ನವದೆಹಲಿ (ಜ. 29): ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 29ರಂದು ದೇಶದ 2000 ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರ ಜತೆ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮ ನಡೆಸಲಿದ್ದಾರೆ. ದೆಹಲಿಯ ತಾಲ್‌ಕಟೋರಾ ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಯಿಂದ 1 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದ್ದು, 9ರಿಂದ 12ನೇ ತರಗತಿ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ. ಅಲ್ಲದೆ, ಯೂಟ್ಯೂಬ್‌ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮ ಹಾಗೂ ರೇಡಿಯೋಗಳಲ್ಲೂ ಪ್ರಸಾರವಾಗಲಿದೆ.

ಕಾರ್ಯಕ್ರಮದಲ್ಲಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪೂರ್ವಿ ಸುಂದರ ಶಾನಭಾಗ, ಗದಗ ಜಿಲ್ಲೆಯ ಪ್ರಜ್ವಲ ಶಿವಶಂಕರ ನಾಯಕ, ರಾಯಚೂರು ಜಿಲ್ಲೆಯ ರಾಘವೇಂದ್ರ ಸೇರಿದಂತೆ ರಾಜ್ಯದ ಹಲವಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪರೀಕ್ಷೆ ಎದುರಿಸಲು ಬೇಕಾದ ತಯಾರಿ ಹಾಗೂ ಪರೀಕ್ಷೆಯ ನಂತರದ ವಿಷಯಗಳ ಬಗ್ಗೆ ಪ್ರಧಾನಿಯವರೊಂದಿಗೆ ಮಕ್ಕಳು ಚರ್ಚೆ ನಡೆಸಲಿದ್ದಾರೆ. ಈ ಕಾರ್ಯಕ್ರಮವನ್ನು ಎಲ್ಲ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರಸಾರ ಮಾಡಬೇಕು ಎಂದು ಹಲವು ರಾಜ್ಯಗಳ ಶಿಕ್ಷಣ ಇಲಾಖೆಗಳು ಈಗಾಗಲೇ ಆದೇಶ ನೀಡಿವೆ.

ಎಲ್ಲ ಸರ್ಕಾರಿ ಶಾಲೆಗಳು ಮತ್ತು ಸಿಬಿಎಸ್‌ಇ ಶಾಲೆಗಳು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವನ್ನು ವೀಕ್ಷಿಸುವ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಡಬೇಕು. ವಿದ್ಯಾರ್ಥಿಗಳು ಕಾರ್ಯಕ್ರಮ ವೀಕ್ಷಣೆ ಮಾಡಿದ ವಿವರವಿರುವ ವರದಿಯನ್ನು ಎಲ್ಲ ಶಾಲೆಗಳು ಜಿಲ್ಲೆಯ ಅಧಿಕಾರಿಗಳಿಗೆ ಸಲ್ಲಿಸಬೇಕು. ಒಂದು ವೇಳೆ ಶಿಕ್ಷಣ ಇಲಾಖೆಯ ಸೂಚನೆ ಪಾಲಿಸುವಲ್ಲಿ ಯಾವುದೇ ಶಾಲೆಯು ವಿಫಲವಾದಲ್ಲಿ ಶಿಕ್ಷಣಾಧಿಕಾರಿಗಳೇ ಅದರ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಸರ್ಕಾರಗಳು ಸೂಚನೆ ನೀಡಿವೆ.