ಸ್ವತಂತ್ರ ಪ್ಯಾಲೇಸ್ತೀನ್ ಕನಸಿಗೆ ಮೋದಿ ಬಲ; ’ನಮೋ’ ಸಹಾಯ ಯಾಚಿಸಿದ ಪ್ರಧಾನಿ ಅಬ್ಬಾಸ್

First Published 11, Feb 2018, 10:46 AM IST
PM Narendra Modi says India for free Palestine
Highlights

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಐತಿಹಾಸಿಕ ಪ್ಯಾಲೆಸ್ತೀನ್ ರಾಷ್ಟ್ರ ಭೇಟಿಯ ಅಂಗವಾಗಿ ಪ್ಯಾಲೆಸ್ತೀನ್ ಅಧ್ಯಕ್ಷ ಮೆಹಮೂದ್ ಅಬ್ಬಾಸ್ ಅವರನ್ನು ಭೇಟಿ ಮಾಡಿ ‘ಶಾಂತಿ ಸಮಾಲೋಚನೆ’ ನಡೆಸಿದರು.

ರಮಲ್ಲಾ (ಪಶ್ಚಿಮ ದಂಡೆ): ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಐತಿಹಾಸಿಕ ಪ್ಯಾಲೆಸ್ತೀನ್ ರಾಷ್ಟ್ರ ಭೇಟಿಯ ಅಂಗವಾಗಿ ಪ್ಯಾಲೆಸ್ತೀನ್ ಅಧ್ಯಕ್ಷ ಮೆಹಮೂದ್ ಅಬ್ಬಾಸ್ ಅವರನ್ನು ಭೇಟಿ ಮಾಡಿ ‘ಶಾಂತಿ ಸಮಾಲೋಚನೆ’ ನಡೆಸಿದರು.

ಇದೇ ವೇಳೆ ಪ್ಯಾಲೆಸ್ತೀನ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದರ ನಿರ್ಮಾಣಕ್ಕೆ ಸಂಬಂಧಿಸಿದಂತೆ 30 ದಶಲಕ್ಷ ಡಾಲರ್ ಒಪ್ಪಂದ ಸೇರಿದಂತೆ 50 ದಶಲಕ್ಷ ಡಾಲರ್ ಮೌಲ್ಯದ ವಿವಿಧ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಪ್ಯಾಲೆಸ್ತೀನ್‌'ಗೆ ಭೇಟಿ ನೀಡುತ್ತಿರುವ ಮೊದಲ ಭಾರತೀಯ ಪ್ರಧಾನಿ ಎನ್ನಿಸಿಕೊಂಡಿರುವ ನರೇಂದ್ರ ಮೋದಿ ಅವರನ್ನು ಅಧ್ಯಕ್ಷರ ನಿವಾಸಕ್ಕೆ ಅಬ್ಬಾಸ್ ಖುದ್ದಾಗಿ ಆತ್ಮೀಯ ರೀತ್ಯ ಸ್ವಾಗತಿಸಿದರು. ಬಳಿಕ ಇಬ್ಬರೂ ನಾಯಕರು ಸಮಾಲೋಚನೆ ನಡೆಸಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಪ್ಯಾಲೆಸ್ತೀನ್ ಜನತೆಯ ಹಿತಕ್ಕೆ ಅನುಗುಣವಾಗಿ ಸಹಕಾರ ನೀಡಲು ಭಾರತ ಸರ್ಕಾರ ಸಿದ್ಧವಿದೆ. ಈ ಪ್ರದೇಶದಲ್ಲಿ ಶಾಂತಿ ಮರುಕಳಿಸಲಿದೆ ಎಂಬುದು ಭಾರತದ ಆಶಾಭಾವನೆಯಿದೆ. ಇದು ಸುಲಭವಲ್ಲ ಎಂಬುದು ಗೊತ್ತು. ಆದರೆ ಈ ನಿಟ್ಟಿನಲ್ಲಿ ಕಾರ‌್ಯನಿರ್ವಹಿಸೋಣ’ ಎಂದು ಮೋದಿ ಹೇಳಿದರು. ಇದೇ ವೇಳೆ ಭಾರತೀಯ ನಾಯಕತ್ವವನ್ನು ಹೊಗಳಿದ ಅಬ್ಬಾಸ್, ‘ಭಾರತ ಯಾವತ್ತೂ ಪ್ಯಾಲೆಸ್ತೀನ್ ಶಾಂತಿಯ ಪರ ವಹಿಸಿದೆ. ಪ್ಯಾಲೆಸ್ತೀನನ್ನು ಸ್ವತಂತ್ರ ದೇಶವನ್ನಾಗಿಸಲು ಮಾತುಕತೆಗೆ ಸದಾ ಸಿದ್ಧರಿದ್ದೇವೆ. ಈ ನಿಟ್ಟಿನಲ್ಲಿ ಇಸ್ರೇಲ್ ಜತೆ ಶಾಂತಿ ಪ್ರಕ್ರಿಯೆ ನಡೆಸಲು ಭಾರತ ಸಹಕಾರ ನೀಡಬೇಕು’ ಎಂದು ಆಗ್ರಹಿಸಿದರು.

ಇತ್ತೀಚೆಗೆ ವಿವಾದಿತ ಜೆರುಸಲೇಂ ನಗರವನ್ನು ಅಮೆರಿಕ ಅಧಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ರಾಜಧಾನಿ ಎಂದು ಘೋಷಣೆ ಮಾಡಿದಾಗ, ಭಾರತವು ವಿಶ್ವಸಂಸ್ಥೆಯಲ್ಲಿ ಟ್ರಂಪ್ ಅವರ ಈ ಘೋಷಣೆಯ ವಿರುದ್ಧ ನಿಂತು ಪ್ಯಾಲೆಸ್ತೀನನ್ನು ಬೆಂಬಲಿಸಿತ್ತು. ಈ ಹಿನ್ನೆಲೆಯಲ್ಲಿ ಅಬ್ಬಾಸ್ ಶ್ಲಾಘನೆ ಮತ್ತು ಶಾಂತಿ ಪ್ರಕ್ರಿಯೆಯಲ್ಲಿ ಭಾರತದ ಸಹಕಾರ ಬೇಡಿಕೆಗಳು ಮಹತ್ವ ಪಡೆದಿವೆ. ಒಪ್ಪಂದಗಳು: ಪ್ಯಾಲೆಸ್ತೀನ್‌ನ ಬೈತ್ ಸಹೂರ್‌ನಲ್ಲಿ  30  ದಶಲಕ್ಷ ಡಾಲರ್ ಮೊತ್ತದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, 5  ದಶಲಕ್ಷ ಡಾಲರ್ ವೆಚ್ಚದಲ್ಲಿ ಮಹಿಳಾ ಸಬಲೀಕರಣ ಕೇಂದ್ರ, ೫ ದಶಲಕ್ಷ ಡಾಲರ್ ಮೊತ್ತ ದಲ್ಲಿ ಶಿಕ್ಷಣ ಅಭಿವೃದ್ಧಿ ಕೇಂದ್ರ ಸ್ಥಾಪನೆ.

loader