ನವದೆಹಲಿ(ಸೆ.4): ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂಬುದಕ್ಕೆ ಹೊಸ ಸಮೀಕ್ಷೆ ಪುಷ್ಠಿ ನೀಡಿದೆ. 2014 ರ ಲೋಕಸಭೆ ಚುನಾವಣೆ ನಂತರ ದೇಶದ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿ ಹೊರ ಹೊಮ್ಮಿದ್ದ ಪ್ರಧಾನಿ ಮೋದಿ, ನಾಲ್ಕು ವರ್ಷಗಳ ಬಳಿಕ ಅದೇ ಜನಪ್ರಿಯತೆಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಸದ್ಯ ದೇಶದ ಅತ್ಯಂತ ಜನಪ್ರಿಯ ರಾಜಕಾರಣಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಮತ್ತೊಮ್ಮೆ ಹೊರಹೊಮ್ಮಿದ್ದು, ಆದರೆ ಜನಪ್ರಿಯತೆಯ ಗ್ರಾಫ್ ಮಾತ್ರ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಏರುತ್ತಿದ್ದು, ಪ್ರಧಾನಿ ಮೋದಿ ಬಳಿಕ ರಾಹುಲ್ ಎರಡನೇ ಅತ್ಯಂತ ಜನಪ್ರಿಯ ರಾಜಕಾರಣಿಯಾಗಿ ಹೊರ ಹೊಮ್ಮಿದ್ದಾರೆ.

ರಾಜಕೀಯ ತಂತ್ರರೂಪಕ ಪ್ರಶಾಂತ್ ಕಿಶೋರ್ ನೇತೃತ್ವದ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ(ಐ-ಪ್ಯಾಕ್) ನಡೆಸಿದ ಸಮೀಕ್ಷೆಯಲ್ಲಿ ದೇಶದ 712 ಜಿಲ್ಲೆಗಳ 57 ಲಕ್ಷ ಮಂದಿ ಮತ ನೀಡಿದ್ದು, ಪ್ರಧಾನಿ ಮೋದಿ ಅತಿ ಜನಪ್ರಿಯ ಮತ್ತು ಸಮರ್ಥ ರಾಜಕಾರಣಿ ಎಂದು ಶೇ.48 ರಷ್ಟು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುಲು ಮತ್ತು ದೂರದರ್ಶಿತ್ವ ಹೊಂದಿರುವ ನಾಯಕರಾಗಿ ನರೇಂದ್ರ ಮೋದಿ ಉತ್ತಮ ಆಯ್ಕೆ ಎಂದು ಸಮೀಕ್ಷೆಯಲ್ಲಿ ಜನ ಹೇಳಿದ್ದಾರೆ.

ಇನ್ನು ಪ್ರಧಾನಿ ಮೋದಿ ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಥಾನ ಪಡೆದಿದ್ದಾರೆ. ರಾಹುಲ್ ಗಾಂಧಿ ಪರವಾಗಿ ಶೇ. 11 ರಷ್ಟು ಜನ ಮತ ನೀಡಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಶೇ. 9.3 ರಷ್ಟು ಮತ. ಅಖಿಲೇಶ್ ಯಾದವ್ ಶೇ.7 ಮಮತಾ ಬ್ಯಾನರ್ಜಿ ಶೇ. 4.2 ಮತ್ತು ಮಾಯಾವತಿ ಪರ ಶೇ.3.1 ರಷ್ಟು ಜನ ಮತ ನೀಡಿದ್ದಾರೆ.