18ನೇ ಶಾಂಘೈ ಸಹಕಾರ ಶೃಂಗಸಭೆಚೀನಾದ ಕ್ವಿಂಗ್ಡಾವೊ ನಗರಕ್ಕೆ ಬಂದಿಳಿದ ಪ್ರಧಾನಿಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಭೇಟಿ ಮಾಡಲಿರುವ ಮೋದಿ
ಕ್ವಿಂಗ್ಡಾವೊ(ಜೂ.9): ಎರಡು ದಿನಗಳ 18 ನೇ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇಂದು ಚೀನಾದ ಕ್ವಿಂಗ್ಡಾವೊಗೆ ಬಂದಿಳಿದಿದ್ದಾರೆ.
ಶೃಂಗಸಭೆಯ ಭಾಗವಾಗಿ ನರೇಂದ್ರ ಮೋದಿ ಚೀನಾದ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಬಾಂಧವ್ಯ ವೃದ್ದಿ ಕುರಿತಂತೆ ಮಾತುಕತೆ ನಡೆಸಲಿದ್ದಾರೆ. ವುಹಾನ್ ನಲ್ಲಿ ಕಳೆದ ತಿಂಗಳು ನಡೆದ ಅನೌಪಚಾರಿಕ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಅನುಷ್ಠಾನದ ಬಗ್ಗೆಯೂ ಚರ್ಚಿಸಲಿದ್ದಾರೆ.
ಭಯೋತ್ಪಾದನೆ ನಿಯಂತ್ರಣ, ಪ್ರಾದೇಶಿಕ ಮಟ್ಟದಲ್ಲಿ ವ್ಯಾಪಾರ ಮತ್ತು ಹೂಡಿಕೆಯಲ್ಲಿ ಪ್ರಗತಿ ಸೇರಿದಂತೆ, ವಿಶ್ವ ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ನಿಭಾಯಿಸುವಲ್ಲಿ ಭಾರತ ವಹಿಸುತ್ತಿರುವ ಪಾತ್ರದ ಬಗ್ಗೆ ಎಸ್ ಸಿ ಒ ಶೃಂಗಸಭೆಯಲ್ಲಿ ನರೇಂದ್ರ ಮೋದಿ ಮಾತನಾಡುವ ಸಾಧ್ಯತೆ ಇದೆ.
ಇರಾನ್ ಅಣು ಒಪ್ಪಂದದಿಂದ ವಾಷಿಂಗ್ಟನ್ ಹೊರ ಬಂದ ನಂತರ ವ್ಯಾಪಾರ ಸುಂಕದ ಮೇಲೆ ಚೀನಾದ ಭಿನ್ನಾಭಿಪ್ರಾಯ ಹಾಗೂ ರಷ್ಯಾದ ನಿರ್ಬಂಧದ ನಡುವೆಯೂ ಈ ಶೃಂಗಸಭೆ ನಡೆಯುತ್ತಿರುವುದು ವಿಶೇಷ. ಸಂಘಟನೆಯ ಪೂರ್ಣಾವಧಿಯ ಸದಸ್ಯನಾಗಿ ಭಾರತ ಇದೇ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿದೆ. 2017 ಜೂನ್ ತಿಂಗಳಲ್ಲಿ ನಡೆದ ಅಸ್ತಾನ ಶೃಂಗಸಭೆ ವೇಳೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ಎಸ್ ಸಿ ಒ ಶೃಂಗಸಭೆಯ ಪೂರ್ಣಾವಧಿಯ ಸದಸ್ಯತ್ವ ಪಡೆದುಕೊಂಡಿದ್ದವು.
