ನವದೆಹಲಿ(ಸೆ.08): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೋದಿ 2.0 ಸರ್ಕಾರ ಅಸ್ತಿತ್ವಕ್ಕೆ ಬಂದು ಇಂದಿಗೆ ನೂರು ದಿನಗಳಾಗಿವೆ. ಈ ನೂರು ದಿನಗಳಲ್ಲಿ ದೇಶದಲ್ಲಿ ಅತ್ಯುಗ್ರ ಬದಲಾವಣೆಗಳಾಗಿದ್ದು, ಈ ಕುರಿತು ಖುದ್ದು ಪ್ರಧಾನಿ ಮೋದಿ ವಿಶ್ಲೇಷಣೆ ಮಾಡಿದ್ದಾರೆ.

ತಮ್ಮ ನೂರು ದಿನಗಳ ಆಡಳಿತಾವಧಿಯಲ್ಲಿ ದೇಶ ಹಲವು ಬದಲಾವಣೆಗಳಿಗೆ ಸಾಕ್ಷಿಯಾಗಿದ್ದು, ಬದಲಾವಣೆ ಮತ್ತು ಅಭಿವೃದ್ಧಿ ಕಾರ್ಯಗಳು ಜೊತೆಜೊತೆಯಾಗಿ ಸಾಗುತ್ತಿವೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಜನತೆಯ ಬೆಂಬಲದೊಂದಿಗೆ ಕೇಂದ್ರ ಸರ್ಕಾರ ಹಲವು ಐತಿಹಾಸಿಕ ನಿರ್ಣಯಗಳನ್ನು ಕೈಗೊಂಡಿದ್ದು, ಭವಿಷ್ಯದ ಭಾರತಕ್ಕೆ ಮುನ್ನಡಿ ಬರೆಯಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಪ್ರಮುಖವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ, ತ್ರಿವಳಿ ತಲಾಖ್ ನಿಷೇಧ ಮಸೂದೆ ಸೇರಿದಂತೆ ಹಲವು ಮಹತ್ವದ ಐತಿಹಾಸಿಕ ನಿರ್ಧಾರ ಕೈಗೊಂಡಿರುವ ತೃಪ್ತಿ ತಮಗಿದೆ ಎಂದು ಮೋದಿ ನುಡಿದಿದ್ದಾರೆ.

ಇನ್ನು ಮೋದಿ 2.0 ಸರ್ಕಾರದ ಇಲಾಖಾವಾರು ಸಾಧನೆಯ ಕುರಿತು ಆಯಾ ಇಲಾಖೆಯ ಸಚಿವರುಗಳು ಮಾಹಿತಿ ನೀಡಲಿದ್ದು, ಈ ಕುರಿತು ಶೀಘ್ರದಲ್ಲೇ ಕಿರು ಹಿತ್ತಿಗೆಯನ್ನೂ ಬಿಡುಗಡೆ ಮಾಡಲಾಗುವುದು.

ನಾಳೆ(ಸೋಮವಾರ)ಸುಮಾರು 17 ಇಲಾಖೆಗಳ ಸಚಿವರುಗಳು ತಮ್ಮ ಇಲಾಖೆಯ ಪ್ರಗತಿಯ ವರದಿ ನೀಡಲಿದ್ದು, ದೇಶದ ವಿವಿಧೆಡೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ಇನ್ನು ಮೋದಿ 2.0 ಸರ್ಕಾರ 100 ದಿನ ಪೂರೈಸಿದ್ದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಲೇವಡಿ ಮಾಡಿದ್ದು, ಈ ನೂರು ದಿನದಲ್ಲಿ ಸರ್ಕಾರದ ಸಾಧನೆ ಶೂನ್ಯ ಎಂದು ಹರಿಹಾಯ್ದಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 100ದಿನದಲ್ಲಿ ಏನೂ ವಿಕಾಸವಾಗಿಲ್ಲ, ಆದರೆ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸ ಮಾತ್ರ ನಿರಂತರವಾಗಿ ನಡೆದಿದೆ ಎಂದು ಆರೋಪಿಸಿದ್ದಾರೆ.