ಬೆಂಗಳೂರು (ನ.16): ಪ್ರತಿಷ್ಠಿತ ಕಂಪನಿಗಳ ನಕಲಿ ಇ-ಮೇಲ್‌ ಐಡಿ ಹಾಗೂ ವೆಬ್‌ಸೈಟ್‌ಗಳನ್ನು ಸೃಷ್ಟಿಸಿ ಲಕ್ಷಾಂತರ ರುಪಾಯಿ ವಂಚಿಸುತ್ತಿದ್ದ ಇಬ್ಬರು ಆರೋಪಿ​ಗ​ಳ​ನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ಜೈಪುರ ನಿವಾಸಿ ವಿವೇಕ್‌ (31) ಮತ್ತು ನವದೆಹಲಿಯ ಜಂಗ್‌ಪುರ ನಿವಾಸಿ ಸುಶಾಂತ (23) ಬಂಧಿತರು. ಆರೋಪಿಗಳು ದೆಹಲಿಯ ಮಾರ್ಕ್ಸ್ಕಾ್ಯನ್‌ ಡಾಟ್‌ ಕೋ. ಡಾಟ್‌ ಇನ್‌ ಎಂಬ ಕಂಪನಿಯಲ್ಲಿ ಕೆಲಸ ಮಾ​ಡು​ತ್ತಿ​ದ್ದರು. ಆ ಕಂಪನಿಯ ಮಾಲೀಕ, ನಿವೃತ್ತ ಐಪಿಎಸ್‌ ಅಧಿಕಾರಿ ಪುತ್ರ ಅಭಿಷೇಕ್‌ ಜತೆ ಸೇರಿ​ ಪ್ರತಿಷ್ಠಿತ ಕಂಪನಿಗಳ ನಕಲಿ ವೈಬ್‌ಸೈಟ್‌ ಹಾಗೂ ಇ-ಮೇಲ್‌ ಐಡಿಗಳನ್ನು ಸೃಷ್ಟಿಸಿ ಕಂಪನಿಗಳ ಷೇರು​ದಾರರಿಗೆ ನೋಟಿಸ್‌ ಹಾಗೂ ತಪ್ಪು ಸಂದೇಶ ನೀಡುತ್ತಿದ್ದರು. ಜತೆಗೆ ತಮ್ಮ ಕಂಪನಿ ಉತ್ತಮ​ವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೋಟ್ಯಂತರ ರು. ಗಳಿಸಬಹುದು ಎಂದು ಆಕ​ರ್ಷಿ​ಸುತ್ತಿದ್ದರು. ಇದರಿಂದ ಇತರ ಕಂಪನಿಗಳಿಗೆ ಕೋಟ್ಯಂತರ ರು.ನಷ್ಟವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?: ಆರೋಪಿ ಸುಶಾಂತ 3 ವರ್ಷ​ಗಳ ಹಿಂದೆ ಬೆಂಗಳೂರಿನ ಐಪ್ಲೆಕ್ಸ್‌ ಡಾಟ್‌.ಆ್ಯಂಟಿ ಪೈರಸಿ ಕಂಪನಿಯಲ್ಲಿ ಕೆಲಸ ಮಾಡು​ತ್ತಿ​ದ್ದು, ಇತ್ತೀಚೆಗೆ ದೆಹಲಿಯ ಮಾರ್ಕ್ಸ್ಕಾ್ಯನ್‌ ಡಾಟ್‌ ಕೋ.ಡಾಟ್‌ ಇನ್‌ ಎಂಬ ಕಂಪನಿ ಸೇರಿದ್ದ. ಈ ವೇಳೆ ಮೊದಲ ಆರೋಪಿ ವಿವೇಕ್‌ ಪರಿ​ಚ​ಯ​ವಾಗಿದ್ದಾನೆ. ಕಂಪನಿಯ ಮಾಲೀಕ ಅಭಿಷೇಕ್‌ ಈ ಇಬ್ಬರು ಆರೋಪಿಗಳಿಗೆ ತಲಾ ರೂ.80 ಸಾವಿರ ಹಣದ ಆಸೆ ತೋರಿಸಿದ್ದಾನೆ. ಆಸೆಗೆ ಬಿದ್ದ ಆರೋಪಿ ಸುಶಾಂತ, ವಿವೇಕ್‌ ಜತೆ ಸೇರಿ ತನ್ನ ಹಿಂದಿನ ಕಂಪನಿಯ www.aiplex.com ವೆಬ್‌ಸೈಟ್‌ಅನ್ನು www.aiplex.us ಆಗಿ ಬದಲಾಯಿಸಿ ಕಂಪನಿಯ ಷೇರುದಾರರಿಗೆ ಇ-ಮೇಲ್‌ ಸಂದೇಶ ಕಳುಹಿಸಿ, ಬಳಿಕ ನೋಟಿಸ್‌ ನೀಡುತ್ತಿದ್ದರು. ಇದರಿಂದ ಗಾಬ​ರಿ​ಗೊಂಡು ಷೇರುದಾರರು ಕಂಪನಿ​ಯ​ಲ್ಲಿ​ರು​ವ ಷೇರುಗಳನ್ನು ವಾಪಸ್‌ ನೀಡುವಂತೆ ಒತ್ತಾಯ ಮಾಡುತ್ತಿದ್ದರು. ಇದರಿಂದ ಕಂಪನಿಗೆ ಲಕ್ಷಾಂತರ ರುಪಾಯಿ ನಷ್ಟವಾಗಿದೆ. ಈ ಸಂಬಂಧ ಐಪ್ಲೆಕ್ಸ್‌ ಕಂಪನಿ ಮಾಲೀಕರು ವಿಜಯ​ನಗರ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು, ಸೈಬರ್‌ ಕ್ರೈಂ ಸಿಬ್ಬಂದಿ ಸಹಾಯ ಪಡೆದು ಆರೋಪಿಗಳನ್ನು ರಾಜಸ್ಥಾನ, ದೆಹಲಿಯಲ್ಲಿ ಬಂಧಿಸಿದ್ದರು. ಅಲ್ಲದೆ, ಆರೋಪಿ​ಗ​ಳು ಸಾಮಾಜಿಕ ಜಾಲತಾಣಗಳಾದ ಯು​ಟ್ಯೂ​ಬ್‌, ಗೂಗಲ್‌, ಟ್ವಿಟರ್‌ಗಳ ಕೆಲ ವಿಡಿ​ಯೋ ಚಿತ್ರಣಗಳನ್ನು ನಿಷ್ಕ್ರಿಯಗೊಳಿಸುತ್ತಿದ್ದರು. ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.