ನರೇಂದ್ರ ಮೊದಿ ಇವತ್ತು ದೇಶದ ಜನರಿಗೆ ಮೆಗಾ ಬಂಪರ್​ ಘೋಷಿಸುವ ಸಾಧ್ಯತೆ ಇದೆ.

ನವದೆಹಲಿ (ಅ.24): ನರೇಂದ್ರ ಮೊದಿ ಇವತ್ತು ದೇಶದ ಜನರಿಗೆ ಮೆಗಾ ಬಂಪರ್​ ಘೋಷಿಸುವ ಸಾಧ್ಯತೆ ಇದೆ.

ದೇಶದ ಚರಿತ್ರೆಯಲ್ಲೇ ಅತಿ ದೊಡ್ಡದಾದ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ಕೇಂದ್ರ ಸರ್ಕಾರ ಇಂದು ಅನುಮೋದನೆ ನೀಡಲಿದೆ. 2022 ರ ವೇಳೆಗೆ 6.9 ಲಕ್ಷ ಕೋಟಿ ರೂ ಹೂಡಿಕೆ ಮಾಡಲಿರುವ ಈ ಯೋಜನೆಯಡಿ ಅಂದಾಜು 83,000 ಕಿ.ಮೀ ಹೆದ್ದಾರಿ ವಿಸ್ತರಣೆಯಾಗಲಿದೆ. ಆರ್ಥಿಕ ಚಟುವಟಿಕೆಗಳಿಗೆ ಚುರುಕು ನೀಡಲು ಹಾಗೂ ಮುಂದಿನ 5 ವರ್ಷಗಳಲ್ಲಿ ದೇಶಾದ್ಯಂತ ಒಟ್ಟು 32 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸುವ ಗುರಿಯುಳ್ಳ ಈ ಪ್ರಸ್ತಾವಕ್ಕೆ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಲಿದೆ. ಭಾರತ್‌ಮಾಲಾ ಹೆದ್ದಾರಿ ಯೋಜನೆಯಡಿ 28,400 ಕಿ.ಮೀ ಹೊಸ ಹೆದ್ದಾರಿಗಳೂ ಇದರಲ್ಲಿ ಸೇರಿವೆ. ಗಡಿ ಪ್ರದೇಶಗಳ ಸಂಪರ್ಕ ಸುಧಾರಣೆ, ಅಂತಾರಾಷ್ಟ್ರೀಯ ಹೆದ್ದಾರಿಗಳ ಸುಧಾರಣೆ, ಬಂದರು ಮತ್ತು ಕರಾವಳಿ ಸಂಪರ್ಕ, ಪ್ರಮುಖ ಆರ್ಥಿಕ ಮತ್ತು ವಾಣಿಜ್ಯ ಕೇಂದ್ರಗಳನ್ನು ಸಂಪರ್ಕಿಸುವ ಹೈವೇ ಕಾರಿಡಾರ್‌ಗಳು ಮತ್ತು ಕನಿಷ್ಠ 800 ಕಿ.ಮೀ ಉದ್ದದ ಎಕ್ಸ್'ಪ್ರೆಸ್‌'ವೇ ಇದರಲ್ಲಿ ಸೇರಿದೆ. ಪ್ರಮುಖ ಕಾರಿಡಾರ್‌ಗಳಲ್ಲಿ ಸಾರಿಗೆಯ ವೇಗ ಹೆಚ್ಚಿಸುವುದಕ್ಕಾಗಿ ಎರಡು ಕೇಂದ್ರಗಳ ನಡುವೆ ಏಕರೂಪದ ಚತುಷ್ಪಥ ಹೆದ್ದಾರಿಗಳನ್ನು ನಿರ್ಮಿಸುವುದೂ ಇದರಲ್ಲಿ ಸೇರಿದೆ. ಸರಕು ಸಾಗಣೆ ವಾಹನಗಳ ವೇಗದ ಚಾಲನೆಗೆ ಅನುಕೂಲವಾಗುವಂತೆ ಈ ಕಾರಿಡಾರ್‌ಗಳು ನಿರ್ಮಾಣಗೊಳ್ಳಲಿವೆ.