ನವದೆಹಲಿ[ಆ.04]: ಬಿಜೆಪಿ ಶ್ರಮಿಕ ವರ್ಗದ ಪಕ್ಷವಾಗಿದೆ. ಯಾವುದೇ ಒಂದು ಕುಟುಂಬಕ್ಕೆ ಸೇರಿದ ಪಕ್ಷವಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಬಿಜೆಪಿ ಸಂಸದರಿಗಾಗಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಪಕ್ಷದ ಕಾರ್ಯಕರ್ತರನ್ನು ಮಗುವನ್ನು ಪೋಷಿಸುವ ತಾಯಿಗೆ ಹೋಲಿಸಿದ ಮೋದಿ, ಕಾರ್ಯಕರ್ತರೇ ಪಕ್ಷದ ಜೀವಾಳ. ಅವರನ್ನು ಎಂದಿಗೂ ನಿರ್ಲಕ್ಷಿಸುವಂತಿಲ್ಲ. ನೀವು ಮಂತ್ರಿಯಾದರೂ, ಸಂಸದರಾದರೂ ಪಕ್ಷದ ಕಾರ್ಯಕರ್ತರ ಜೊತೆ ನಿರಂತರ, ಉತ್ತಮ ಒಡನಾಟ ಹೊಂದಿರಬೇಕು. ಅಲ್ಲದೇ, ಪಕ್ಷ ಸಾಧಿಸಿದ ಎಲ್ಲ ಯಶಸ್ಸಿನ ಕೀರ್ತಿಯನ್ನು ಪ್ರಧಾನಿ ಕಾರ್ಯಕರ್ತರಿಗೆ ಸಲ್ಲತಕ್ಕದ್ದು ಎಂದರು.

ಇದೇ ವೇಳೆ ನಮ್ಮದು ನೈಜ ಪಕ್ಷವೇ ಹೊರತೂ ‘ಜೋಡಿಸಿದ’ ಪಕ್ಷವಲ್ಲ. ಮೇಲಾಗಿ ನಾವು ಈ ಹಂತ ತಲುಪಲು ನಮ್ಮ ಸಿದ್ಧಾಂತ ಕಾರಣವೇ ಹೊರತೂ, ಯಾವುದೇ ಕೌಟುಂಬಿಕ ಹಿನ್ನೆಲೆ ಅಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

ಮುಂದುವರಿದು ಮಾತನಾಡಿದ ಪ್ರಧಾನಿ, ಸಂಸದರು, ಸಚಿವರು ವಯಸ್ಸಿನ ಅಂತರವಿದ್ದರೂ ನಿರಂತರ ಕಲಿಕಾ ಮನೋಭಾವ ಹೊಂದಿರಬೇಕು. ಇದರಿಂದ ನಾವು ಹೆಚ್ಚಿನದ್ದನ್ನು ಕಲಿಯಲು ಸಾಧ್ಯ ಎಂದು ಸಲಹೆ ನೀಡಿದರು. ತ್ರಿಪುರಾದ ಸ್ಥಳೀಯ ಚುನಾವಣೆಯಲ್ಲಿ ಪಕ್ಷದ ಸಾಧಿಸಿದ ಯಶಸ್ಸಿನ ಬಗ್ಗೆ ಸಭೆಯಲ್ಲಿ ಶ್ಲಾಘನೆ ವ್ಯಕ್ತವಾಯಿತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್‌, ಸಚಿವ ಅರ್ಜುನ್‌ ರಾಮ್‌ ಮೇಘಾವಲ್‌ ಸಭೆಯನ್ನುದ್ದೇಶಿಸಿ ಮಾತನಾಡಿದರು.