ಗುಜರಾತ್‌ನಲ್ಲಿ ನರ್ಮದಾ ನದಿಗೆ ಕಟ್ಟಲಾಗಿರುವ ಬೃಹತ್ ಸರ್ದಾರ್‌ ಸರೋವರ ಡ್ಯಾಂ ಅನ್ನು ಪ್ರಧಾನಿ ಮೋದಿ ದೇಶಕ್ಕೆ ಅರ್ಪಿಸಲಿದ್ದಾರೆ.
ಅಹಮದಾಬಾದ್(ಸೆ.17): ಪ್ರಧಾನಿ ನರೇಂದ್ರ ಮೋದಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇವತ್ತು ಪ್ರಧಾನಿ ಮೋದಿ 67ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಜನ್ಮ ದಿನದ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಮೋದಿ ತಮ್ಮ ತವರು ರಾಜ್ಯಕ್ಕೆ ಭೇಟಿ ಕೊಡುತ್ತಿದ್ದಾರೆ. ಜೊತೆಗೆ ಗುಜರಾತ್ನಲ್ಲಿ ನರ್ಮದಾ ನದಿಗೆ ಕಟ್ಟಲಾಗಿರುವ ಬೃಹತ್ ಸರ್ದಾರ್ ಸರೋವರ ಡ್ಯಾಂ ಅನ್ನು ಪ್ರಧಾನಿ ಮೋದಿ ದೇಶಕ್ಕೆ ಅರ್ಪಿಸಲಿದ್ದಾರೆ. ಸರ್ದಾರ್ ಸರೋವರ ಡ್ಯಾಂ ಲೋಕಾರ್ಪಣೆ ನಂತರ ಪ್ರಧಾನಿ ನರ್ಮದಾ ನದಿಯ ಸಾಧು ಬೆಟ್ ದ್ವೀಪಕ್ಕೆ ತೆರಳಲಿದ್ದಾರೆ. ಈ ಸಾಧು ಬೆಟ್ ದ್ವೀಪದಲ್ಲಿ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ 182 ಎತ್ತರದ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದ್ದು, ಮೋದಿ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಇದಾದ ಬಳಿಕ ದಭೋಯಿಯಲ್ಲಿ ನಡೆಯುವ ನರ್ಮದಾ ಮಹೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಬಳಿಕ ರಾಷ್ಟ್ರೀಯ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಮ್ಯೂಸಿಯಂಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಅಲ್ಲಿಂದ ಅಮ್ರೇಲಿಯ ಸೌರಾಷ್ಟ್ರಕ್ಕೆ ಪ್ರಧಾನಿ ತೆರಳಲಿದ್ದು, ಇಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
