ಗುರುವಾಯೂರು (ಜೂ.08): ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಕೇರಳಕ್ಕೆ ಆಗಮಿಸಿರುವ ಪ್ರಧಾನಿ ಮೋದಿ, ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಇಂದು ಬೆಳಗ್ಗೆ ಕೇರಳದ ಗುರುವಾಯೂರು ದೇಗುಲಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ದೇವಾಲಯದಲ್ಲಿ ಕಮಲದ ಹೂವಿನ ತುಲಾಭಾರ ಸೇವೆಯಲ್ಲಿ ಭಾಗಿಯಾದರು. 

ವಿಶೇಷ ಪೂಜೆ ಬಳಿಕ ಕೇರಳ ಬಿಜೆಪಿ ರಾಜ್ಯ ಘಟಕ ಏರ್ಪಡಿಸಿದ್ದ ಅಭಿನಂದನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮೋದಿ, ತಮ್ಮ ಸ್ವಕ್ಷೇತ್ರ ವಾರಣಾಸಿಯಷ್ಟೇ ಕೇರಳವನ್ನೂ ಪ್ರೀತಿಸುವುದಾಗಿ ಹೇಳಿದರು.

ಉಡುಪಿ, ಗುರುವಾಯೂರು ಹಾಗೂ ದ್ವಾರಕಾದೊಂದಿಗೆ ಗುಜರಾತ್ ಜನತೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ.  ದ್ವಾರಕಾದೀಶ ಮತ್ತು ಕೃಷ್ಣನೊಂದಿಗೆ ಗುಜರಾತ್ ಜನತೆ ಧಾರ್ಮಿಕ ಮತ್ತು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ ಎಂದು ಮೋದಿ ನುಡಿದರು.

ಚುನಾವಣೆಯಲ್ಲಿ ಬಿಜೆಪಿಯನ್ನು ಜನತೆ ಸೇವೆ ಮಾಡಲು ಆರಿಸಿದ್ದು, ಮುಂದಿನ 5 ವರ್ಷಗಳ ಕಾಲ ತಾವು ಜನತೆಯ ಸೇವಕರಾಗಿ ಕೆಲಸ ಮಾಡುವುದಾಗಿ ಪ್ರಧಾನಿ ಹೇಳಿದರು.

"