ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರ ಕ್ಷೇತ್ರ ಬದಲಾವಣೆಯ ಸುದ್ದಿಯ ಬೆನ್ನಲ್ಲೇ ಇದೀಗ ಬಿಜೆಪಿಯ ಮತ್ತಷ್ಟು ರಾಜ್ಯ ನಾಯಕರ ಕ್ಷೇತ್ರಗಳು ಕೂಡಾ ಬದಲಾವಣೆಯಾಗುವ ಸಾಧ್ಯತೆಗಳಿವೆ. ಈ ಮಧ್ಯೆ ನವಂಬರ್​ನಿಂದಲೇ ಪಕ್ಷದ ಪ್ರಚಾರಕ್ಕೆ ರಂಗು ನೀಡಲು ಬಿಜೆಪಿ ನಿರ್ಧರಿಸಿದ್ದು, ನವೆಂಬರ್​ 2ರಂದು ಪ್ರಧಾನಿ ಮೋದಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.

ಬೆಂಗಳೂರು (ಸೆ.18): ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರ ಕ್ಷೇತ್ರ ಬದಲಾವಣೆಯ ಸುದ್ದಿಯ ಬೆನ್ನಲ್ಲೇ ಇದೀಗ ಬಿಜೆಪಿಯ ಮತ್ತಷ್ಟು ರಾಜ್ಯ ನಾಯಕರ ಕ್ಷೇತ್ರಗಳು ಕೂಡಾ ಬದಲಾವಣೆಯಾಗುವ ಸಾಧ್ಯತೆಗಳಿವೆ. ಈ ಮಧ್ಯೆ ನವಂಬರ್​ನಿಂದಲೇ ಪಕ್ಷದ ಪ್ರಚಾರಕ್ಕೆ ರಂಗು ನೀಡಲು ಬಿಜೆಪಿ ನಿರ್ಧರಿಸಿದ್ದು, ನವೆಂಬರ್​ 2ರಂದು ಪ್ರಧಾನಿ ಮೋದಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.

ಕ್ಷೇತ್ರ ಬಿಟ್ಟು ಹೊರಡಲಿದ್ದಾರಾ ಇನ್ನಷ್ಟು ಬಿಜೆಪಿ ನಾಯಕರು?

1983ರಿಂದ ಕೈ ಹಿಡಿದಿದ್ದ ಶಿಕಾರಿಪುರವನ್ನು ಬಿಟ್ಟು ಉತ್ತರ ಕರ್ನಾಟಕದತ್ತ ತೆರಳುವಂತೆ ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಬಿಜೆಪಿ ಹೈಕಮಾಂಡ್​ ನಿರ್ದೇಶನ ನೀಡಿದೆ. ಆದರೆ ಈ ನಿರ್ದೇಶನ ರಾಜ್ಯ ಬಿಜೆಪಿಯ ಇನ್ನಷ್ಟು ನಾಯಕರಿಗೆ ಅನ್ವಯವಾಗುವ ಸಾಧ್ಯತೆಗಳಿವೆ. ತಮ್ಮ ಕ್ಷೇತ್ರದಾಚೆಗೂ ವರ್ಚಸ್ಸು ಹೊಂದಿರುವ ಹಲವು ನಾಯಕರನ್ನು 2018ರಲ್ಲಿ ಬೇರೆ ಕ್ಷೇತ್ರಗಳಿಂದ ಕಣಕ್ಕಿಳಿಸುವ ಬಗ್ಗೆ ಕೇಂದ್ರೀಯ ಬಿಜೆಪಿ ಮಟ್ಟದಲ್ಲಿ ಚರ್ಚೆಯಾಗಿದ್ದು, ಒಬ್ಬ ನಾಯಕನಿಂದ ಎರಡು ಕ್ಷೇತ್ರ ಗಳಿಸಿಕೊಳ್ಳುವ ಗೇಮ್​ ಪ್ಲಾನ್​ ಅನ್ನು ಬಿಜೆಪಿ ಹೈಕಮಾಂಡ್​ ಸಿದ್ಧಪಡಿಸಿದೆ. ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ವಿಧಾನ ಪರಿಷತ್​ ವಿಪಕ್ಷ ನಾಯಕ ಕೆ.ಎಸ್​. ಈಶ್ವರಪ್ಪ ಶಿವಮೊಗ್ಗದಿಂದ ಕೊಪ್ಪಳ, ವಿಧಾನಸಭೆ ವಿಪಕ್ಷ ಉಪನಾಯಕ ಪದ್ಮನಾಭನಗರದಿಂದ ರಾಜರಾಜೇಶ್ವರಿನಗರ ಅಥವಾ ಚನ್ನಪಟ್ಟಣ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಚಿಕ್ಕಮಗಳೂರಿನಿಂದ ಬೇಲೂರು ಅಥವಾ ಹಾಸನ ಮತ್ತು ವಿಧಾನ ಪರಿಷತ್​ ಸದಸ್ಯ ವಿ. ಸೋಮಣ್ಣ ಗೋವಿಂದರಾಜನಗರದಿಂದ ಹನೂರು ಅಥವಾ ಗುಂಡ್ಲುಪೇಟೆಯಿಂದ ಸ್ಫರ್ಧೆ ಮಾಡುವ ಸಾಧ್ಯತೆಗಳಿವೆ. ಇವರಲ್ಲದೇ ಇನ್ನಷ್ಟು ನಾಯಕರ ಕ್ಷೇತ್ರಗಳು ಕೂಡಾ ಬದಲಾಗಲಿವೆ ಎನ್ನಲಾಗುತ್ತಿದೆ.

ನವಂಬರ್​ನಿಂದಲೇ ಮೋದಿಯಿಂದ ಚುನಾವಣಾ ಪ್ರಚಾರಕ್ಕೆ ಚಾಲನೆ

ಈ ಮಧ್ಯೆ ಫೆಬ್ರವರಿಯಲ್ಲಿ ವಿಧಾನಸಭಾ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ನವಂಬರ್​ನಿಂದಲೇ ರಾಜ್ಯದಲ್ಲಿ ಪ್ರಚಾರದ ರಂಗು ಏರಿಸಲು ಕೇಂದ್ರೀಯ ಬಿಜೆಪಿ ನಿರ್ಧರಿಸಿದೆ. ನವೆಂಬರ್​ 2ರಂದು ಸರ್ಕಾರಿ ಕಾರ್ಯಕ್ರಮದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಅವತ್ತೇ ಪರಿವರ್ತನಾ ರ್ಯಾಲಿಯ ಸಮಯದಲ್ಲೇ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಮೋದಿ ಕೈಯಲ್ಲಿ ಚಾಲನೆ ಕೊಡಿಸಲು ಬಿಜೆಪಿ ಹೈಕಮಾಂಡ್​ ವೇಳಾಪಟ್ಟಿ ಸಿದ್ದಪಡಿಸಿದೆ. ಒಟ್ಟು 120 ಬೃಹತ್​ ರ್ಯಾಲಿಗಳನ್ನು ಆಯೋಜಿಸಲು ಬಿಜೆಪಿ ಚಿಂತಿಸಿದ್ದು, 25 ರ್ಯಾಲಿಗಳಲ್ಲಿ ಮೋದಿ ಅವರಿಂದ ಭಾಷಣ ಮಾಡಿಸಲು ಯೋಜಿಸಲಾಗಿದೆ.