ನವದೆಹಲಿ (ಜ. 02): ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ಸಿನ ಸರ್ಕಾರಗಳು ರೈತರ ಸಾಲ ಮನ್ನಾ ಮಾಡುತ್ತಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಸ್ಟಂಟ್ ಎಂದು ಬಣ್ಣಿಸಿ ದ್ದಾರೆ. ಕಾಂಗ್ರೆಸ್ಸಿನ ಈ ದಾರಿ ತಪ್ಪಿಸುವ ಘೋಷಣೆ ಗಳಿಂದ ಬಹುತೇಕ ರೈತರಿಗೆ ಅನುಕೂಲವಾಗುವುದಿಲ್ಲ. ಏಕೆಂದರೆ, ಬ್ಯಾಂಕುಗಳಿಂದ ಸಾಲ ಪಡೆಯುವ ರೈತರು ಅಲ್ಪ ಮಂದಿ ಮಾತ್ರ ಎಂದೂ ಅವರು ಹೇಳಿದ್ದಾರೆ.

‘ರೈತರ ಸಮಸ್ಯೆಗೆ ಪರಿಹಾರ- ಅವರನ್ನು ಸಬಲೀಕರಣಗೊಳಿಸುವುದು. ರೈತರ ಎಲ್ಲ ಸಾಲ ಮನ್ನಾ ಮಾಡಿದ್ದೇವೆ ಎಂದು ಸುಳ್ಳು ಹೇಳುವುದು ಹಾಗೂ ದಾರಿತಪ್ಪಿಸುತ್ತಿರುವ ಕಾರಣಕ್ಕೆ ಸಾಲ ಮನ್ನಾವನ್ನು ನಾನು ಲಾಲಿಪಾಪ್ ಎಂದು ಕರೆದಿದ್ದೇನೆ. ರೈತರ ಸಂಪೂರ್ಣ ಸಾಲ ಎಂಬುದು ಆಗಿಲ್ಲ. ಒಂದು ರಾಜಕೀಯ ಪಕ್ಷ ಈ ರೀತಿ ದಾರಿತಪ್ಪಿಸಬಾರದು’ ಎಂದು ಎಎನ್‌ಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಕುಟುಕಿದ್ದಾರೆ.

‘ಒಂದಿಷ್ಟು ಸಣ್ಣಪ್ರಮಾಣದ ರೈತರು ಬ್ಯಾಂಕುಗಳಿಂದ ಸಾಲ ಪಡೆಯುತ್ತಾರೆ. ಬಹುತೇಕ ಮಂದಿ ಸಾಲಕ್ಕೆ ಮೊರೆ ಹೋಗುವುದು ಲೇವಾದೇವಿದಾರರ ಬಳಿಗೆ. ಸಾಲ ಮನ್ನಾದಿಂದ ಇವರಿಗೆ ಅನುಕೂಲವಾಗುವುದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರು ಇದೇ ವರ್ಗಕ್ಕೆ ಸೇರಿದವರು’ ಎಂದು ವಿವರಿಸಿದ್ದಾರೆ. ‘ಸಾಲ ಮನ್ನಾದಿಂದ ರೈತರಿಗೆ ಅನುಕೂಲವಾಗುತ್ತದೆ ಎಂದರೆ ಖಚಿತವಾಗಿಯೂ ಮಾಡುತ್ತೇನೆ. ಆದರೆ ಈ ಹಿಂದೆಯೂ ಸಾಲಮನ್ನಾ ಮಾಡಲಾಗಿತ್ತು. ಮಾಜಿ ಉಪಪ್ರಧಾನಿ ದೇವಿಲಾಲ್ ಅವರ ಅವಧಿ (1989- 1991)ರಲ್ಲೂ ಸಾಲ ಮನ್ನಾ ಆಗಿತ್ತು.

2009 ರಲ್ಲಿ ಲೋಕಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್ ಕೂಡ ಸಾಲ ಮನ್ನಾ ಮಾಡಿತ್ತು. ರೈತರು ಸಾಲವನ್ನೇ ಮಾಡದಂತಹ ಪರಿಸ್ಥಿತಿಯನ್ನು ನಾವು ಸೃಷ್ಟಿಸಬೇಕು. ಇದಕ್ಕಾಗಿ ರೈತರ ಸಬಲೀಕರಣವಾಗಬೇಕು. ಬೀಜದಿಂದ ಮಾರುಕಟ್ಟೆವರೆಗೆ ರೈತರಿಗೆ ಎಲ್ಲ ಸೌಲಭ್ಯ ನೀಡಬೇಕು. ಅದನ್ನು ಮಾಡುವುದು ಬಿಟ್ಟು ಚುನಾವಣೆ ಗೆಲ್ಲಲು ದಾರಿ ಹುಡುಕುತ್ತಿದ್ದಾರೆ’ ಎಂದರು.

ಗಬ್ಬರ್ ಸಿಂಗ್ ಟ್ಯಾಕ್ಸ್ ಗೆ ತಿರುಗೇಟು

ಯಾರಾದರೂ ಏನನ್ನು ಯೋಚನೆ ಮಾಡಿರುತ್ತಾರೋ ಅದನ್ನೇ ಮಾತನಾಡುತ್ತಾರೆ. ದೇಶದ ಎಲ್ಲಾ ರಾಜಕೀಯ ಪಕ್ಷಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕವೇ ಜಿಎಸ್‌ಟಿಯನ್ನು ಅನುಷ್ಠಾನಗೊಳಿಸಲಾಗಿರಲಿಲ್ಲವೇ? ಪ್ರಣಬ್ ಮುಖರ್ಜಿ ಹಣಕಾಸು ಸಚಿವರಾದಾಗಿನಿಂದಲೇ ಜಿಎಸ್‌ಟಿ ಪ್ರಕ್ರಿಯೆ ಆರಂಭವಾಗಿತ್ತು. ಪರಾರಿಕೋರರ ವಾಪಸ್ ತರ್ತೇವೆ ಸಾವಿರಾರು ಕೋಟಿ ರು. ವಂಚಿಸಿ ದೇಶಬಿಟ್ಟು ಪರಾರಿಯಾದವರನ್ನು ಇಂದಲ್ಲಾ ನಾಳೆ ಕರೆತರಲಾಗುವುದು. ರಾಜತಾಂತ್ರಿಕ ಮಾರ್ಗ, ಕಾನೂನು ಹೋರಾಟ, ಆಸ್ತಿ ಮುಟ್ಟುಗೋಲಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಾರತದ ಹಣವನ್ನು ಕದ್ದವರು ಪ್ರತಿಯೊಂದು ಪೈಸೆಗೂ ಲೆಕ್ಕ ಚುಕ್ತಾಮಾಡಬೇಕಾಗುತ್ತದೆ.

ಕಾಂಗ್ರೆಸ್ ಸಂಸ್ಕೃತಿ’ ಮುಕ್ತವಾಗಬೇಕು

‘ಕಾಂಗ್ರೆಸ್‌ನ ಜನರೇ ಕಾಂಗ್ರೆಸ್ ಅಂದರೆ ಅದೊಂದು ವಿಚಾರ, ಅದೊಂದು ಸಂಸ್ಕೃತಿ ಎಂದು ಹೇಳುತ್ತಾರೆ. ನಾನು ಕಾಂಗ್ರೆಸ್ ಮುಕ್ತ ಭಾರತದ ವಿಷಯಕ್ಕೆ ಬಂದಾಗ ದೇಶವನ್ನು ಈ ಸಂಸ್ಕೃತಿಯಿಂದ, ಈ ರೀತಿಯ ವಿಚಾರಗಳಿಂದ ಮುಕ್ತಗೊಳಿಸಬೇಕು ಎಂದು ನಾನು ಬಯಸಿದ್ದೆ. ಕಾಂಗ್ರೆಸ್ ಸಂಸ್ಕೃತಿಯಿಂದ ಕಾಂಗ್ರೆಸ್ ಕೂಡ ಮುಕ್ತವಾಗುವ ಅಗತ್ಯವಿದೆ’.

ಯೋಜನಾ ಆಯೋಗಕ್ಕೆ ರಾಜೀವ್ ಟೀಕೆ

ನಮ್ಮ ಪ್ರಧಾನಿಗಳಲ್ಲಿ ಒಬ್ಬರು ಯೋಜನಾ ಆಯೋಗದ ಸದಸ್ಯರನ್ನು ‘ಹಾಸ್ಯಗಾರರ ಕೂಟ’ ಎಂದು ಕರೆದಿದ್ದರು. ಅಂದು ಯೋಜನಾ ಆಯೋಗದ ಉಪಾಧ್ಯಕ್ಷರು ಯಾರಾಗಿದ್ದರು ಎನ್ನುವುದು ನಿಮಗೆ ಗೊತ್ತೇ? (ಮನಮೋಹನ್ ಸಿಂಗ್ ಅವರು ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ವೇಳೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದನ್ನು ಮೋದಿ ಇಲ್ಲಿ ಉಲ್ಲೇಖಿಸಿದ್ದಾರೆ.)

ಪಂಚರಾಜ್ಯ ಸೋಲಿನ ಆತ್ಮಾವಲೋಕನ

ತೆಲಂಗಾಣ, ಮಿಜೋರಂನಲ್ಲಿ ಬಿಜೆಪಿಗೆ ಯಾರೂ ಅವಕಾಶ ನೀಡಿರಲಿಲ್ಲ. ಛತ್ತೀಸಗಢದಲ್ಲಿ ಸ್ಪಷ್ಟ ಜನಪ್ರಾಯ ಬಂದಿದ್ದು, ಬಿಜೆಪಿ ಸೋಲು ಅನುಭವಿಸಿದೆ. ಆದರೆ, ಇನ್ನೆರಡು ರಾಜ್ಯಗಳಲ್ಲಿ ಅತಂತ್ರ ವಿಧಾನಸಭೆ ಫಲಿತಾಂಶ ಬಂದಿದೆ. ಎರಡನೇಯದಾಗಿ 15 ವರ್ಷಗಳ ಆಡಳಿತ ವಿರೋಧಿ ಅಲೆಯನ್ನು ನಾವು ಎದುರಿಸಬೇಕಾಯಿತು. ನಮ್ಮ ನ್ಯೂನತೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಇದು ಯಶಸ್ವೀ ವರ್ಷ

2018 ಒಂದು ಯಶಸ್ವೀ ವರ್ಷ. ಹಲವಾರು ಸಂಗತಿಗಳಲ್ಲಿ ಚುನಾವಣೆಯೂ ಒಂದು. ಆಯುಷ್ಮಾನ್ ಭಾರತ ಯೊಜನೆಯ ಅಡಿಯಲ್ಲಿ ಬಡವರಿಗೆ 5 ಲಕ್ಷ ರು.ವರೆಗೂ ಉಚಿತ ವಿಮಾ ಸೌಲಭ್ಯ ನೀಡಲಾಗುತ್ತಿದೆ. ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅಪಾರ ಸಂಖ್ಯೆಯ ಜನರು ಇಂದು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇದನ್ನು ಹೇಗೆ ವೈಫಲ್ಯವೆಂದು ಪರಿಗಣಿಸುತ್ತೀರಿ?