ನವದೆಹಲಿ[ಆ.30]: ಆರೋಗ್ಯವಂತ ಭಾರತವನ್ನು ನಿರ್ಮಿಸುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ‘ಫಿಟ್‌ ಇಂಡಿಯಾ’ (ಸದೃಢ ಭಾರತ) ಎಂಬ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಿದ್ದಾರೆ. ದೇಶವನ್ನು ಉತ್ತಮ ಆರೋಗ್ಯದತ್ತ ಕೊಂಡೊಯ್ಯಲು ಈ ಅಭಿಯಾನ ಇಂದಿನ ಅಗತ್ಯವಾಗಿದೆ ಎಂದು ಈ ಸಂದರ್ಭದಲ್ಲಿ ಮೋದಿ ಪ್ರತಿಪಾದಿಸಿದ್ದಾರೆ.

ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನೃತ್ಯ, ಕ್ರೀಡೆ, ಸಮರ ಕಲೆಗಳ ಪ್ರದರ್ಶನಗಳನ್ನು ಒಳಗೊಂಡ ವರ್ಣ ರಂಜಿತ ಕಾರ್ಯಕ್ರಮದಲ್ಲಿ ಫಿಟ್‌ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಜನರು ತಮ್ಮ ದೈನಂದಿನ ಬದುಕಿನಲ್ಲಿ ದೈಹಿಕ ಚಟುವಟಿಕೆ, ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದನ್ನು ಉತ್ತೇಜಿಸುವ ಗುರಿಯನ್ನು ಈ ಅಭಿಯಾನ ಹೊಂದಿದೆ. ರಾಷ್ಟ್ರೀಯ ಕ್ರೀಡಾ ದಿನದಂದೇ ಈ ಅಭಿಯಾನಕ್ಕೆ ಚಾಲನೆ ದೊರೆತಿರುವುದು ವಿಶೇಷ. ಈ ಅಭಿಯಾನವನ್ನು ಮುಂದುವರಿಸಿಕೊಂಡು ಹೋಗುವ ಸಲುವಾಗಿ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರ ನೇತೃತ್ವದಲ್ಲಿ ಸರ್ಕಾರಿ ಅಧಿಕಾರಿಗಳು, ಭಾರತೀಯ ಒಲಿಂಪಿಕ್ಸ್‌ ಸಮಿತಿ ಸದಸ್ಯರು, ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ಸದಸ್ಯರು, ಖಾಸಗಿ ಸಂಸ್ಥೆಗಳು, ಫಿಟ್ನೆಸ್‌ ಪ್ರವರ್ತಕರನ್ನು ಒಳಗೊಂಡಿರುವ ಸಮಿತಿಯೊಂದನ್ನು ಸರ್ಕಾರ ರಚಿಸಿದೆ.

ಈ ವೇಳೆ ಮಾತನಾಡಿದ ಮೋದಿ, ಫಿಟ್ನೆಸ್‌ ಎಂಬುದು ಶೂನ್ಯ ಬಂಡವಾಳದಲ್ಲಿ ಅಸಂಖ್ಯಾತ ಲಾಭ ತಂದು ಕೊಡುವಂತಹದ್ದು. ಫಿಟ್ನೆಸ್‌ ಎನ್ನುವುದು ಯಾವಾಗಲೂ ನಮ್ಮ ಸಂಸ್ಕೃತಿಯ ಭಾಗವಾಗಿತ್ತು. ಕೆಲವು ದಶಕಗಳ ಹಿಂದೆ ಸಾಮಾನ್ಯ ವ್ಯಕ್ತಿಯೊಬ್ಬ ಪ್ರತಿ ದಿನ 8ರಿಂದ 10 ಕಿ.ಮೀ. ನಡೆಯುತ್ತಿದ್ದ. ಜನರು ಸೈಕಲ್‌ ತುಳಿಯುತ್ತಿದ್ದರು ಅಥವಾ ಓಡುತ್ತಿದ್ದರು. ಆದರೆ, ಇಂದಿನ ತಂತ್ರಜ್ಞಾನ ಯುಗದಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗಿವೆ. ನಾವು ಈಗ ನಡೆಯುವುದನ್ನು ಕಡಿಮೆ ಮಾಡಿದ್ದೇವೆ. ಅದೇ ತಂತ್ರಜ್ಞಾನ ನಾವು ಆಲಸಿ ಆಗಿರುವುದನ್ನೂ ತೋರಿಸುತ್ತಿದೆ. ನಾವು ಎಷ್ಟುಹೆಜ್ಜೆ ನಡೆದಿದ್ದೇವೆ ಎಂದು ಮೊಬೈಲ್‌ ಆ್ಯಪ್‌ ಮೂಲಕ ಲೆಕ್ಕ ಹಾಕುವ ಹಂತ ತಲುಪಿದ್ದೇವೆ. ಫಿಟ್ನೆಸ್‌ ಬಗ್ಗೆ ಮಾತನಾಡುವುದು ಈಗ ಒಂದು ಫ್ಯಾಷನ್‌ ಆಗಿದೆ. ಆದರೆ, ಇದರಿಂದ ಯಾವುದೇ ಪ್ರಯೋಜನ ಇಲ್ಲ. ಯುವ ಜನಾಂಗ ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳದೇ ಇರುವ ಕಾರಣ ವಿವಿಧ ಕಾಯಿಲೆಗೆ ತುತ್ತಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.

‘ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡದ ಪ್ರಕರಣಗಳು ಹಾಗೂ ಇತರ ಜೀವನ ಶೈಲಿ ರೋಗಗಳು ಜಾಸ್ತಿಯಾಗುತ್ತಲೇ ಇವೆ. ಕೆಲವೊಮ್ಮೆ 12- 15 ವರ್ಷಕ್ಕೆ ಸಕ್ಕರೆ ಕಾಯಿಲೆ ಬರುತ್ತಿರುವುದನ್ನು ಅಥವಾ 30 ವರ್ಷಕ್ಕೆ ಹೃದಯಾಘಾತ ಆಗುತ್ತಿರುವುದನ್ನು ನಾವು ಕೇಳುತ್ತಿದ್ದೇವೆ. ಇದು ಕಳವಳಕಾರಿ ಬೆಳವಣಿಗೆ . ಆದರೆ, ನಾನು ಈಗಲೂ ಇದರಲ್ಲಿ ಧನಾತ್ಮಕ ಅಂಶಗಳನ್ನು ನೋಡಬಲ್ಲೆ. ಏಕೆಂದರೆ ನಾನು ಧನಾತ್ಮಕ ವ್ಯಕ್ತಿ. ಇವೆಲ್ಲವೂ ಜೀವನ ಶೈಲಿಯ ಕಾಯಿಲೆಗಳು. ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದರಿಂದ ಅದನ್ನು ಬದಲಾಯಿಸಬಹುದು. ಇಂದು ಇಡೀ ವಿಶ್ವವೇ ಜೀವನ ಶೈಲಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿದೆ. ಚೀನಾ, ಜರ್ಮನಿಯಂತಹ ದೇಶಗಳು ಈಗಾಗಲೇ ತಮ್ಮ ದೇಶವನ್ನು ಸದೃಢವಾಗಿರಿಸುವ ನಿಟ್ಟಿನಿಂದ ಅಭಿಯಾನ ಆರಂಭಿಸಿವೆ. ಯಶಸ್ಸು ಮತ್ತು ಫಿಟ್ನೆಸ್‌ ಎರಡೂ ಒಂದಕ್ಕೊಂದು ತೀರಾ ಹತ್ತಿರ ಸಂಬಂಧ ಹೊಂದಿವೆ. ಎಲ್ಲಾ ಯಶಸ್ವಿ ವ್ಯಕ್ತಿಗಳು ಸದೃಢವಾಗಿರುತ್ತಾರೆ. ದೇಹ ಸದೃಢವಾಗಿದ್ದರೆ ಮನಸ್ಸು ಕೂಡ ಸೃದೃಢವಾಗಿರುತ್ತದೆ’ ಎಂದು ಮೋದಿ ಹೇಳಿದರು.

ಏನಿದು ಫಿಟ್‌ ಇಂಡಿಯಾ?

ಜನರು ತಮ್ಮ ದೈನಂದಿನ ಬದುಕಿನಲ್ಲಿ ದೈಹಿಕ ಚಟುವಟಿಕೆ, ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದನ್ನು ಉತ್ತೇಜಿಸುವ ಗುರಿಯೊಂದಿಗೆ ಆರಂಭವಾಗಿರುವ ಅಭಿಯಾನ

ಇದು ಏಕೆ ಬೇಕು?

ಭಾರತೀಯರು ದೈಹಿಕ ಚಟುವಟಿಕೆಗಳಿಂದ ದೂರ ಉಳಿಯುತ್ತಿದ್ದಾರೆ. ಶೇ.54ರಷ್ಟುಭಾರತೀಯರು ದೈಹಿಕವಾಗಿ ಆಲಸಿಗಳಾಗಿದ್ದಾರೆ. ಇದರಿಂದಾಗಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ.

13.5 ಕೋಟಿ: ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು

7.2 ಕೋಟಿ: ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ

4.2 ಕೋಟಿ: ಥೈರಾಯಿಡ್‌ ಸಮಸ್ಯೆ ಉಳ್ಳವರ ಸಂಖ್ಯೆ

8 ಕೋಟಿ: ಅಧಿಕ ರಕ್ತದೊತ್ತಡ ಇರುವವರ ಸಂಖ್ಯೆ

5.5 ಕೋಟಿ: ಹೃದಯ ಸಂಬಂಧಿ ಕಾಯಿಲೆ ಇರುವವರು