ಕಾಂಗ್ರೆಸ್ ಈಗ 'ಬೇಲ್ ಗಾಡಿ' ಪಕ್ಷ: ಮೋದಿ ವ್ಯಂಗ್ಯ!

PM Modi's 'Bail-Gaadi' Dig At Congress On Shashi Thaoor's Day In Court
Highlights

ಕಾಂಗ್ರೆಸ್ ಎಂದರೆ ಬೇಲ್ ಗಾಡಿ ಪಕ್ಷ

ಪ್ರಧಾನಿ ನರೇಂದ್ರ ಮೋದಿ ಲೇವಡಿ

ಪ್ರಮುಖ ನಾಯಕರೆಲ್ಲಾ ಬೇಲ್ ಮೇಲೆ ಹೊರಗಿದ್ದಾರೆ

ಜೈಪುರ್ ದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಜೈಪುರ್(ಜು.7): ಕಾಂಗ್ರೆಸ್ ಪಕ್ಷದ ಕೆಲ ಪ್ರಮುಖ ನಾಯಕರು ನ್ಯಾಯಾಲಯದಿಂದ ಜಾಮೀನು ಪಡೆದಿದ್ದು, ಹೀಗಾಗಿ ಕಾಂಗ್ರೆಸ್ ನ್ನು 'ಬೇಲ್ ಗಾಡಿ' ಗಳ ಪಕ್ಷ ಎಂದು ಕರೆಯಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

ರಾಜಸ್ಥಾನದಲ್ಲಿ ಸಾರ್ವಜನಿಕ ಸಮಾರಂಬ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ನಾಯಕರು ಹಾಗೂ ಮಾಜಿ ಸಚಿವರುಗಳಾಗಿದ್ದವರು ಇತ್ತೀಚಿನ ದಿನಗಳಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಕಾಂಗ್ರೆಸ್ ಪಕ್ಷದ ಉದ್ದೇಶಗಳನ್ನು ತಿಳಿದ ಜನರು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು 'ಬೇಲ್ ಗಾಡಿ' ಎಂದು ಕರೆಯಲು ಆರಂಭಿಸಿದ್ದಾರೆಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ 2016ರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳ ಮೇಲೆ ಸೇನೆ ನಡೆಸಿದ್ದ ಸರ್ಜಿಕಲ್ ದಾಳಿಯನ್ನು ಟೀಕೆ ಮಾಡಿದ್ದ ಕಾಂಗ್ರೆಸ್ ವಿರುದ್ಧ ಮೋದಿ ಕಿಡಿಕಾರಿದ್ದಾರೆ. ಸೇನೆಯ ಸಾಮರ್ಥ್ಯದ ಕುರಿತಂತೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಿರುವುದು ನಿಜಕ್ಕೂ ದುರಾದೃಷ್ಟಕರ ಸಂಗತಿ. ಈ ಹಿಂದೆಂದೂ ಈ ರೀತಿ ನಡೆದಿರಲಿಲ್ಲ. ಇಂತಹ ರಾಜಕೀಯ ಮಾಡುತ್ತಿರುವವರನ್ನು ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಪ್ರಧಾನಿ ಹರಿಹಾಯ್ದರು.

ಕೇಂದ್ರ ಸರ್ಕಾರ ಕೇವಲ ವಿಕಾಸದ ಅಜೆಂಡಾ ಹೊಂದಿದ್ದು, ಜೈಪುರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಎಲ್ಲರೂ ಕೊಂಡಾಡಲೇಬೇಕು ಎಂದು ಮೋದಿ ಹೇಳಿದರು. ಅಲ್ಲದೇ ರಾಜಸ್ಥಾನದ ಅಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಟ್ಟಿಗೆ ಕಾರ್ಯನಿರ್ವಹಿಸುತ್ತಿವೆ ಎಂದು ಮೋದಿ ಜನತೆಗೆ ಭರವಸೆ ನೀಡಿದರು.

loader