ಮಾಲೆ[ಜೂ.09]: ವಿದೇಶಿ ಗಣ್ಯಾತಿಗಣ್ಯರನ್ನು ಅಪ್ಪುಗೆ ಮೂಲಕ ವಿಶ್ವಾಸಕ್ಕೆ ತೆಗೆದುಕೊಳ್ಳುವ ‘ಹಗ್‌ಪ್ಲೋಮಸಿ’ ಎಂಬ ರಾಜತಾಂತ್ರಿಕತೆ ಆರಂಭಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ‘ಕ್ರಿಕೆಟ್‌ ಡಿಪ್ಲೋಮಸಿ’ ಎಂಬ ಹೊಸ ಶೈಲಿ ಕಂಡುಕೊಂಡಿದ್ದಾರೆ. ಕ್ರಿಕೆಟ್‌ ಪ್ರೇಮಿಯಾಗಿರುವ ಹಾಗೂ ತಮ್ಮ ದೇಶದಲ್ಲಿ ಕ್ರಿಕೆಟ್‌ ಅನ್ನು ಅಭಿವೃದ್ಧಿಪಡಿಸಲು ತುದಿಗಾಲಿನಲ್ಲಿ ನಿಂತಿರುವ ಮಾಲ್ಡೀವ್‌್ಸ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್‌ ಸೊಲಿಹ್‌ ಅವರಿಗೆ ಲಂಡನ್‌ನಲ್ಲಿ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾಗಿಯಾಗಿರುವ ಭಾರತೀಯ ಕ್ರಿಕೆಟ್‌ ತಂಡದ ಎಲ್ಲ ಆಟಗಾರರ ಸಹಿಯುಳ್ಳ ಬ್ಯಾಟ್‌ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಏತನ್ಮಧ್ಯೆ, ಮಾಲ್ಡೀವ್ಸ್ ಕೋರಿಕೆಯ ಮೇರೆಗೆ ಆ ದೇಶದಲ್ಲಿ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣ ಮಾಡಲು ಹಾಗೂ ಅಲ್ಲಿನ ಆಟಗಾರರಿಗೆ ತರಬೇತಿ ನೀಡಲೂ ಭಾರತ ಮುಂದಾಗಿದೆ. ಪ್ರಧಾನಿಯಾಗಿ ಪುನರಾಯ್ಕೆಯಾದ ಬಳಿಕ ಮಾಲ್ಡೀವ್ಸ್ನಿಂದ ತಮ್ಮ ಚೊಚ್ಚಲ ವಿದೇಶ ಪ್ರವಾಸ ಆರಂಭಿಸಿದ ಮೋದಿ ಅವರು ಸೊಲಿಹ್‌ ಅವರಿಗೆ ಬ್ಯಾಟ್‌ ಉಡುಗೊರೆ ನೀಡಿದರು.

ಕಳೆದ ಏಪ್ರಿಲ್‌ನಲ್ಲಿ ಸೊಲಿಹ್‌ ಅವರು ಬೆಂಗಳೂರಿಗೆ ಭೇಟಿ ನೀಡಿ ಐಪಿಎಲ್‌ ಪಂದ್ಯ ವೀಕ್ಷಿಸಿ ಹೋಗಿದ್ದರು. ಬಳಿಕ ಮಾಲ್ಡೀವ್ಸ್ನಲ್ಲಿ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಿಸಲು ಒಲವು ತೋರಿದ್ದರು. ಇದಕ್ಕಾಗಿ ಭಾರತದ ಸಹಕಾರ ಕೋರಿದ್ದರು.

ಈಗಾಗಲೇ ವಿದೇಶಾಂಗ ಸಚಿವಾಲಯ ಮಾಲ್ಡೀವ್ಸ್ ಕ್ರಿಕೆಟಿಗರಿಗೆ ತರಬೇತಿ ನೀಡುವ ಸಂಬಂಧ ಬಿಸಿಸಿಐ ಜತೆ ಕಾರ್ಯೋನ್ಮುಖವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ತಿಳಿಸಿದ್ದಾರೆ.