ನವದೆಹಲಿ[ಆ.12]: ಯೋಗ, ಫೋಟೋಗ್ರಫಿ ಸೇರಿದಂತೆ ರಾಜಕೀಯ ಹೊರತಾಗಿ ಇತರೆ ಹಲವು ಹವ್ಯಾಸಗಳನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮತ್ತೊಂದು ಮುಖ ಸೋಮವಾರ ಅನಾವರಣಗೊಳ್ಳಲಿದೆ. ಪ್ರಸಿದ್ಧ ಸಾಹಸಿಗ ಬೆಯರ್‌ ಗ್ರಿಲ್ಸ್‌ ಅವರು ನಡೆಸಿಕೊಡುವ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಿರುವ ಸಂಚಿಕೆ ಸೋಮವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ ಡಿಸ್ಕವರಿ ಸಮೂಹದ 12 ಚಾನೆಲ್‌ಗಳಲ್ಲಿ ವಿಶ್ವದ 180 ದೇಶಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಉತ್ತರಾಖಂಡದ ಜಿಮ್‌ ಕಾರ್ಬೆಟ್‌ ಉದ್ಯಾನದಲ್ಲಿ ಗ್ರಿಲ್ಸ್‌ ಜತೆಗೂಡಿ ಮೋದಿ ಕಳೆದ ಫೆಬ್ರುವರಿ ತಿಂಗಳಲ್ಲಿ ನಡೆಸಿದ್ದ ಸಾಹಸವನ್ನು ಈ ಕಾರ್ಯಕ್ರಮ ತೋರಿಸಲಿದ್ದು, ಮೋದಿ ಅವರ ಮತ್ತೊಂದು ಆಸಕ್ತಿಯ ಕ್ಷೇತ್ರವನ್ನು ವೀಕ್ಷಕರ ಮುಂದೆ ತೆರೆದಿಡಲಿದೆ.

ಕೈಯ್ಯಲ್ಲೊಂದು ಕೋಲು, ತೆಪ್ಪದ ಸವಾರಿ, ಕಾಡಿನಲ್ಲಿ ಸಾಹಸ ಮೆರೆದ ಪಿಎಂ ಮೋದಿ!

44 ಸಿಆರ್‌ಪಿಎಫ್‌ ಯೋಧರನ್ನು ಬಲಿ ಪಡೆದ ಜಮ್ಮು-ಕಾಶ್ಮೀರದ ಪುಲ್ವಾಮಾ ಭಯೋತ್ಪಾದಕ ದಾಳಿ ನಡೆದ ದಿನವೇ, ಅಂದರೆ ಫೆ.14ರಂದು ಈ ಕಾರ್ಯಕ್ರಮದ ಚಿತ್ರೀಕರಣ ಉತ್ತರಾಖಂಡದ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಮೋದಿ ಅವರು ಅರಣ್ಯ ಹಾಗೂ ತಮ್ಮ ನಡುವಿರುವ ಸಂಬಂಧ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.