-ಪಿಎನ್‌ಬಿ ಹಗರಣದ ಆರೋಪಿ ವಶಕ್ಕೆ ಕೇಂದ್ರ ಒತ್ತಡ-ಓಡಾಟ ನಿರ್ಬಂಧಿಸಲೂ ಆ್ಯಂಟಿಗಾ ಸರ್ಕಾರಕ್ಕೆ ಪತ್ರ - (ಪಿಎನ್‌ಬಿ) ಹಗರಣದ ಆರೋಪಿ ಮೆಹುಲ್ ಚೋಕ್ಸಿಗೆ ಎದುರಾಗಿದೆ ಸಂಕಷ್ಟ

ನವದೆಹಲಿ (ಜು. 31): ಭಾರತೀಯ ತನಿಖಾಧಿಕಾರಿಗಳಿಂದ ಪಾರಾಗಲು ಕೆರಿಬಿಯನ್ ದ್ವೀಪ ಸಮೂಹದಲ್ಲಿರುವ ಹಾಗೂ ಬಾರ್ಬುಡ ದೇಶದ ಪೌರತ್ವ ಪಡೆದಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹಗರಣದ ಆರೋಪಿ ಮೆಹುಲ್ ಚೋಕ್ಸಿಗೆ ಈಗ ಅಲ್ಲೂ ಸಂಕಷ್ಟ ಎದುರಾಗಿದೆ.

ಚೋಕ್ಸಿ ಇರುವಿಕೆಯ ಸುಳಿವು ಲಭಿಸುತ್ತಿದ್ದಂತೆ ಕಾರ್ಯಪ್ರವೃತ್ತವಾಗಿರುವ ಕೇಂದ್ರ ಸರ್ಕಾರ, ಆ್ಯಂಟಿಗಾ ಹಾಗೂ ಬಾರ್ಬುಡ ಸರ್ಕಾರವನ್ನು ಸಂಪರ್ಕಿಸಿ, ಚೋಕ್ಸಿಯನ್ನು ವಶಕ್ಕೆ ಪಡೆಯುವಂತೆ ಕೋರಿಕೊಂಡಿದೆ.
ಆ್ಯಂಟಿಗಾ ಸರ್ಕಾರದ ಜತೆ ಸಂಪರ್ಕದಲ್ಲಿರುವ ವಿದೇಶಾಂಗ ಸಚಿವಾಲಯವು, ಚೋಕ್ಸಿಯ ರಸ್ತೆ, ವಿಮಾನ ಹಾಗೂ ಸಮುದ್ರ ಪ್ರಯಾಣಕ್ಕೆ ನಿರ್ಬಂಧ ಹೇರುವಂತೆಯೂ ಒತ್ತಡ ಹೇರಿದೆ.

ಆ್ಯಂಟಿಗಾದಲ್ಲಿ ಚೋಕ್ಸಿ ಇದ್ದಾನೆ ಎಂಬ ಮಾಹಿತಿ ಲಭಿಸುತ್ತಿದ್ದಂತೆ ಕೆರಿಬಿಯನ್ ದ್ವೀಪದ ಜಾರ್ಜ್‌ಟೌನ್ನಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗಳು ಆ್ಯಂಟಿಗಾ ಸರ್ಕಾರಕ್ಕೆ ಲಿಖಿತವಾಗಿ ಹಾಗೂ ಮೌಖಿಕವಾಗಿ ಮನವಿಯೊಂದನ್ನು ನೀಡಿದ್ದು, ಚೋಕ್ಸಿ ಇರುವಿಕೆ ಬಗ್ಗೆ ದೃಢಪಡಿಸುವಂತೆ ಕೋರಿಕೊಂಡಿದ್ದಾರೆ. ಒಂದು ವೇಳೆ ಆತ ಇರುವುದು ನಿಜವೇ ಆದಲ್ಲಿ ವಶಕ್ಕೆ ಪಡೆಯಬೇಕು, ಆತನ ಪ್ರಯಾಣಕ್ಕೆ ನಿರ್ಬಂಧ ಹೇರಬೇಕು ಎಂದು ಕೋರಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉದ್ಯಮ ವಿಸ್ತರಣೆ ನೆಪದಲ್ಲಿ ಆ್ಯಂಟಿಗಾ ಪಾರ್ಸ್‌ಪೋರ್ಟ್ ಅನ್ನು ಚೋಕ್ಸಿ ಕಳೆದ ವರ್ಷವೇ ಪಡೆದಿರುವ ಮಾಹಿತಿ ತಡವಾಗಿ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಆ್ಯಂಟಿಗಾ ಪಾಸ್‌ಪೋರ್ಟ್ ಪಡೆದರೆ 132 ದೇಶಗಳಿಗೆ ವೀಸಾ ಇಲ್ಲದೇ ಓಡಾಡಬಹುದಾಗಿದೆ. ಕಳೆದ ಫೆಬ್ರವರಿಯಲ್ಲಿ ಭಾರತ ಸರ್ಕಾರ ಚೋಕ್ಸಿ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಿತ್ತು. ಅದಕ್ಕೂ ಮುನ್ನವೇ ಆತ ಪರ‌್ಯಾಯ ವ್ಯವಸ್ಥೆ ಮಾಡಿಕೊಂಡಿರುವುದು ಈಗ ಗೊತ್ತಾಗಿದೆ.

13 ಸಾವಿರ ಕೋಟಿ ರು. ಮೌಲ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಮುಖ್ಯ ರೂವಾರಿಯಾಗಿರುವ ನೀರವ್ ಮೋದಿಯ ಚಿಕ್ಕಪ್ಪನೇ ಈ ಮೆಹುಲ್ ಚೋಕ್ಸಿ.