Asianet Suvarna News Asianet Suvarna News

ರಾಜ್ಯಕ್ಕೆ ಇಂದು ಮೋದಿ : ಬೃಹತ್ ಸಮಾವೇಶ

 ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ [ಫೆ.10] ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ರಣಕಹಳೆ ಮೊಳಗಿಸಲಿದ್ದಾರೆ.

PM Narendra Modi To Visit Karnataka On feb 10
Author
Bengaluru, First Published Feb 10, 2019, 7:36 AM IST

ಹುಬ್ಬಳ್ಳಿ :  ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ [ಫೆ.10] ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ. ಬಿಜೆಪಿ ರಾರ‍ಯಲಿಯನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ರಾಜ್ಯದಲ್ಲಿ ಕಮಲ ಪಕ್ಷದ ಪರ ಚುನಾವಣಾ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ಗಬ್ಬೂರು ಕ್ರಾಸ್‌ ಬಳಿಯ ಕೆಎಲ್‌ಇ ಮೈದಾನದ 60 ಎಕರೆ ಪ್ರದೇಶದಲ್ಲಿ ಸಮಾವೇಶ ನಡೆಯಲಿದೆ. ಸಂಜೆ 6.50ಕ್ಕೆ ಮೋದಿ ಅವರ ಭಾಷಣ ಆರಂಭವಾಗಲಿದ್ದು, ಧಾರವಾಡ, ಉತ್ತರ ಕನ್ನಡ, ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸುಮಾರು 3 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಮೋದಿ ಅವರ ರಾರ‍ಯಲಿಗೆ ಹುಬ್ಬಳ್ಳಿ ಸರ್ವ ರೀತಿಯಲ್ಲೂ ಸಜ್ಜಾಗಿದ್ದು, ಪ್ರಮುಖ ವೃತ್ತಗಳು ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಕೇಸರಿ ಧ್ವಜ, ಕಟೌಟ್‌, ಬ್ಯಾನರ್‌ ರಾರಾಜಿಸುತ್ತಿವೆ.

4 ಪ್ರತ್ಯೇಕ ವೇದಿಕೆ:

ಸಮಾವೇಶ ಸ್ಥಳದಲ್ಲಿ ಒಟ್ಟು 4 ವೇದಿಕೆಗಳನ್ನು ನಿರ್ಮಿಸಲಾಗಿದೆ. 60/30 ಚದರಡಿಯ ಮುಖ್ಯ ವೇದಿಕೆಯಲ್ಲಿ ಮೋದಿ ಅವರು ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ, ಭಾಷಣ ಮಾಡಲಿದ್ದಾರೆ. ಈ ವೇದಿಕೆಯಲ್ಲೇ ಸಚಿವರು, ಸಂಸದರು, ಶಾಸಕರು ಸೇರಿ 40 ಗಣ್ಯರು ವೇದಿಕೆ ಮೇಲೆ ಇರಲಿದ್ದಾರೆ. ಇದರ ಪಕ್ಕದಲ್ಲೇ 60/20 ಚದರಡಿಯ ಎರಡು ವೇದಿಕೆಗಳನ್ನು ನಿರ್ಮಿಸಲಾಗಿದೆ. ಒಂದರಲ್ಲಿ ದೇಶಭಕ್ತಿ ಕಾರ್ಯಕ್ರಮ ನಡೆಯಲಿದ್ದರೆ, ಮತ್ತೊಂದರಲ್ಲಿ ಅನ್ಯಜಿಲ್ಲೆಗಳ ಗಣ್ಯರು ಆಸೀನರಾಗಲಿದ್ದಾರೆ. ಇನ್ನೊಂದು ವೇದಿಕೆಯಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ರಮಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ.

4ರಿಂದಲೇ ಕಾರ್ಯಕ್ರಮ:

ಸಂಜೆ 4 ಗಂಟೆಯಿಂದಲೇ ಕಾರ್ಯಕ್ರಮ ಆರಂಭವಾಗಲಿದೆ. ಸಂಜೆ 4ರಿಂದ 5.30ರ ವರೆಗೆ ಕೊಲ್ಲಾಪುರದ ಸ್ವರನಿನಾದ ತಂಡದಿಂದ ಜಾಗೋ ಹಿಂದೂಸ್ತಾನಿ ರಾಷ್ಟ್ರಭಕ್ತಿ ಗೀತೆಗಳ ಗಾಯನ ನಡೆಯಲಿದೆ. ಬಳಿಕ ಸಂಜೆ 5.30ರಿಂದ ರಾಜ್ಯಮಟ್ಟದ ನಾಯಕರ ಭಾಷಣ ಆರಂಭವಾಗುತ್ತದೆ. ಪ್ರಧಾನಿ ಮೋದಿ ಸಂಜೆ 6.10ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತಾರೆ. ಸಂಜೆ 6.30ಕ್ಕೆ ಕೇಂದ್ರ ಸರ್ಕಾರದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ಬಳಿಕ 6.50ರಿಂದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಭಾಷಣ ಮಾಡಲಿದ್ದಾರೆ. ಸುಮಾರು 1 ಗಂಟೆಗೂ ಅಧಿಕ ಕಾಲ ಪ್ರಧಾನಿಗಳ ಭಾಷಣ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

95 ಸಾವಿರ ಕುರ್ಚಿ:

ಸಮಾವೇಶ ಸ್ಥಳದಲ್ಲಿ 95 ಸಾವಿರ ಕುರ್ಚಿಗಳನ್ನು ಹಾಕಲಾಗಿದೆ. ಅದರಲ್ಲಿ ವಿವಿಐಪಿಗಾಗಿ 2 ಸಾವಿರ, ವಿಐಪಿಗಳಿಗಾಗಿ 10 ಸಾವಿರ ಕುರ್ಚಿಗಳನ್ನು ಹಾಕಲಾಗಿದೆ. ಉಳಿದವುಗಳು ಸಾರ್ವಜನಿಕರಿಗೆ ಮೀಸಲು. 8 ಕಡೆಗಳಲ್ಲಿ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದೆ. ಒಟ್ಟು 8 ಕಡೆ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ.

32 ಸಮಿತಿ ರಚನೆ:

ಕಾರ್ಯಕ್ರಮದ ಯಶಸ್ವಿಗಾಗಿ ಬಿಜೆಪಿ 32 ಸಮಿತಿ ರಚಿಸಿದೆ. 1 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಉಪಾಹಾರದ ವ್ಯವಸ್ಥೆ ನೋಡಿಕೊಳ್ಳಲು 300 ಕಾರ್ಯಕರ್ತರಿದ್ದರೆ, ರಕ್ಷಣೆಗಾಗಿ 400 ಕಾರ್ಯಕರ್ತರು, ಪಾರ್ಕಿಂಗ್‌ಗಳಲ್ಲಿ 150, ಸಾರ್ವಜನಿಕರಿಗೆ ಮಾರ್ಗ ತೋರಿಸಲು 300 ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಬರುವ ಎಲ್ಲ ಕಾರ್ಯಕರ್ತರು, ಜನರಿಗಾಗಿ ಉಪಾಹಾರವಾಗಿ ಉಪ್ಪಿಟ್ಟು, ಕೇಸರಿ ಬಾತ್‌, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಉಪಾಹಾರ ವಿತರಿಸಲು 25 ಮೊಬೈಲ್‌ ಕ್ಯಾಂಟೀನ್‌ ತೆರೆಯಲಾಗಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಸ್ಟಾಲ್‌ಗಳನ್ನು ತೆರೆಯಲಾಗಿದೆ. ಸ್ಟಾಲ್‌ಗಳಲ್ಲಿಯೇ ನೀರು, ಮಜ್ಜಿಗೆ ಪ್ಯಾಕೆಟ್‌ಗಳನ್ನು ವಿತರಿಸಲಿದ್ದಾರೆ. ಉಳಿದಂತೆ ಪೊಲೀಸ್‌ ಚೌಕಿ, ಅಗ್ನಿಶಾಮಕ ದಳ ಹಾಗೂ ಬಿಜೆಪಿ ವೈದ್ಯಕೀಯ ಪ್ರಕೋಷ್ಠದವರು ಕಾರ್ಯಕರ್ತರಿಗೆ ತುರ್ತು ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಇ- ಟಾಯ್ಲೆಟ್‌:

ಸಮಾವೇಶಕ್ಕೆ ಆಗಮಿಸುವ ಲಕ್ಷಾಂತರ ಕಾರ್ಯಕರ್ತರಿಗಾಗಿ ಇ-ಟಾಯ್ಲೆಟ್‌ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ಇದಕ್ಕಾಗಿ 120 ಇ-ಟಾಯ್ಲೆಟ್‌ಗಳನ್ನು ತರಲಾಗಿದ್ದು, ಮುಖ್ಯ ವೇದಿಕೆ ಎದುರು, ಟ್ರಕ್‌ ಟರ್ಮಿನಲ್‌, ವೇದಿಕೆ ಹಿಂಭಾಗದಲ್ಲಿ ಸೇರಿ ವಿವಿಧೆಡೆ ಟಾಯ್ಲೆಟ್‌ಗಳನ್ನು ಅಳವಡಿಸಲಾಗಿದೆ.

ಹುಬ್ಬಳ್ಳಿಯ ಪೊಲೀಸರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ 3500ಕ್ಕೂ ಹೆಚ್ಚು ಪೊಲೀಸರು ಭದ್ರತೆಗೆ ನಿಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಯಾರು ಕಪ್ಪು ಬಟ್ಟೆಧರಿಸಿಕೊಂಡು ಬರುವಂತಿಲ್ಲ. ಒಂದು ವೇಳೆ ಬಂದರೆ ಅವಕಾಶ ನೀಡದಿರಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಮೋದಿ ಚಾಲನೆ ನೀಡಲಿರುವ ಕಾರ್ಯಕ್ರಮಗಳು

  • - 3 ಸಾವಿರ ಕೋಟಿ ವೆಚ್ಚದಲ್ಲಿ ಧಾರವಾಡದ ಐಐಟಿ ಕಟ್ಟಡ ಹಾಗೂ ಐಐಐಟಿ ಕಟ್ಟಡ ಕಾಮಗಾರಿಗಳಿಗೆ ಶಂಕುಸ್ಥಾಪನೆ
  • - ಹುಬ್ಬಳ್ಳಿಯ 500 ಮನೆಗಳಿಗೆ ಭೂಗತ ಅಡುಗೆ ಅನಿಲ ಪೂರೈಕೆ ಯೋಜನೆಗೆ ಚಾಲನೆ
  • - ಮಂಗಳೂರಲ್ಲಿ  1,227 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 1.5 ಮಿಲಿಯನ್‌ ಮೆಟ್ರಿಕ್‌ ಟನ್‌ ಸಾಮರ್ಥ್ಯದ ಭೂಗತ ತೈಲಾಗಾರ ಉದ್ಘಾಟನೆ
  • - ಉಡುಪಿ ಜಿಲ್ಲೆಯಲ್ಲಿ 1,693 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 2.5 ಮಿಲಿಯನ್‌ ಮೆಟ್ರಿಕ್‌ ಟನ್‌ ಸಾಮರ್ಥ್ಯದ ಭೂಗತ ತೈಲಾಗಾರ ಲೋಕಾರ್ಪಣೆ
  • - ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ನಿರ್ಮಾಣವಾಗಿರುವ 2,350 ಮನೆಗಳ ಹಸ್ತಾಂತರ
  • - 222 ಕೋಟಿ ವೆಚ್ಚದ ಚಿಕ್ಕಜಾಜೂರು-ಮಾಯಕೊಂಡ ಜೋಡಿ ರೈಲು ಮಾರ್ಗ ಲೋಕಾರ್ಪಣೆ
  • - ಹೊಸಪೇಟೆ-ಹುಬ್ಬಳ್ಳಿ-ವಾಸ್ಕೋ ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿಗೆ ಚಾಲನೆ

ಸೋಷಿಯಲ್‌ ಮೀಡಿಯಾ ಸೆಂಟರ್‌: ಪ್ರಧಾನಿ ಮೋದಿ ಅವರ ಆಪ್ತ ಸಹಾಯಕರು, ಕಾರ್ಯದರ್ಶಿಗಳು ಹಾಗೂ ಸೋಷಿಯಲ್‌ ಮೀಡಿಯಾ ಟೀಮ್‌ಗಾಗಿ ಮುಖ್ಯ ವೇದಿಕೆ ಬಳಿ ಪ್ರತ್ಯೇಕ ಸೆಂಟರ್‌ ತೆರೆಯಲಾಗಿದೆ. ಪ್ರಧಾನಿ ಕಾರ್ಯಾಲಯದ 15ಕ್ಕೂ ಹೆಚ್ಚಿನ ಸಿಬ್ಬಂದಿ ಇಲ್ಲಿ ಇರಲಿದ್ದು, ಮೋದಿ ಭಾಷಣವನ್ನು ಟ್ವೀಟರ್‌, ಫೇಸ್‌ಬುಕ್‌ ಸೇರಿ ಇತರ ಸಾಮಾಜಿಕ ಜಾಲತಾಣದಲ್ಲಿ ಅಪ್‌ಡೇಟ್‌ ಮಾಡುವ ಕಾರ್ಯ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

Follow Us:
Download App:
  • android
  • ios