ನವದೆಹಲಿ: ಕೃಷಿ ಹೊರತುಪಡಿಸಿದರೆ ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಎರಡನೇ ಅತಿದೊಡ್ಡ ವಲಯವಾಗಿರುವ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ವಲಯ (ಎಂಎಸ್‌ಎಂಇ)ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಉಡುಗೊರೆ ನೀಡಿದ್ದಾರೆ. ಹೆಚ್ಚಿನ ಉದ್ಯೋಗ ಸೃಷ್ಟಿಮತ್ತು ಎಂಎಸ್‌ಎಂಇಗಳಿಗೆ ನೆರವಾಗುವ ನಿಟ್ಟಿನಲ್ಲಿ ಕೇವಲ 59 ನಿಮಿಷಗಳಲ್ಲೇ ಸಾಲ ಒದಗಿಸುವುದೂ ಸೇರಿದಂತೆ 12 ಹೊಸ ಯೋಜನೆಗಳನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ.

ಎಂಎಸ್‌ಎಂಇಗಳಿಗೆ ಸೂಕ್ತ ಸಾಲ ಪ್ರಮಾಣದಲ್ಲಿ ಸಾಲ ಸಿಗುತ್ತಿಲ್ಲ, ಜಿಎಸ್‌ಟಿ ಜಾರಿ ಬಳಿಕ ವಲಯಕ್ಕೆ ಹೊಡೆತ ಬಿದ್ದಿದೆ, ಕೆಲ ಕಾನೂನುಗಳು ಎಂಎಸ್‌ಎಂಇ ವಲಯಕ್ಕೆ ಮಾರಕವಾಗಿವೆ ಎಂಬ ದೂರುಗಳ ನಡುವೆಯೇ ಕೇಂದ್ರ ಸರ್ಕಾರ ಹೊಸ ಯೋಜನೆಗಳ ಮೂಲಕ ಅವುಗಳ ನೆರವಿಗೆ ಧಾವಿಸಿದೆ.

ಉಡುಗೊರೆ:

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆ (ಎಂಎಸ್‌ಎಂಇ)ಗಳಿಗೆ ಬೆಂಬಲ ಮತ್ತು ನೆರವು ನೀಡುವ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮೋದಿ, ಜಿಎಸ್‌ಟಿ ನೊಂದಾಯಿತ ಎಂಎಸ್‌ಎಂಇಗಳಿಗೆ www.psbloanin59min.com  ಮೂಲಕ ಕೇವಲ 59 ನಿಮಿಷಗಳಲ್ಲೇ 1 ಕೋಟಿ ರು.ವರೆಗೂ ಸಾಲ ನೀಡಲಾಗುವುದು. ಜೊತೆಗೆ 1 ಕೋಟಿ ರು.ವರೆಗಿನ ಸಾಲಕ್ಕೆ ಶೇ.2ರಷ್ಟುಬಡ್ಡಿ ಸಬ್ಸಿಡಿ ನೀಡಲಾಗುವುದು, ಇದಲ್ಲದೇ ಪ್ರೀ ಶಿಪ್‌ಮೆಂಟ್‌ ಮತ್ತು ಪೋಸ್ಟ್‌ ಶಿಪ್‌ಮೆಂಟ್‌ ಸಾಲಕ್ಕೆ ನೀಡಲಾಗುತ್ತಿದ್ದ ಶೇ.3ರಷ್ಟುಬಡ್ಡಿ ರಿಯಾಯಿತಿಯನ್ನು ಶೇ.5ಕ್ಕೆ ಹೆಚ್ಚಿಸಲಾಗುವುದು ಎಂದು ಪ್ರಕಟಿಸಿದರು.

ಇದಲ್ಲದೆ ವಲಯದಲ್ಲಿನ ಇನ್ಸ್‌ಪೆಕ್ಟರ್‌ ರಾಜ್‌ ನೀತಿಗೆ ಬ್ರೇಕ್‌ ಹಾಕಲು ಸರ್ಕಾರ ಮಹತ್ವದ ನಿರ್ಧಾರ, ಕೈಗೊಂಡಿದೆ. ಇನ್ನು ಮುಂದೆ ಯಾವ ಕಾರ್ಖಾನೆಗಳಿಗೆ ಯಾವ ಅಧಿಕಾರಿ ತಪಾಸಣೆಗೆ ಹೋಗಬೇಕು ಎನ್ನುದನ್ನು ಕಂಪ್ಯೂಟರ್‌ ಮೂಲಕವೇ ನಿರ್ಧರಿಸಲಾಗುವುದು. ಹೀಗೆ ತಪಾಸಣೆಗೆ ಹೋದ ಅಧಿಕಾರ ಅಲ್ಲಿಯ ವರದಿಯನ್ನು 48 ಗಂಟೆಗಳ ಒಳಗೆ ಪೋರ್ಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಇದೊಂದು ಅತ್ಯಂತ ಮಹತ್ವದ ನಿರ್ಧಾರ ಎಂದು ಮೋದಿ ಪ್ರಕಟಿಸಿದರು. ಜೊತೆಗೆ ಎಂಎಎಸ್‌ಎಂಇ ವಲಯದ ಅಭಿವೃದ್ಧಿಗೆ ಪೂರಕವಾದ ಇತರೆ ಹಲವು ಕ್ರಮಗಳನ್ನು ಪ್ರಧಾನಿ ಪ್ರಕಟಿಸಿದರು.

59 ನಿಮಿಷದಲ್ಲೇ ಸಾಲ:

ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಸಾಲ ಸೌಲಭ್ಯ ನೀಡಲು www.psbloanin59min.com ಎಂಬ ವೆಬ್‌ ಆರಂಭಿಸಲಾಗಿದೆ. ಈ ಮೂಲಕ ಜಿಎಸ್ಟಿನೊಂದಾಯಿತ ಉದ್ದಿಮೆಗಳು ಕೇವಲ 59 ನಿಮಿಷದಲ್ಲೇ 1 ಕೋಟಿ ರು. ವರೆಗೂ ಸಾಲಸೌಲಭ್ಯ ಪಡೆಯಬಹುದಾಗಿದೆ. ಇಷ್ಟುದಿನ ಉದ್ದಿಮೆ ಸಾಲ ಪಡೆಯಲು 20ರಿಂದ 25 ದಿನಗಳು ಬೇಕಾಗುತ್ತಿದ್ದವು. ಜೊತೆಗೆ ಸಾಲದ ಹಣವನ್ನು ವಿತರಿಸಲು 7ರಿಂದ 8 ದಿನಗಳು ಬೇಕಾಗುತ್ತಿದ್ದವು.

ಶೇ.2ರಷ್ಟುಬಡ್ಡಿ ರಿಯಾಯಿತಿ:

ಜಿಎಸ್‌ಟಿಯಲ್ಲಿ ನೋಂದಾವಣೆಗೊಂಡ ಎಲ್ಲಾ ಎಂಎಸ್‌ಎಂಇಗಳು 1 ಕೋಟಿ ರು. ವರೆಗಿನ ಸಾಲದ ಬಡ್ಡಿಯ ಮೇಲೆ ಶೇ.2ರಷ್ಟುಬಡ್ಡಿ ಸಬ್ಸಿಡಿ ಪಡೆಯಲಿವೆ. ಇದಲ್ಲದೆ ಪ್ರೀ ಶಿಪ್‌ಮೆಂಟ್‌ ಮತ್ತು ಪೋಸ್ಟ್‌ ಶಿಪ್‌ಮೆಂಟ್‌ ಸಾಲಕ್ಕೆ ನೀಡಲಾಗುತ್ತಿದ್ದ ಶೇ.3ರಷ್ಟುಬಡ್ಡಿ ರಿಯಾಯಿತಿಯನ್ನು ಶೇ.5ಕ್ಕೆ ಹೆಚ್ಚಿಸಲಾಗುವುದು.

ಶೇ.25ರಷ್ಟುಸರಕು ಖರೀದಿ:  ಸಾರ್ವಜನಿಕ ವಲಯದ ಕಂಪನಿಗಳು ಎಂಎಸ್‌ಎಂಇನಿಂದ ಶೇ.20ರಷ್ಟುವಸ್ತುಗಳನ್ನು ಖರೀದಿಸಬೇಕು ಎಂಬ ನಿಯಮವಿತ್ತು. ಈ ಪ್ರಮಾಣವನ್ನು ಕಳೆದ ತ್ರೈಮಾಸಿಕದಿಂದ ಶೇ.25ಕ್ಕೆ ಏರಿಸಲಾಗಿದೆ. ಜೊತೆಗೆ ಮಹಿಳಾ ಉದ್ದಿಮೆಗಳಿಂದ ಸರ್ಕಾರಿ ಕಂಪನಿಗಳು ಶೇ.3ರಷ್ಟುಸರಕುಗಳನ್ನು ಖರೀದಿಸುವುದು ಕಡ್ಡಾಯ ಮಾಡಲಾಗಿದೆ.

ಸರಳ ನಿಯಮ: ಕೈಗಾರಿಕೆ ಆರಂಭಿಸಲು ಅತ್ಯಗತ್ಯವಾದ ಪರಿಸರ ಅನುಮತಿ ಪಡೆಯಲು ಇರುವ ನಿಯಮಗಳನ್ನು ಸರಳಗೊಳಿಸಲಾಗುವುದು. ನೀರು ಮತ್ತು ಪರಿಸರ ಅನುಮತಿ ಪತ್ರವನ್ನು ವಿಲೀನಗೊಳಿಸಲಾಗುವುದು.

ಒಂದೇ ರಿಟರ್ನ್ಸ್: 8 ಕಾರ್ಮಿಕ ಕಾನೂನು ಮತ್ತು 10 ಕೇಂದ್ರೀಯ ಕಾನೂನುಗಳಿಗೆ ಸಂಬಂಧಿಸಿದಂತೆ ಇನ್ನು ಎಂಎಸ್‌ಎಂಇಗಳು ಇನ್ನು ವರ್ಷಕ್ಕೆ ಒಂದು ಬಾರಿ ಮಾತ್ರವೇ ರಿಟರ್ನ್ಸ್ ಸಲ್ಲಿಸಿದರೆ ಸಾಕು ಎಂಬ ನಿಯಮ ಜಾರಿಗೊಳಿಸಲಾಗುವುದು. ಜೊತೆಗೆ ಸಣ್ಣ ಅಪರಾಧಗಳಿಗೆ ವಿಧಿಸುತ್ತಿದ್ದ ದಂಡವನ್ನು ಕಡಿಮೆ ಮಾಡಲು ಶೀಘ್ರವೇ ಸುಗ್ರೀವಾಜ್ಞೆ ಹೊರಡಿಸುವ ಭರವಸೆಯನ್ನೂ ಕೇಂದ್ರ ಸರ್ಕಾರ ನಿಡಿದೆ.