Asianet Suvarna News Asianet Suvarna News

ಪಾಕ್‌ ಜೊತೆ ಜಲ‘ಯುದ್ಧ’ಕ್ಕೆ ಮುಂದಾದ್ರಾ ಮೋದಿ?: ಹಿರಿಯ ಅಧಿಕಾರಿಗಳ ಜೊತೆ ಇವತ್ತು ಮಹತ್ವದ ಸಭೆ!

PM Modi to discuss Indus Water Treaty today

ನವದೆಹಲಿ(ಸೆ.26): ಉರಿ ಸೇನಾ ನೆಲೆ ಮೇಲೆ ದಾಳಿಗೆ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಮತ್ತೊಂದು ಅಸ್ತ್ರದ ಬಗ್ಗೆ ಯೋಚಿಸುತ್ತಿದೆ ಇದೆ. ವಿಶ್ವದಲ್ಲಿ ಪಾಕಿಸ್ತಾನವನ್ನ ಏಕಾಂಗಿಯಾಗಿಸುತ್ತೇನೆಂದು ರಾಜತಾಂತ್ರಿಕ ಸಮರ ಸಾರಿರುವ ಪ್ರಧಾನಿ ಮೋದಿ, ಈಗ ಜಲಯುದ್ಧಕ್ಕೆ ಮುಂದಾಗಿದ್ದಾರೆ. ಐವತ್ತಾರು ವರ್ಷಗಳ ಹಿಂದೆ ಭಾರತ ಮತ್ತು ಪಾಕಿಸ್ತಾನದ ನಡುವೆ ಆದ ಇಂಡಸ್ ಜಲ ಒಪ್ಪಂದದ ಮರುಪರಿಶೀಲನೆಗೆ ಮುಂದಾಗಿದ್ದಾರೆ. ಇದಕ್ಕಾಗಿ ಇವತ್ತು ಕೇಂದ್ರ ಜಲಸಂಪನ್ಮೂಲ ಇಲಾಖೆ ಸಚಿವೆ ಉಮಾಭಾರತಿ ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ.

ಭಾರತ - ಪಾಕಿಸ್ತಾನ ಇಬ್ಭಾಗವಾದ ಮೇಲೆ ಸಟ್ಲೇಜ್, ಬಿಯಾಸ್, ರಾವಿ, ಝೇಲಂ, ಚೇನಬ್, ಇಂಡಸ್ ನದಿಗಳ ನೀರು ಹಂಚಿಕೆ ಬಗ್ಗೆ ಏರ್ಪಟ್ಟ ಈ ಒಪ್ಪಂದ ವಿಶ್ವದ ಅತಿ ಯಶಸ್ವಿ ಜಲ ಒಪ್ಪಂದಗಳಲ್ಲಿ ಒಂದು.. 1960ರ ಏಪ್ರಿಲ್ 19ರಂದು ಏರ್ಪಟ್ಟ ಈ ಅಂತಾರಾಷ್ಟ್ರೀಯ ಜಲ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿದ್ದು ವಿಶ್ವ ಬ್ಯಾಂಕ್.. ಅಂದಿನ ಪ್ರಧಾನಿ ಜವಹಾರ್ ಲಾಲ್ ನೆಹರು ಮತ್ತು ಪಾಕ್ ಪ್ರಧಾನಿ ಜ.ಅಯೂಬ್ ಖಾನ್ ಕರಾಚಿಯಲ್ಲಿ ಒಪ್ಪಂದಕ್ಕೆ ಸಹಿ ಮಾಡಿದ್ರು. ಸುಮಾರು 3 ಕೋಟಿ ಎಕರೆ ಕೃಷಿ ಭೂಮಿಗೆ ಈ ನದಿಗಳ ನೀರೇ ಆಧಾರ.

ಏಕಪಕ್ಷೀಯ ಒಪ್ಪಂದ ಎಂದೇ ಟೀಕೆಗೆ ಗುರಿಯಾಗಿರುವ ಈ ಜಲ ಒಪ್ಪಂದ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಇರುವ ಒಂದು ಅಸ್ತ್ರ. ಚೀನಾ ಆಕ್ರಮಿಸಿಕೊಂಡಿರುವ ಟಿಬೆಟ್‌ನಲ್ಲಿ ಇಂಡಸ್ ನದಿ ಹುಟ್ಟಿದರೂ ಮೇಲಿನ ನದಿತೀರದ ದೇಶವಾದ ಭಾರತದಿಂದಲೇ ಪಾಕಿಸ್ತಾನಕ್ಕೆ ಹರಿದು ಹೋಗಬೇಕು. ಹೀಗಾಗಿ, ಪಾಕಿಸ್ತಾನಕ್ಕೆ ಭಾರತ ನೀರು ಸ್ಥಗಿತಗೊಳಿಸಿದರೆ ಸಂಕಷ್ಟ ತಲೆದೋರಲಿದೆ. ಆದರೆ, ಈ ಒಪ್ಪಂದ ಮುರಿಯುವುದು ಅಷ್ಟು ಸುಲಭದ ಮಾತಲ್ಲ ಎನ್ನಲಾಗುತ್ತಿದೆ.

ಯಾಕೆಂದರೆ, ವಿಶ್ವ ಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಅಂತಾರಾಷ್ಟ್ರೀಯ ನಿಯಮಗಳಂತೆ ಈ ಒಪ್ಪಂದ ಏರ್ಪಟ್ಟಿರೋದ್ರಿಂದ ಒಪ್ಪಂದದ ಬಗ್ಗೆ ಮರುಚಿಂತನೆ ಮಾಡಿದ್ರೆ ಅಂತಾರಾಷ್ಟ್ರೀಯ ಖಂಡನೆಗೆ ಗುರಿಯಾಗಬಹುದು. ಅಲ್ಲದೇ, ನೆರೆಯ ಚೀನಾದಲ್ಲೇ ಇಂಡಸ್ ನದಿ ಹುಟ್ಟುವುದರಿಂದ ಅಲ್ಲೇ ಚೀನಾ ಅಡ್ಡಗಾಲು ಹಾಕಬಹುದು.. ಬ್ರಹ್ಮಪುತ್ರಾ ನದಿ ವಿಚಾರದಲ್ಲೂ ಚೀನಾ ಇದೇ ಕ್ರಮ ಕೈಗೊಳ್ಳಬಹುದು ಹಾಗೂ, ಒಂದು ವೇಳೆ ಅಣೆಕಟ್ಟೆಗಳಲ್ಲಿ ನೀರು ಶೇಖರಣೆ ಮಾಡಿದರೆ, ನಮ್ಮ ದೇಶದ ನಗರಗಳಲ್ಲಿ ಪ್ರವಾಹ ಸ್ಥಿತಿ ತಲೆದೋರಬಹುದು.. ಭಾರತ ಈ ಒಪ್ಪಂದ ಮುರಿಯುವ ಮಾತನಾಡೋದು ಕೇವಲ ಒತ್ತಡ ತಂತ್ರವಷ್ಟೇ ಎಂದು ಹೇಳಲಾಗುತ್ತಿದೆ.

ಈ ಎಲ್ಲಾ ಸಾಧ್ಯಾಸಾಧ್ಯತೆಗಳನ್ನು ಪ್ರಧಾನಿ ನರೇಂದ್ರಮೋದಿ ಇವತ್ತು ಹಿರಿಯ ಅಧಿಕಾರಿಗಳ ಜೊತೆ ಸಭೆಯಲ್ಲಿ ಚರ್ಚಿಸಲಿದ್ದಾರೆ. ತಜ್ಞರ ಪ್ರಕಾರ ಈ ಒಪ್ಪಂದ ಮುರಿಯುವುದು ಅಷ್ಟು ಸುಲಭ ಅಲ್ಲ. ಇದನ್ನು ಒತ್ತಡ ತಂತ್ರವಾಗಿ ಬಳಸಬಹುದು ಅಷ್ಟೇ ಎಂದು ಹೇಳಲಾಗುತ್ತಿದೆ. ಹೀಗಾಗಿ, ಮೋದಿ ಸರ್ಕಾರದ ಮುಂದಿನ ನಡೆ ಏನು ಅನ್ನೋದನ್ನ ಕಾಲ ಮತ್ತು ಪರಿಸ್ಥಿತಿಗಳೇ ನಿರ್ಧರಿಸಲಿದೆ.

Follow Us:
Download App:
  • android
  • ios