ಪಟನಾ[ಮಾ.04]: ‘ಒಂದೆಡೆ ನಾನು ಭಯೋತ್ಪಾದನೆ, ಬಡತನ, ಭ್ರಷ್ಟಾಚಾರ- ಮುಂತಾದ ಪಿಡುಗುಗಳನ್ನು ನಿರ್ಮೂಲನೆ ಮಾಡಲು ಯತ್ನಿಸುತ್ತಿದ್ದೇನೆ. ಆದರೆ ಪ್ರತಿಪಕ್ಷಗಳು ನನ್ನನ್ನೇ ಮುಗಿಸಲು ಸಂಚು ರೂಪಿಸುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷಗಳ ವಿರುದ್ಧ ತೀಕ್ಷ$್ಣ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಪಾಕಿಸ್ತಾನದ ಉಗ್ರರ ಅಡಗುತಾಣಗಳ ಮೇಲೆ ನಡೆಸಿದ ಸರ್ಜಿಕಲ್‌ ದಾಳಿಗೆ ಸಾಕ್ಷ್ಯ ಕೇಳುತ್ತಿರುವ ಪ್ರತಿಪಕ್ಷಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಇಲ್ಲಿ ಭಾನುವಾರ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಅವರ ಸಮ್ಮುಖದಲ್ಲಿ ಎನ್‌ಡಿಎ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ಈ ಪಕ್ಷಗಳು ಪಾಕಿಸ್ತಾನ ಮಾತನಾಡುವ ಭಾಷೆಯಲ್ಲಿ ಮಾತಾಡುತ್ತಿವೆ. ಇದು ತರವೇ? ಇದೇ ಭಾಷಣವನ್ನು ನಮ್ಮ ಪಕ್ಕದ ದೇಶ (ಪಾಕಿಸ್ತಾನ) ತನ್ನ ಆತ್ಮರಕ್ಷಣೆಗೆ ಬಳಸಿಕೊಳ್ಳುತ್ತಿದೆ. ತನ್ನ ಭಯೋತ್ಪಾದಕ ಕೃತ್ಯಗಳಿಗೆ ಗುರಾಣಿಯನ್ನಾಗಿ ಮಾಡಿಕೊಳ್ಳುತ್ತಿದೆ. ಉಲ್ಲಾಸದಿಂದ ಚಪ್ಪಾಳೆ ತಟ್ಟುತ್ತಿದೆ’ ಎಂದು ಛೇಡಿಸಿದರು.

‘ನಾನು ಭಯೋತ್ಪಾದನೆ ಶಮನಕ್ಕೆ ಯತ್ನ ಮಾಡುತ್ತಿದ್ದರೆ ನನ್ನನ್ನೇ ಶಮನ ಮಾಡಲು ಪ್ರತಿಪಕ್ಷಗಳು ಯತ್ನಿಸುತ್ತಿವೆ. ನಾವೆಲ್ಲ ಒಂದೇ ಸ್ವರದಲ್ಲಿ ಮಾತನಾಡಬೇಕಾದ ಸಂದರ್ಭದಲ್ಲಿ 21 ಪಕ್ಷಗಳು ದಿಲ್ಲಿಯಲ್ಲಿ ಸೇರಿಕೊಂಡು ನಮ್ಮ ವಿರುದ್ಧ ಖಂಡನಾ ಗೊತ್ತುವಳಿ ಪಾಸು ಮಾಡುತ್ತಿವೆ. ದೇಶಕ್ಕಾಗಿ ಶೌರ್ಯ ಸಾಹಸ ತೋರಿದ ಸಶಸ್ತ್ರ ಪಡೆಗಳಿಂದ ಸಾಕ್ಷ್ಯ ಕೇಳುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಕಾಂಗ್ರೆಸ್‌ ಮುಖಂಡ ದಿಗ್ವಿಜಯ ಸಿಂಗ್‌ ಅವರು ‘ಸರ್ಜಿಕಲ್‌ ದಾಳಿ’ಯ ಬಗ್ಗೆ ಸಾಕ್ಷ್ಯ ಕೇಳಿದ್ದರು. ಇದಲ್ಲದೇ ಅನೇಕ ಕಾಂಗ್ರೆಸ್‌ ಮುಖಂಡರು ಕೂಡ ಕೇಂದ್ರ ಸರ್ಕಾರವು ಸರ್ಜಿಕಲ್‌ ದಾಳಿಯ ಸಾಕ್ಷ್ಯ ನೀಡಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಉತ್ತರವಾಗಿ ಮೋದಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.