ಉಗ್ರವಾದ ನಿಲ್ಲುವವರೆಗೂ ಪಾಕ್‌ ಜತೆ ಮಾತುಕತೆ ನಡೆಸುವುದಿಲ್ಲ ಎಂದು ತಿಳಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಾರ್ಕ್ ಶೃಂಗಸಭೆಗೆ ಪಾಕ್ ನೀಡಿರುವ ಆಹ್ವಾನವನ್ನು ತಿರಸ್ಕರಿಸಿದ್ದಾರೆ.

ಹೈದರಾಬಾದ್‌[ನ.29]: ಭಯೋತ್ಪಾದನೆಗೆ ಸಂಬಂಧಿಸಿದ ಕಳವಳಗಳನ್ನು ನಿರ್ಲಕ್ಷಿಸಿ, ದ್ವಿಪಕ್ಷೀಯ ಮಾತುಕತೆಗೆ ತುದಿಗಾಲಿನಲ್ಲಿ ನಿಂತಿರುವ ಪಾಕಿಸ್ತಾನಕ್ಕೆ ಭಾರತ ಬುಧವಾರ ತಿರುಗೇಟು ನೀಡಿದೆ. ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ನೀಡಿದ್ದ ಆಹ್ವಾನವನ್ನು ತಿರಸ್ಕರಿಸಿರುವ ಕೇಂದ್ರ ಸರ್ಕಾರ, ಉಗ್ರವಾದವನ್ನು ನಿಲ್ಲಿಸುವವರೆಗೂ ಪಾಕಿಸ್ತಾನಕ್ಕೆ ಕಾಲಿಡಲ್ಲ ಎಂದು ಶಪಥ ಮಾಡಿದೆ.

‘ಭಾರತ ವಿರೋಧಿ ಭಯೋತ್ಪಾದಕ ಚಟುವಟಿಕೆಗಳನ್ನು ಪಾಕಿಸ್ತಾನ ನಿಲ್ಲಿಸುವವರೆಗೂ ಆ ದೇಶದ ಜತೆ ಯಾವುದೇ ಮಾತುಕತೆ ಇಲ್ಲ. ಕರ್ತಾರ್‌ಪುರ ಕಾರಿಡಾರ್‌ಗೆ ಪಾಕಿಸ್ತಾನ ಸಹಕಾರ ನೀಡಿರುವುದನ್ನು ದ್ವಿಪಕ್ಷೀಯ ಮಾತುಕತೆ ಪ್ರಕ್ರಿಯೆ ಜತೆ ಜೋಡಿಸಲು ಆಗದು. ಪಾಕಿಸ್ತಾನದಿಂದ ಸಾರ್ಕ್ ಶೃಂಗ ಸಭೆಗೆ ಆಹ್ವಾನ ಬಂದಿದೆ. ಆದರೆ ಅದಕ್ಕೆ ನಾವು ಸಕಾರಾತ್ಮಕವಾಗಿ ಸಂ್ಪದಿಸುತ್ತಿಲ್ಲ. ಉಗ್ರವಾದ ನಿಲ್ಲುವವರೆಗೂ ಸಾರ್ಕ್ನಲ್ಲಿ ಭಾರತ ಭಾಗವಹಿಸುವುದಿಲ್ಲ’ ಎಂದು ತೆಲಂಗಾಣ ವಿಧಾನಸಭೆ ಚುನಾವಣೆ ಪ್ರಚಾರಕ್ಕೆಂದು ಹೈದರಾಬಾದ್‌ಗೆ ಆಗಮಿಸಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

ಪಾಕಿಸ್ತಾನಕ್ಕೆ ನಾನು ಭೇಟಿ ಕೊಟ್ಟಿದ್ದೆ. ಆ ದೇಶದ ಜತೆಗೆ ಸಮಗ್ರ ದ್ವಿಪಕ್ಷೀಯ ಮಾತುಕತೆಯನ್ನು ಆರಂಭಿಸಿದ್ದೇ ನಾನು. ಆದರೆ ಆನಂತರ ಏನಾಯಿತು? ಪಠಾಣ್‌ಕೋಟ್‌ ಹಾಗೂ ಉರಿ ದಾಳಿಗಳು ಎಂದು ಅವರು ಹೇಳಿದರು.

ಸಿಖ್‌ ಧರ್ಮ ಸಂಸ್ಥಾಪಕ ಗುರು ನಾನಕ್‌ ದೇವ್‌ ಅವರ ಸಮಾಧಿ ಸ್ಥಳವನ್ನು ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್‌ ಜತೆ ಬೆಸೆಯಲು ಸಂಪರ್ಕ ಕಲ್ಪಿಸುವ ಕಾರಿಡಾರ್‌ಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಶಿಲಾನ್ಯಾಸ ನೆರವೇರಿಸಿದ ದಿನವೇ ಸುಷ್ಮಾ ಅವರು ಈ ಮಾತು ಹೇಳಿರುವುದು ಗಮನಾರ್ಹ. ಈ ಕಾರಿಡಾರ್‌ ಆಧರಿಸಿ ದ್ವಿಪಕ್ಷೀಯ ಮಾತುಕತೆ ನಡೆಸಲು ಆಗದು. ಭಯೋತ್ಪಾದನೆ ಹಾಗೂ ಮಾತುಕತೆ ಒಟ್ಟಿಗೆ ನಡೆಯದು ಎಂದು ಅವರು ವಿವರಿಸಿದರು.

19ನೇ ಸಾರ್ಕ್ ಶೃಂಗಸಭೆ ಇಸ್ಲಾಮಾಬಾದ್‌ನಲ್ಲಿ 2016ರಲ್ಲಿ ನಿಗದಿಯಾಗಿತ್ತು. ಆದರೆ ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಭಾರತ ಆ ಶೃಂಗದಿಂದ ದೂರ ಉಳಿದಿತ್ತು. ಬಾಂಗ್ಲಾದೇಶ, ಭೂತಾನ್‌ ಹಾಗೂ ಆಷ್ಘಾನಿಸ್ತಾನ ಕೂಡ ಶೃಂಗ ಬಹಿಷ್ಕರಿಸಿ ಭಾರತಕ್ಕೆ ಬೆಂಬಲವಾಗಿ ನಿಂತಿದ್ದವು. ಆನಂತರ ಮತ್ತೊಮ್ಮೆ ಸಾರ್ಕ್ ಶೃಂಗಸಭೆಯೇ ನಡೆದಿಲ್ಲ. ಇನ್ನೊಮ್ಮೆ ಆತಿಥ್ಯ ವಹಿಸಲು ಪಾಕಿಸ್ತಾನ ಮುಂದಾಗಿದೆ.