ಪ್ರತಿ ಬಿಜೆಪಿ ಸಂಸದನ ಫೇಸ್‌ಬುಕ್‌ ಪುಟಕ್ಕೆ ಕನಿಷ್ಠ 3 ಲಕ್ಷ ‘ಲೈಕ್‌’ಗಳು ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರಿ ವಿಧಿಸಿದ್ದಾರೆ. 

ನವದೆಹಲಿ: ಪ್ರತಿ ಬಿಜೆಪಿ ಸಂಸದನ ಫೇಸ್‌ಬುಕ್‌ ಪುಟಕ್ಕೆ ಕನಿಷ್ಠ 3 ಲಕ್ಷ ‘ಲೈಕ್‌’ಗಳು ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರಿ ವಿಧಿಸಿದ್ದಾರೆ. ‘ಈ ಗುರಿ ತಲುಪಿದರೆ, ಗುರಿ ಮುಟ್ಟಿದ ಸಂಸದನ ಕ್ಷೇತ್ರದ ಕಾರ್ಯಕರ್ತರೊಂದಿಗೆ ನೇರ ವಿಡಿಯೋ ಸಂವಾದ ನಡೆಸುತ್ತೇನೆ’ ಎಂದು ಮೋದಿ ಅವರು ಆಫರ್‌ ನೀಡಿದ್ದಾರೆ.

ಶುಕ್ರವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿ ಅವರು ಈ ಹೊಸ ಟಾರ್ಗೆಟ್‌ ವಿಧಿಸಿದರು. ಫೇಸ್‌ಬುಕ್‌ ಹಾಗೂ ಟ್ವೀಟರ್‌ನಲ್ಲಿ ಸಂಸದರು ಕ್ರಿಯಾಶೀಲವಾಗಿರಬೇಕು ಎಂದು ಕರೆ ನೀಡಿದರು. ಈ ವೇಳೆ ಎಷ್ಟುಸಂಸದರ ಫೇಸ್‌ಬುಕ್‌ಗೆ 3 ಲಕ್ಷ ಲೈಕ್‌ ಇವೆ ಎಂದು ಪ್ರಧಾನಿ ಪ್ರಶ್ನಿಸಿದಾಗ ಕೆಲವೇ ಸಂಸದರು ಕೈ ಎತ್ತಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಈ ಮೇಲಿನಂತೆ ಗುರಿ ವಿಧಿಸಿ ಸಂವಾದದ ಆಫರ್‌ ನೀಡಿದರು ಎಂದು ಸಭೆಯಲ್ಲಿದ್ದ ಕೆಲವು ಸಂಸದರು ತಿಳಿಸಿದ್ದಾರೆ.

77 ಬಿಜೆಪಿ ಸಂಸದರ ಬಳಿ ಫೇಸ್‌ಬುಕ್‌ ಖಾತೆ ಇಲ್ಲ : ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ 77 ಬಿಜೆಪಿ ಸಂಸದರ ಬಳಿ ಫೇಸ್‌ಬುಕ್‌ ಖಾತೆ ಇಲ್ಲ ಎಂದು ಬೆಳಕಿಗೆ ಬಂತು. ಅಲ್ಲದೆ, 77 ಸಂಸದರ ಫೇಸ್‌ಬುಕ್‌ ಖಾತೆ ‘ವೆರಿಫೈಡ್‌’ ಅಲ್ಲ ಎಂದು ಗೊತ್ತಾಯಿತು.