ನವದೆಹಲಿ(ಫೆ.28): ಶತ್ರುಗಳು ದೇಶವನ್ನು ದುರ್ಬಲಗೊಳಿಸುವ ಹುನ್ನಾರ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಭಾರತ ಒಗ್ಗಟ್ಟಿನಿಂದ ಹೋರಾಡುತ್ತದೆ, ಒಗ್ಗಟ್ಟಿನಿಂದ ಗೆಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸುಮಾರು 1 ಕೋಟಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಾವು ಒಗ್ಗಟ್ಟಿನಿಂದ ಯೋಧರ ಜೊತೆ ನಿಲ್ಲಬೇಕಿದೆ ಎಂದು ಕರೆ ನೀಡಿದ್ದಾರೆ. 

'ಮೇರಾ ಬೂತ್ ಸಬ್ಸೆ ಮಜ್ಬೂತ್' ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಶತ್ರುಗಳು ಭಯೋತ್ಪಾದಕರನ್ನು ಬೆಂಬಲಿಸಿ ನಮ್ಮ ದೇಶದ ವಿರುದ್ಧ ಕಾರ್ಯಾಚರಣೆ ನಡೆಸಿದರೆ, ಅದು ನಮ್ಮ ಅಭಿವೃದ್ಧಿಯನ್ನು ತಡೆಯುವುದಕ್ಕಾಗಿ ಆಗಿರುತ್ತದೆ ಎಂದು ಹರಿಹಾಯ್ದರು.

ಭಾರತ ಬಲಿಷ್ಠವಾಗಿದ್ದು, ಎಷ್ಟೇ ಅಡೆತಡೆಗಳು ಬಂದರೂ ನಮ್ಮ ಅಭಿವೃದ್ಧಿಯನ್ನು ನಿಲ್ಲಿಸುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ತೋರಿಸಬೇಕಿದೆ ಎಂದು ಬೂತ್ ಮಟ್ಟದ ಕಾರ್ಯಕರ್ತರನ್ನು ಮೋದಿ ಹುರಿದುಂಬಿಸಿದರು.