Asianet Suvarna News Asianet Suvarna News

ಬನ್ರಿ ಮಾತಾಡೋಣ: ಸಿಬಿಐ ಟಾಪ್ ಅಧಿಕಾರಿಗಳಿಗೆ ಮೋದಿ ಬುಲಾವ್!

ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಲ್ಲಿನ ಆಂತರಿಕ ಸಂಘರ್ಷ! ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ ಸಿಬಿಐ ಲಂಚ ಹಗರಣ! ಸಿಬಿಐ ಟಾಪ್ ಅಧಿಕಾರಿಗಳನ್ನು ಮಾತುಕತೆಗೆ ಆಹ್ವಾನಿಸಿದ ಮೋದಿ! ಅಲೋಕ್ ವರ್ಮಾ, ರಾಜೇಶ್ ಆಸ್ಥಾನಾಗೆ ಪ್ರಧಾನಿ ಬುಲಾವ್! ಮೊಯಿನ್ ಖುರೇಷಿ ಪ್ರಕರಣದಲ್ಲಿ ಲಂಚ ಸ್ವೀಕರಿಸಿದ ಆರೋಪ

PM Modi summons CBI Top Officials
Author
Bengaluru, First Published Oct 23, 2018, 11:28 AM IST

ನವದೆಹಲಿ(ಅ.23): ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಲ್ಲಿನ ಆಂತರಿಕ ಸಂಘರ್ಷ ಹೊಸ ತಿರುವು ಪಡೆದುಕೊಂಡಿದ್ದು, ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ನಂ.2 ಸ್ಥಾನದಲ್ಲಿರುವ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಬುಲಾವ್ ನೀಡಿದ್ದಾರೆ.

ಎರಡು ಕೋಟಿ ರೂ. ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನಾ ಅವರ ವಿರುದ್ಧವೇ ಎಫ್ಐಆರ್ ದಾಖಲಿಸಿದೆ. ಅಲ್ಲದೆ ರಾ ಸಂಸ್ಥೆಯ ನಂ.2 ಸ್ಥಾನದಲ್ಲಿರುವ ಸಮಂತ್ ಕುಮಾರ್ ಗೋಯಲ್ ಅವರ ಹೆಸರನ್ನೂ ಎಫ್ಐಆರ್ ನಲ್ಲಿ ಉಲ್ಲೇಖಿಸಿದೆ. ಇದೇ ಪ್ರಕರಣದಲ್ಲಿ ಆರೋಪಿಯಾಗಿರುವ ಸಿಬಿಐ ಉಪ ಪೊಲೀಸ್ ಅಧೀಕ್ಷಕ ದೇವೇಂದರ್ ಕುಮಾರ್ ಅವರನ್ನು ಸಿಬಿಐ ಅಧಿಕಾರಿಗಳು ಈಗಾಗಲೇ ಬಂಧಿಸಿದ್ದಾರೆ.

ವಿವಾದಾತ್ಮಕ ಮಾಂಸ ರಫ್ತುದಾರ ಮೊಯಿನ್ ಖುರೇಷಿ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ದೇವೇಂದರ್ ಕುಮಾರ್ ಅವರನ್ನು, ಪ್ರಕರಣದ ಮತ್ತೊಬ್ಬ ಆರೋಪಿ ಸತೀಶ್ ಸನಾಗೆ ಕ್ಲೀನ್ ಚಿಟ್ ನೀಡಲು ಲಂಚ ಪಡೆದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಥಾನಾ ನೇತೃತ್ವದ ಸಿಬಿಐ ತಂಡ ಸೆಪ್ಟೆಂಬರ್ 26, 2018ರಂದು ಸತೀಶ್ ಸನಾಗೆ ಕ್ಲೀನ್ ಚಿಟ್ ನೀಡಲು ಆರೋಪಿಯಿಂದ ನಕಲಿ ಹೇಳಿಕೆ ಪಡೆದಿದ್ದಾರೆ. ಆದರೆ ಆ ದಿನ ಆರೋಪಿ ಉದ್ಯಮಿ ಹೈದರಾಬಾದ್ ನಲ್ಲಿದ್ದರು ಎಂಬುದು ಸಿಬಿಐ ತನಿಖೆ ವೇಳೆ ಬಹಿರಂಗವಾಗಿದೆ.

ದೇವೇಂದರ್ ಕುಮಾರ್ ಹಾಗೂ ಸಿಬಿಐ ನಿರ್ದಶಕ ಅಲೋಕ್ ವರ್ಮಾ ನಂತರ ನಿರ್ದೇಶಕ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿರುವ ಆಸ್ಥಾನಾ ವಿರುದ್ಧ ಮೊಯಿನ್ ಖುರೇಷಿ ಪ್ರಕರಣದಲ್ಲಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.

ಪ್ರಕರಣದಲ್ಲಿ ತಮ್ಮ ಹೆಸರು ಕೈ ಬಿಡಲು ಆಸ್ಥಾನಾ ಎರಡು ಕೋಟಿ ರೂ. ಲಂಚ ಪಡೆದಿದ್ದರು ಎಂದು ಹೈದರಾಬಾದ್‌ನ ಉದ್ಯಮಿ ಸತೀಶ್ ಸಿಬಿಐ ವಿಚಾರಣೆ ವೇಳೆ ಹೇಳಿಕೆ ನೀಡಿದ್ದರು.

ಡಿಸೆಂಬರ್‌ 2017ರಿಂದ ಹತ್ತು ತಿಂಗಳ ಅವಧಿಯಲ್ಲಿ ದುಬೈ ಮೂಲದ ಉದ್ಯಮಿ ಮನೋಜ್‌ ಪ್ರಸಾದ್‌ ಮೂಲಕ ಕಂತುಗಳಲ್ಲಿ ಹಣ ನೀಡಿರುವುದಾಗಿ ಸನಾ ಆರೋಪಿಸಿದ್ದಾರೆ. ಈ ಸಂಬಂಧ ಸಿಬಿಐಗೆ ದೂರನ್ನೂ ನೀಡಿದ್ದರು. 

ದೆಹಲಿಯಲ್ಲಿ ಮಾಂಸ ರಫ್ತು ವಹಿವಾಟು ನಡೆಸುವ ಖುರೇಷಿ ದುಬೈ, ಲಂಡನ್‌ ಮತ್ತು ಯುರೋಪ್‌ಗಳಿಗೆ 2000 ಕೋಟಿ ರುಪಾಯಿಗೂ ಅಧಿಕ ಮೊತ್ತವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.

Follow Us:
Download App:
  • android
  • ios