‘‘ನನ್ನನ್ನು ಟೀಕಿಸಿ, ಪರವಾಗಿಲ್ಲ. ಆದರೆ, ಜನರ ಸಮಸ್ಯೆಯನ್ನು ಅರಿತುಕೊಳ್ಳಿ. ಜನ ಕ್ಯೂನಲ್ಲಿ ನಿಲ್ಲಬೇಕಾಗಿಲ್ಲ, ಮೊಬೈಲ್ ಬ್ಯಾಂಕಿಂಗ್ ಬಳಕೆ ಮಾಡಬಹುದು ಎಂಬುದನ್ನು ಅವರಿಗೆ ಕಲಿಸಿಕೊಡಿ. ಹೊಸ ತಂತ್ರಜ್ಞಾನ, ಹೊಸ ಪಾವತಿ ವ್ಯವಸ್ಥೆಯ ಕುರಿತು ತಿಳಿವಳಿಕೆ ಮೂಡಿಸಿ,’’ ಎಂದು ಪ್ರತಿಪಕ್ಷಗಳಿಗೆ ಮೋದಿ ಕರೆ ನೀಡಿದ್ದಾರೆ.
ನವದೆಹಲಿ(ಡಿ.10): ‘‘ಲೋಕಸಭೆಯಲ್ಲಿ ಪ್ರತಿಪಕ್ಷಗಳು ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಹೀಗಾಗಿ, ನಾನು ಜನಸಭೆಯಲ್ಲಿ ಮಾತನಾಡುತ್ತಿದ್ದೇನೆ. ಲೋಕಸಭೆಯಲ್ಲಿ ನನಗೆ ಅವಕಾಶ ಸಿಕ್ಕರೆ ದೇಶದ 125 ಕೋಟಿ ಜನರ ಧ್ವನಿಯನ್ನು ಪ್ರತಿನಿಧಿಸಲು ನಾನು ಬಯಸುತ್ತೇನೆ,’’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಮೋದಿ ಅವರು ಸದನಕ್ಕೆ ಬಂದು ಮಾತನಾಡಲಿ ಎಂದು ಪ್ರತಿಪಕ್ಷಗಳು ಸವಾಲು ಹಾಕುತ್ತಿರುವ ಬೆನ್ನಲ್ಲೇ ಪ್ರಧಾನಿಯವರಿಂದ ಇಂತಹ ಪ್ರತಿಕ್ರಿಯೆ ಹೊರಬಿದ್ದಿದೆ.
ಗುಜರಾತ್‌ನ ಬನಸ್ಕಾಂತಾ ಜಿಲ್ಲೆಯಲ್ಲಿ ₹350 ಕೋಟಿಯ ಚೀಸ್ ಸ್ಥಾವರಕ್ಕೆ ಚಾಲನೆ ನೀಡಿದ ನಂತರ ದೀಸಾದ ಸಮಾವೇಶದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ. ಈ ವೇಳೆ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದ ಅವರು ತಾವು ಲೋಕಸಭೆಯಲ್ಲಿ ಮಾತನಾಡಲು ಪ್ರತಿಪಕ್ಷಗಳೇ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಜತೆಗೆ, ‘‘ಸಂಸತ್‌ನಲ್ಲಾಗುತ್ತಿರುವ ಗದ್ದಲದ ಬಗ್ಗೆ ಸ್ವತಃ ರಾಷ್ಟ್ರಪತಿ ಪ್ರಣಬ್ ಅವರೂ ಕೋಪಗೊಂಡಿದ್ದಾರೆ. ಸರ್ಕಾರವು ಚರ್ಚೆಗೆ ಸಿದ್ಧವಿದೆ. ಆದರೆ, ಎಲ್ಲಿ ತಮ್ಮ ಸುಳ್ಳುಗಳು ಗೊತ್ತಾಗುತ್ತದೋ ಎಂಬ ಭಯದಿಂದ ಪ್ರತಿಪಕ್ಷಗಳೇ ಚರ್ಚೆಗೆ ಮುಂದಾಗುತ್ತಿಲ್ಲ. ಜನರು ನೋಟು ಅಮಾನ್ಯದ ಪರವಾಗಿದ್ದಾರೆ ಎಂಬುದು ಪ್ರತಿಪಕ್ಷಗಳಿಗೆ ಗೊತ್ತು. ಹಾಗಾಗಿ ಅವರು ನೋಟು ಅಮಾನ್ಯ ಘೋಷಣೆ ವಾಪಸ್ ಪಡೆಯುವಂತೆ ಒತ್ತಾಯಿಸಲು ಧೈರ್ಯ ಮಾಡುತ್ತಿಲ್ಲ,’’ ಎಂದಿದ್ದಾರೆ.
‘‘ನನ್ನನ್ನು ಟೀಕಿಸಿ, ಪರವಾಗಿಲ್ಲ. ಆದರೆ, ಜನರ ಸಮಸ್ಯೆಯನ್ನು ಅರಿತುಕೊಳ್ಳಿ. ಜನ ಕ್ಯೂನಲ್ಲಿ ನಿಲ್ಲಬೇಕಾಗಿಲ್ಲ, ಮೊಬೈಲ್ ಬ್ಯಾಂಕಿಂಗ್ ಬಳಕೆ ಮಾಡಬಹುದು ಎಂಬುದನ್ನು ಅವರಿಗೆ ಕಲಿಸಿಕೊಡಿ. ಹೊಸ ತಂತ್ರಜ್ಞಾನ, ಹೊಸ ಪಾವತಿ ವ್ಯವಸ್ಥೆಯ ಕುರಿತು ತಿಳಿವಳಿಕೆ ಮೂಡಿಸಿ,’’ ಎಂದು ಪ್ರತಿಪಕ್ಷಗಳಿಗೆ ಮೋದಿ ಕರೆ ನೀಡಿದ್ದಾರೆ.
ಭಾರತ ಬದಲಾಗುತ್ತದೆ:
‘‘ನಾನು ನಿಮಗೆ 50 ದಿನ ಕಾಯುವಂತೆ ಹೇಳಿದ್ದೇನೆ. ಅದಾದ ನಂತರ ಭಾರತ ಹೇಗೆ ಬದಲಾಗುತ್ತದೆ ಎಂಬುದನ್ನು ನೋಡಿ. ಬಡವರ ಲೂಟಿ, ಮಧ್ಯಮ ವರ್ಗದವರ ಶೋಷಣೆ ಇನ್ನು ಇತಿಹಾಸದ ಪುಟ ಸೇರಲಿದೆ. ನೋಟು ಅಮಾನ್ಯದಿಂದಾಗಿ ಭಯೋತ್ಪಾದನೆ, ನಕ್ಸಲ್ ಚಳವಳಿಯ ಬೆನ್ನುಮೂಳೆ ಮುರಿಯಲಿದೆ. ಹಣದ ಅವ್ಯವಹಾರ ನಡೆಸುತ್ತಿರುವವರನ್ನು, ಕಾಳಧನಕೋರರನ್ನು ಸುಮ್ಮನೆ ಬಿಡುವುದಿಲ್ಲ,’’ ಎಂದು ಮೋದಿ ಎಚ್ಚರಿಸಿದ್ದಾರೆ.
ಅಮ್ಮನ ಆಶೀರ್ವಾದ ಪಡೆದ ಮೋದಿ:
ರಸಮಾವೇಶದಲ್ಲಿ ಪಾಲ್ಗೊಳ್ಳುವ ಮುನ್ನ ಮೋದಿ ಅವರು ತಮ್ಮ ತಾಯಿ ಹೀರಾಬೆನ್ ಅವರನ್ನು ಭೇಟಿಯಾಗಿ, ಆಶೀರ್ವಾದ ಪಡೆದರು. ಗಾಂಧಿನಗರಕ್ಕೆ ಬಂದ ಬಳಿಕ 20 ನಿಮಿಷಗಳ ಕಾಲ ತಾಯಿಯೊಂದಿಗೆ ಕಳೆದ ಅವರು, ನಂತರ ಪಕ್ಷದ ಪ್ರಧಾನ ಕಚೇರಿಗೆ ಹೋಗಿ ಸಭೆಯಲ್ಲಿ ಭಾಗವಹಿಸಿದರು.
