ಅಹಮದಾಬಾದ್(ಅ.31): ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಸರ್ದಾರ್ ವಲ್ಲಭ ಭಾಯ್ ಪಟೇಲ್‌ರ ‘ಏಕತಾ ಪ್ರತಿಮೆ’ಯನ್ನು ಲೋಕಾರ್ಪಣೆ ಮಾಡಲಾಯಿತು.

ಗುಜರಾತ್‌ನ ಕೆವಾಡಿಯಾದ ನರ್ಮದಾ ತಟದಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು.

ದೇಶದ ಮೊದಲ ಗೃಹಮಂತ್ರಿ ಪಟೇಲ್‌ ಭಾರತದ ಏಕೀಕರಣದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಹೀಗಾಗಿ ಪ್ರತಿಮೆಗೆ ‘ಏಕತೆಯ ಪ್ರತಿಮೆ’ ಎಂದು ನಾಮಕರಣ ಮಾಡಲಾಗಿದೆ.

ಸರ್ದಾರ್‌ ಪಟೇಲ್‌ ಅವರ ಪ್ರತಿಮೆಯ ಮೂಲಕ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ‘ಏಕೀಕರಣ’ದ ಸಂದೇಶ ಸಾರಿದ್ದಾರೆ. ಪ್ರಧಾನಿ ಮೋದಿ ಹಾಗೂ ಇತರ ಗಣ್ಯರು ಪ್ರತಿಮೆಗೆ ಕುಂಭಾಭಿಷೇಕ ಮಾಡುವ ಮೂಲಕ ಅದನ್ನು ಲೋಕಾರ್ಪಣೆ ಮಾಡಿದರು.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಪಟೇಲ್ ಅವರ ದೂರದೃಷ್ಟಿ ಮತ್ತು ಕಠಿಣ ನಿಲುವುಗಳೇ ಭಾರತದ ಏಕೀಕರಣಕ್ಕೆ ಕಾರಣ ಎಂದು ಹೇಳಿದರು. ಒಂದು ವೇಳೆ ಪಟೇಲ್ ಇಲ್ಲದೇ ಹೋಗಿದ್ದರೆ ಹೈದರಾಬಾದ್ ನ ಚಾರ್ ಮಿನಾರ್ ನೋಡಲು ನಾವು ವೀಸಾ ತೆಗೆದುಕೊಂಡು ಹೋಗುವ ಪರಿಸ್ಥಿತಿ ಬರುತ್ತಿತ್ತು ಎಂದು ಮೋದಿ ನುಡಿದರು.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ, ಗುಜರಾತ್​ ಮುಖ್ಯಮಂತ್ರಿ ವಿಜಯ್​ ರೂಪಾಣಿ, ಉಪ ಮುಖ್ಯಮಂತ್ರಿ ನಿತಿನ್​ ಪಟೇಲ್​, ಮಧ್ಯ ಪ್ರದೇಶ ರಾಜ್ಯಪಾಲ ಆನಂದಿಬೆನ್​ ಪಟೇಲ್​ ಮುಂತಾದವರು ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.