ವಾರಾಣಸಿ (ಫೆ. 20): ವಂದೇ ಭಾರತ ಎಕ್ಸ್‌ಪ್ರೆಸ್‌ ರೈಲಿನ ಕುರಿತು ಅಣಕವಾಡಿದ ವಿಪಕ್ಷ ಮುಖಂಡರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತರಾಟೆ ತೆಗೆದುಕೊಂಡಿದ್ದಾರೆ.

ವಾರಾಣಸಿಯಿಂದ ದೆಹಲಿಗೆ ಮರಳುವ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡು ರೈಲು ಒಂದು ಗಂಟೆ ವಿಳಂಬ ಆಗಿದ್ದಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌ ಅವರು ರೈಲಿನ ಸಾಮರ್ಥ್ಯದ ಬಗ್ಗೆ ಅಣಕವಾಡಿದ್ದರು.

ಇಲ್ಲಿನ ಸಾರ್ವಜನಿಕ ರಾರ‍ಯಲಿಯೊಂದರಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಮೋದಿ, ಸೆಮಿ ಹೈಸ್ಪೀಡ್‌ ರೈಲಿನ ಬಗ್ಗೆ ಕೆಲವು ವ್ಯಕ್ತಿಗಳು ಟೀಕೆ ಮಾಡುತ್ತಿರುವುದು ದುರದೃಷ್ಟಕರ. ಇದು ಈ ಯೋಜನೆಯಲ್ಲಿ ಭಾಗಿಯಾದ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರಿಗೆ ಮಾಡಿದ ಅವಮಾನ. ಇಂತಹ ವ್ಯಕ್ತಿಗಳ ವಿರುದ್ಧ ಜನರು ಎಚ್ಚರವಾಗಿ ಇರಬೇಕು. ನಕಾರಾತ್ಮಕ ಸಂಗತಿಗಳಿಂದಾಗಿ ಜನರು ಧೃತಿಗೆಡಬೇಕಾದ ಅಗತ್ಯವಿಲ್ಲ. ದೇಶದ ಎಂಜಿನಿಯರ್‌ಗಳು ಮತ್ತು ಅವರ ಕಠಿಣ ಪರಿಶ್ರಮದ ಬಗ್ಗೆ ದೇಶಕ್ಕೆ ಹೆಮ್ಮೆ ಇದೆ. ಭವಿಷ್ಯದಲ್ಲಿ ಬುಲೆಟ್‌ ರೈಲನ್ನು ನಿರ್ಮಿಸಿ ಓಡಿಸಲಿರುವ ಎಂಜಿನಿಯರ್‌ಗಳಿಗೆ ನಾನು ವಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.