್‌ ಗಲಾಟೆ, ಆಸ್ಗರ್‌ ಅಲಿಯಾಸ್‌ ದೋಸಗ, ಆನಂದ ಅಲಿಯಾಸ್‌ ಕೆಂಬಾರ ಹಾಗೂ ಸುನೀಲ್‌ ಜತೆ ಅಪರಾಧ ಕೃತ್ಯಗಳನ್ನು ಬಬ್ಲೂ ಎಸಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಹೀಗೆ ಕಳೆದ ಏಳು ವರ್ಷಗಳಲ್ಲಿ ಬಬ್ಲೂ ಹಲವು ಕಾನೂನು ಬಾಹಿರ ಕೃತ್ಯ ನಡೆಸಿದ್ದಾನೆ. ಇತ್ತೀಚಿಗೆ ನೈಸ್‌ ರಸ್ತೆಯಲ್ಲಿ ತಂಡ ಕಟ್ಟಿಕೊಂಡು ದರೋಡೆ ನಡೆಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫಿನಾಯಿಲ್‌ ಕುಡಿದು ನಾಟಕವಾಡಿದ್ದ!

ವರ್ಷದ ಹಿಂದೆ ದರೋಡೆ ಪ್ರಕರಣ ಸಂಬಂಧ ಬಬ್ಲೂನನ್ನು ಬನ್ನೇರುಘಟ್ಟಠಾಣೆ ಪೊಲೀಸರು ಬಂಧಿಸಿದ್ದರು. ಆಗ ಠಾಣೆಯ ಶೌಚಾಲಯದಲ್ಲಿ ಫಿನಾಯಿಲ್‌ ಕುಡಿದು ಆತ್ಮಹತ್ಯೆ ಯತ್ನಿಸಿ ಅವನು ಹೈಡ್ರಾಮಾ ಸೃಷ್ಟಿಸಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದ. ಬಳಿಕ ಈ ಪ್ರಕರಣದಲ್ಲಿ ಜಾಮೀನು ಪಡೆದು ಅವನು ಹೊರ ಬಂದು ಮತ್ತೆ ನೈಸ್‌ ರಸ್ತೆಯಲ್ಲಿ ಹಾವಳಿ ಇಟ್ಟಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.