ಗುಜರಾತ್ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಪ್ರಧಾನಿ ಮೋದಿ ಗುಜರಾತ್ ನಲ್ಲಿ ರ್ಯಾಲಿಯ ಮೇಲೆ ರ್ಯಾಲಿ ಮಾಡುತ್ತಿದ್ದಾರೆ. ನಿನ್ನೆ ಗುಜರಾತ್'ನಲ್ಲಿ ಮೋದಿ ನಡೆಸಿದ್ದ ನಾಲ್ಕು ಬಹಿರಂಗ ಸಮಾವೇಶಗಳಲ್ಲಿ ಕಾಂಗ್ರೆಸ್ ಮೇಲೆ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ (ನ.28): ಗುಜರಾತ್ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಪ್ರಧಾನಿ ಮೋದಿ ಗುಜರಾತ್ ನಲ್ಲಿ ರ್ಯಾಲಿಯ ಮೇಲೆ ರ್ಯಾಲಿ ಮಾಡುತ್ತಿದ್ದಾರೆ. ನಿನ್ನೆ ಗುಜರಾತ್'ನಲ್ಲಿ ಮೋದಿ ನಡೆಸಿದ್ದ ನಾಲ್ಕು ಬಹಿರಂಗ ಸಮಾವೇಶಗಳಲ್ಲಿ ಕಾಂಗ್ರೆಸ್ ಮೇಲೆ ಮೋದಿ ವಾಗ್ದಾಳಿ ನಡೆಸಿದ್ದಾರೆ.
ದೇಶದ ಪ್ರಧಾನಿಯಾಗಿರುವ ಮೋದಿಗೆ ಮಾತಾಡಲು ಇಂಗ್ಲಿಷ್ ಬರುವುದಿಲ್ಲ. ಅವರೇನಿದ್ದರೂ ಟೀ ಮಾರಾಟ ಮಾಡುವುದಕ್ಕೆ ಸರಿ ಎಂಬರ್ಥದ ಮೆಮೆ ಮಾಡಿ ಮೋದಿಯನ್ನು ಹೀಗೆಳೆದಿದ್ದ ಕಾಂಗ್ರೆಸ್'ಗೆ ಮೋದಿ ತಿರುಗೇಟು ನೀಡಿದ್ದಾರೆ. ನಾನು ಚಹಾ ಮಾರಾಟ ಮಾಡಿದ್ದೇನೆ. ಆದರೆ ದೇಶ ಮಾರಾಟ ಮಾಡಿಲ್ಲ ಎಂದು ಯುಪಿಎ ಆಡಳಿತ ಕಾಲದ ಹಗರಣಗಳನ್ನುದ್ದೇಶಿಸಿ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದಾರೆ.
ಗುಜರಾತ್ ಚುನಾವಣಾ ಕಣದಲ್ಲಿ ಮೋದಿಯನ್ನು ಹಣಿಯಲು ಕಾಂಗ್ರೆಸ್ ಮಾಡುತ್ತಿರುವ ಪ್ರತಿಯೊಂದು ತಂತ್ರಗಳೂ ಅದಕ್ಕೇ ಮುಳುವಾಗುತ್ತಿವೆ. ಮುಂಬೈ ದಾಳಿ ಉಗ್ರ ಹಫೀಜ್ ಸೈಯದ್ನನ್ನು ಪಾಕಿಸ್ತಾನ ಜೈಲಿನಿಂದ ಬಿಡುಗಡೆ ಮಾಡಿದಾಗ ರಾಹುಲ್ ಮಾಡಿದ್ದ ಟ್ವೀಟ್ ವಿವಾದಕ್ಕೆ ಕಾರಣವಾಗಿತ್ತು. ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಮೋದಿ ಮಾಡಿದ್ದ ಅಪ್ಪುಗೆಯ ರಾಜತಾಂತ್ರಿಕತೆ ವಿಫಲವಾಗಿದೆ. ಉಗ್ರ ಹಫೀಜ್ ಬಿಡುಗಡೆಯಾಗಿದ್ದಾನೆ. ಪಾಕಿಸ್ತಾನಕ್ಕೆ ಅಮೆರಿಕ ಫಂಡ್ ಅನ್ನೂ ಬಿಡುಗಡೆ ಮಾಡುತ್ತಿದೆ. ಮೋದಿಯ ಅಪ್ಪುಗೆಯ ರಾಜತಾಂತ್ರಿಕತೆ ವಿಫಲವಾಗಿದ್ದು ಇನ್ನಷ್ಟು ಅಪ್ಪುಗೆಗಳ ಅಗತ್ಯ ಇದೆ ಎಂದು ರಾಹುಲ್ ವ್ಯಂಗ್ಯವಾಡಿದ್ದರು. ನಿನ್ನೆಯ ರ್ಯಾಲಿಯಲ್ಲಿ ರಾಹುಲ್ ಟ್ವೀಟ್ಗೆ ಪ್ರತ್ಯುತ್ತರ ನೀಡಿರುವ ಮೋದಿ ಉಗ್ರ ಹಫೀಜ್ ಸೈಯದ್ ಬಿಡುಗಡೆಯಾದರೆ ಕಾಂಗ್ರೆಸ್ ಸಂಭ್ರಮಿಸುತ್ತೆ ಎಂದು ಉಗ್ರವಾದದ ವಿರುದ್ಧ ಕಾಂಗ್ರೆಸ್ ಗಂಭೀರವಾಗಿಲ್ಲ ಎಂದು ಹೇಳುವಲ್ಲಿ ಮೋದಿ ಯಶಸ್ವಿಯಾದರು.
ಚುನಾವಣಾ ಪ್ರಚಾರದುದ್ದಕ್ಕೂ ಮೋದಿ ಭಾವನಾತ್ಮಕವಾಗಿ ಗುಜರಾತಿಗಳನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ. ಯಾವಾಗಲೂ ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದ ಮೋದಿ ಈಗ ಗುಜರಾತಿಯಲ್ಲಿ ಭಾಷಣ ಮಾಡುತ್ತಿದ್ದಾರೆ. ಗುಜರಾತ್ನ ಒಬ್ಬ ಬಡ ಚಹಾ ವ್ಯಾಪಾರಿ ದೇಶದ ಪ್ರಧಾನಿಯಾಗಿರುವುದನ್ನು ಸಹಿಸುತ್ತಿಲ್ಲ. ಅದೇ ಕಾರಣದಿಂದ ನಮ್ಮ ಎಲ್ಲ ಯೋಜನೆಗಳನ್ನೂ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಗುಜರಾತಿಗಳಿಗೆ ಮನವರಿಕೆ ಮಾಡುತ್ತಿದ್ದಾರೆ. ಬಿಜೆಪಿ ಗುಜರಾತ್ನಲ್ಲಿ ಪಟೇಲ್ ಸಮುದಾಯದ ನಾಲ್ವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಸರ್ದಾರ್ ಪಟೇಲರನ್ನು ಕಾಂಗ್ರೆಸ್ ಕಡೆಗಣಿಸಿತ್ತು. ಗುಜರಾತ್ಗೆ ಮತ್ತು ಪಟೇಲ್ ಸಮುದಾಯಕ್ಕೆ ಕಾಂಗ್ರೆಸ್ ಮಾಡಿದ ಅನ್ಯಾಯಕ್ಕೆ ಆ ಪಕ್ಷ ಗುಜರಾತಿಗಳ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ..
ಮೀಸಲಾತಿ ಹೋರಾಟವನ್ನೇ ಚುನಾವಣಾ ಅಸ್ತ್ರ ಮಾಡಿಕೊಂಡಿದ್ದ ಕಾಂಗ್ರೆಸ್ಗೆ ಪಟೇಲ್ ಸಮುದಾಯಕ್ಕೆ ಮನ್ನಣೆ ನೀಡಿದ್ದು ಬಿಜೆಪಿ ಮಾತ್ರ ಅನ್ನೋ ದಾಳವನ್ನುರುಳಿಸಿದ್ದಾರೆ. ಸದ್ಯಕ್ಕೆ ಮೋದಿ ಸಾಗುತ್ತಿರುವ ಹಾದಿ, ಚುನಾವಣಾ ಸಮೀಕ್ಷೆಗಳ ಭವಿಷ್ಯ, ಕಾಂಗ್ರೆಸ್ಗೆ ಮುಳುವಾಗುತ್ತಿರುವ ರಣ ತಂತ್ರ ಎಲ್ಲವನ್ನೂ ನೋಡುತ್ತಿದ್ದರೆ ಈ ಚುನಾವಣೆಯಲ್ಲಿಯೂ ಮೋದಿ unstoppable ಆಗುತ್ತಾರಾ ಅನ್ನೋದಷ್ಟೇ ಎಲ್ಲರ ಕುತೂಹಲ.
