ಕಾಂಕ್ರೀಟ್ ಬಳಕೆಯಲ್ಲಿ ‘ವಿಶ್ವದ ಎರಡನೇ ಅತಿದೊಡ್ಡ ಜಲಾಶಯ’ ಎಂಬ ಹಿರಿಮೆಗೆ ಪಾತ್ರವಾಗಿರುವ ಸರ್ದಾರ್ ಸರೋವರ ಅಣೆಕಟ್ಟೆಯನ್ನು ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
ಅಹಮದಾಬಾದ್(ಸೆ.17) ಇಂದು ತಮ್ಮ 67ನೇ ಜನ್ಮದಿವಸ ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಸರ್ದಾರ್ ಸರೋವರ ಅಣೆಕಟ್ಟೆಯನ್ನು ಉದ್ಘಾಟಿಸುವ ಮೂಲಕ ಜನ್ಮದಿನವನ್ನು ಅವಿಸ್ಮರಣೀಯವಾಗಿಸಿಕೊಳ್ಳಲಿದ್ದಾರೆ.
ಕಾಂಕ್ರೀಟ್ ಬಳಕೆಯಲ್ಲಿ ‘ವಿಶ್ವದ ಎರಡನೇ ಅತಿದೊಡ್ಡ ಜಲಾಶಯ’ ಎಂಬ ಹಿರಿಮೆಗೆ ಪಾತ್ರವಾಗಿರುವ ಸರ್ದಾರ್ ಸರೋವರ ಅಣೆಕಟ್ಟೆಯನ್ನು ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
ಈ ಮುನ್ನ 121.92 ಮೀ. ಎತ್ತರ ಹೊಂದಿದ್ದ ಈ ಜಲಾಶಯವನ್ನು ಇತ್ತೀಚೆಗೆ 138 ಮೀ. ಎತ್ತರಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ, ಪೂರ್ಣಪ್ರಮಾಣದ ನೀರು ಸಂಗ್ರಹಕ್ಕೆ ತೀರ್ಮಾನಿಸಲಾಗಿದೆ. 30 ಗೇಟುಗಳನ್ನು ತೆರೆಯುವ ಮೂಲಕ ಜಲಾಶಯವನ್ನು ಮೋದಿ ಅವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ತಿಳಿಸಿದ್ದಾರೆ.
ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ 56 ವರ್ಷಗಳ ಹಿಂದೆ (1961ರಲ್ಲಿ) ಸರ್ದಾರ್ ಸರೋವರ ಡ್ಯಾಂಗೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಶಂಕುಸ್ಥಾಪನೆ ನೆರವೇರಿಸಿದ್ದರು. 1987ರಲ್ಲಿ ನಿರ್ಮಾಣ ಆರಂಭವಾಗಿತ್ತು. ಆದರೆ ಎತ್ತರ ಹೆಚ್ಚಳ ಮಾಡಿದರೆ ಭಾರಿ ಪ್ರಮಾಣದ ಹಿನ್ನೀರು ಪ್ರದೇಶಗಳು ಮುಳುಗುತ್ತಿದ್ದ ಕಾರಣ ಪೂರ್ಣ ಪ್ರಮಾಣದಲ್ಲಿ ಎತ್ತರ ಹೆಚ್ಚಿಸಲು ಹಾಗೂ ನೀರು ಸಂಗ್ರಹಿಸಲು ಈವರೆಗೆ ಸಾಧ್ಯವಾಗಿರಲಿಲ್ಲ.
ನರ್ಮದಾ ಬಚಾವೋ ಹೋರಾಟದಿಂದ ಹಾಗೂ ಸುಪ್ರೀಂ ಕೋರ್ಟ್ ತಡೆಯಾಜ್ಞೆಗಳ ಕಾರಣ ಯೋಜನೆ ಸಾಕಷ್ಟು ಹಿನ್ನಡೆ ಅನುಭವಿಸಿತ್ತು. ಆದರೆ ಯೋಜನೆ ಪೂರ್ಣಗೊಂಡು ಈಗ ಸಂಪೂರ್ಣ ಬಳಕೆಯ ಕೈಗೂಡುವ ಕಾಲ ಒದಗಿಬಂದಿದೆ. ಸಂಪೂರ್ಣ ನೀರು ಸಂಗ್ರಹಿಸುವ ಕಾರಣ 18 ಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಲಭಿಸಲಿದೆ. 9 ಸಾವಿರ ಹಳ್ಳಿಗಳು ಸರ್ದಾರ್ ಸರೋವರ ಕಾಲುವೆಯಿಂದ ಪ್ರಯೋಜನ ಪಡೆಯಲಿವೆ. ಈ ಜಲಾಶಯದ ಪ್ರತಿ ಗೇಟುಗಳು 450 ಟನ್ ತೂಕವಿದ್ದು, ಅವನ್ನು ಬಂದ್ ಮಾಡಲು ಒಂದು ತಾಸು ಹಿಡಿಯಲಿದೆ.
ಕಾಂಕ್ರೀಟ್ ಬಳಕೆಯಲ್ಲಿ ನಂ.2: ಕಾಂಕ್ರಿಟ್ ಬಳಕೆಯಲ್ಲಿ ಸರ್ದಾರ್ ಸರೋವರ ಜಲಾಶಯ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಆದರೆ ನೀರು ಸಂಗ್ರಹದಲ್ಲಿ ಅಲ್ಲ. ಅಮೆರಿಕದ ಗ್ರಾಂಡ್ ಕೌಲಿ ಡ್ಯಾಂ ನಂತರ ಈ ಅಣೆಕಟ್ಟೆಗೇ ಹೆಚ್ಚು ಕಾಂಕ್ರಿಟ್ ಬಳಕೆ ಮಾಡಲಾಗಿದೆ.
ಈಗಾಗಲೇ ವಿದ್ಯುತ್ ಉತ್ಪಾದನೆ: 1.2 ಕಿ.ಮೀ. ಉದ್ದವಿರುವ ಈ ಜಲಾಶಯದಲ್ಲಿ ಎರಡು ವಿದ್ಯುತ್ ಸ್ಥಾವರಗಳಿದ್ದು, ಈವರೆಗೆ 4141 ಕೋಟಿ ಯೂನಿಟ್ ವಿದ್ಯುತ್ ಉತ್ಪಾದಿಸುತ್ತಿವೆ. ಜಲಾಶಯ ಈವರೆಗೆ 16 ಸಾವಿರ ಕೋಟಿ ರು. ಆದಾಯ ಗಳಿಸಿದ್ದು, ಇದು ನಿರ್ಮಾಣ ವೆಚ್ಚಕ್ಕಿಂತ ದ್ವಿಗುಣ.
