ಚಿನ್ನಾಭರಣ ಅಂಗಡಿ ಮಾಲೀಕರನ್ನು ಬೆದರಿಸಿ ಹಣ ವಸೂಲಿಗೆ ಮುಂದಾಗಿದ್ದ ಆರೋಪಿಗಳು

ಬೆಂಗಳೂರು (ಅ.10): ಪತ್ರಕರ್ತರ ಸೋಗಿನಲ್ಲಿ ಚಿನ್ನಾಭರಣ ಅಂಗಡಿಯ ಮಾಲೀಕರಿಗೆ ಧಮಕಿ ಹಾಕಿ, ಹಣ ಸುಲಿಯಲು ಮುಂದಾಗಿದ್ದ ಇಬ್ಬರು ನಕಲಿ ಪತ್ರಕರ್ತರನ್ನು ಬಂಧಿಸಿರುವ ತಲಘಟ್ಟಪುರ ಪೊಲೀಸರು, ಇಬ್ಬರನ್ನೂ ಜೈಲಿಗಟ್ಟಿದ್ದಾರೆ.

ಕನಕಪುರ ಮುಖ್ಯರಸ್ತೆ ನಿವಾಯಿ ರುದ್ರಜಿತ್‌(26) ಹಾಗೂ ಜಿಗಣಿ ನಿವಾಸಿ ಸೋಮಶೇಖರ್‌(23) ಬಂಧಿತರು. ಆರೋಪಿಗಳಿಂದ ಇನ್ನೂ ಚಾಲನೆಗೆ ಬಾರದ ಖಾಸಗಿ ಟಿ.ವಿ.ಚಾನಲ್‌ವೊಂದರ ನಕಲಿ ಗುರುತಿನ ಚೀಟಿ, ಮೊಬೈಲ್‌ ಹಾಗೂ ಇಂಡಿಕಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ಕೆಲ ದಿನಗಳ ಹಿಂದೆ ಆರೋಪಿಗಳು ವಾಜರಹಳ್ಳಿಯ ಮಾತಾಜಿ ಜ್ಯುವೆಲ​ರ್ಸ್ ಮತ್ತು ಮಹಾಲಕ್ಷ್ಮಿ ಜ್ಯುವೆಲ​ರ್ಸ್ ಎಂಬ ಅಂಗಡಿಗಳಿಗೆ ತೆರಳಿದ್ದು, ತಾವು ‘ವಿಜಯಾ' ಎಂಬ ಸುದ್ದಿ ವಾಹಿನಿ ವರದಿಗಾರರು ಎಂದು ಪರಿಚಯಿಸಿಕೊಂಡಿದ್ದರು. ಬಳಿಕ ಎರಡೂ ಅಂಗಡಿಗಳಲ್ಲಿ ಒಂದೊಂದು ಚಿನ್ನದ ಉಂಗುರ ಖರೀದಿಸಿದ್ದರು. ಆ ನಂತರ ಮಲ್ಲೇಶ್ವರದಲ್ಲಿರುವ ಅಯೋಧ್ಯಾ ಗೋಲ್ಡ್‌ ಚೆಕಿಂಗ್‌ ಸೆಂಟರ್‌ಗೆ ತೆರಳಿ ಉಂಗರಗಳ ಪರಿಶುದ್ಧತೆ ತಪಾಸಣೆ ಮಾಡಿಸಿದ್ದರು. ಬಳಿಕ ಚಿನ್ನದ ಪರಿಶುದ್ಧತೆ ಕುರಿತ ನಕಲಿ ಪ್ರತಿ ತೆಗೆದುಕೊಂಡು ಬಂದಿದ್ದರು.

ಸುದ್ದಿ ಪ್ರಸಾರದ ಬೆದರಿಕೆ: ಆರೋಪಿಗಳು ಅ.3ರಂದು ಉಂಗುರ ಖರೀದಿಸಿದ್ದ ಅಂಗಡಿಗಳಿಗೆ ಬಂದಿದ್ದು, ಮಾಲೀಕರಾದ ಬಾಕರ್‌ ರಾಮ್‌ ಮತ್ತು ಮಾಣಿಕ್‌ ಚಂದ್‌ಗೆ ವಿಜಯಾ ಟಿವಿ ವರದಿಗಾರರು ಎಂದು ಪರಿಚಯಿಸಿಕೊಂಡಿದ್ದರು. ಬಳಿಕ ಅವರಲ್ಲಿ ನಂಬಿಕೆ ಹುಟ್ಟಿಸಲು ನಕಲಿ ಗುರುತಿನ ಚೀಟಿ ತೋರಿಸಿದ್ದರು.

ನಂತರ ಏಕಾಏಕಿ ವರಸೆ ಬದಲಿಸಿದ ಆರೋಪಿಗಳು, ಗ್ರಾಹಕರಿಗೆ ಕಡಿಮೆ ಗುಣಮಟ್ಟದ ಆಭರಣ ಮಾರಾಟ ಮಾಡುತ್ತಿದ್ದು, ಈ ಮೂಲಕ ಗ್ರಾಹಕರಿಗೆ ವಂಚಿಸುತ್ತಿರುವ ಬಗ್ಗೆ ತಮಗೆ ದೂರು ಬಂದಿದೆ. ಈ ಬಗ್ಗೆ ಖಚಿತ ಪಡಿಸಿಕೊಂಡಿದ್ದೇವೆ. ಹಾಗಾಗಿ ಪೊಲೀಸರಿಗೆ ದೂರು ನೀಡಿ, ನಿಮ್ಮ ಅಂಗಡಿಗಳ ಬಗ್ಗೆ ಸುದ್ದಿ ಮಾಡಿ ಪ್ರಸಾರ ಮಾಡುತ್ತೇವೆ. ಒಂದು ವೇಳೆ ಸುದ್ದಿ ಪ್ರಸಾರ ಆಗಬಾರದೆಂದರೆ, ರೂ.50 ಸಾವಿರ ನೀಡಬೇಕು ಎಂದು ಬೆದರಿಸಿದ್ದು, ಹಣ ನೀಡಲು ವ್ಯಾಪಾರಿಗಳು ಒಪ್ಪಿದಾಗ ಹಣ ತೆಗೆದುಕೊಳ್ಳಲು ಮತ್ತೆ ಬರುವುದಾಗಿ ಹೇಳಿ ಸ್ಥಳದಿಂದ ತೆರಳಿದ್ದರು.

ಮತ್ತೆ ಬಂದು ಸಿಕ್ಕಿಬಿದ್ದರು: ಹಣ ಪಡೆಯುವ ಉದ್ದೇಶದಿಂದ ಅ.8ರಂದು ಅಂಗಡಿಗೆ ಬಂದಿರುವ ಆರೋಪಿಗಳು, ಮಾಲೀಕರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇಂದೇ ಹಣ ನೀಡಬೇಕು. ಇಲ್ಲವಾದರೆ ಸುದ್ದಿ ಪ್ರಸಾರ ಮಾಡುತ್ತೇವೆ ಎಂದು ಏರು ದನಿಯಲ್ಲಿ ಬೆದರಿಸಿದ್ದರು.

ಬಳಿಕ ಅಂಗಡಿ ಸಮೀಪದ ಅಡಿಗಾಸ್‌ ಹೋಟೆಲ್‌ನಲ್ಲಿ ಕುಳಿತುಕೊಳ್ಳುವುದಾಗಿ ಹೇಳಿ, ಅಲ್ಲಿಗೆ ಹಣ ತರುವಂತೆ ಸೂಚಿಸಿ ಹೋಟೆಲ್‌ ಒಳಗೆ ತೆರಳಿದ್ದರು. ಇವರ ಕಾಟ ತಾಳಲಾರದೇ ಮಾಲೀಕರು ತಕ್ಷಣ ಠಾಣೆಗೆ ಬಂದು ದೂರು ನೀಡಿದ್ದರು. ಬಳಿಕ ಸಮಯ ವ್ಯರ್ಥ ಮಾಡದೇ ನೇರ ಹೋಟೆಲ್‌ಗೆ ಹೋಗಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾವು ನಕಲಿ ಪರ್ತಕರ್ತರು ಎಂದು ಆರೋಪಿಗಳಿಬ್ಬರು ಒಪ್ಪಿಕೊಂಡಿದ್ದಾಗಿ ತಲಘಟ್ಟಪುರ ಪೊಲೀಸರು ಮಾಹಿತಿ ನೀಡಿದ್ದಾರೆ.